»   » ಕನ್ನಡ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅಸ್ವಸ್ಥ

ಕನ್ನಡ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅಸ್ವಸ್ಥ

Subscribe to Filmibeat Kannada
KS Ashwath hospitalised
ಕನ್ನಡದ ಹಿರಿಯ ಚಿತ್ರನಟ ಕೆ.ಎಸ್. ಅಶ್ವತ್ಥ್(85) ಅವರು ತೀವ್ರವಾಗಿ ಅಸ್ವಸ್ಥರಾಗಿದ್ದು ಮೈಸೂರಿನ ಬಸಪ್ಪ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಅವರ ಅವರ ಆರೋಗ್ಯ ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಮೆದುಳಿಗೆ ರಕ್ತ ಪೂರೈಕೆ ನಿಧಾನಗೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ. ಅಶ್ವತ್ಥ್ ಅವರ ಮಗ ಶಂಕರ್ ಅಶ್ವಥ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಅಶ್ವತ್ಥ್ ಅವರು ಯಾರನ್ನು ಗುರುತಿಸುತ್ತಿಲ್ಲ. ಕಿವಿಬಳಿ ಮಾತನಾಡಿದರೆ ಮಾತ್ರ ಒಂಚೂರು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಅಶ್ವತ್ಥ್ ಅವರು ಅನಾರೋಗ್ಯದಿಂದ ಬಳಸುತ್ತಿದ್ದರು. ಹಾಗಾಗಿ ಇತ್ತೀಚೆಗೆ ಅವರು ಯಾವುದೇ ಚಿತ್ರಗಳಲ್ಲಿ ಅಭಿನಯಿಸುತ್ತಿರಲಿಲ್ಲ. ಮೈಸೂರಿನ ಸರಸ್ವತಿಪುರಂನ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಆಗಾಗ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಬಸಪ್ಪ ಸ್ಮಾರಕ ಆಸ್ಪತ್ರೆಯ ಹೃದಯ ತಜ್ಞ ಡಾ.ಜನಾರ್ದನ ಅವರು ಅಶ್ವತ್ಥ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರು ನಿಧನರಾದಾಗ ಅಶ್ವತ್ಥ್ ಅವರು ಮಾನಸಿಕವಾಗಿ ಬಹಳಷ್ಟು ನೊಂದುಕೊಂಡಿದ್ದರು. ಇದೇ ಯೋಚನೆಯಲ್ಲಿ ಆ ಹಿರಿಯ ಜೀವ ಮಂಕಾಗಿ ಹೋಗಿದ್ದರು.

ಈ ನಡುವೆ ಅಶ್ವತ್ಥ್ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ರಾಜ್ಯ ಸರಕಾರ ಮುಂದೆ ಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ರು.1 ಲಕ್ಷ ನೆರವು ನೀಡಲು ಮುಂದಾಗಿದ್ದಾರೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಜಯಮಾಲಾ ಹಾರೈಸಿದ್ದಾರೆ.

ಇತ್ತೀಚೆಗಷ್ಟೆ ಅಶ್ವತ್ಥ್ ಅವರು ಕಾಶಿ ವಿಶ್ವನಾಥನ ದರ್ಶನ ಮಾಡಿಕೊಂಡು ಬಂದಿದ್ದರು. ವೀಲ್ ಚೇರ್ ನಲ್ಲಿ ಕುಳಿತು ಕಾಶಿ, ಅಲ್ಲಿನ ಗಂಗಾ ಘಾಟ್ ಗಳನ್ನು ನೋಡಿ ಅಶ್ವತ್ಥ್ ಆನಂದಿಸಿದ್ದರು. ಕಾಶಿಯಿಂದ ಹಿಂತಿರುಗಿದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು ಎನ್ನುತ್ತಾರೆ ಅಶ್ವಥ್ ಅವರ ಸೊಸೆ ಸುಧಾ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada