»   »  ಶಿವಣ್ಣನ ಗುಣಗಾನ ಮಾಡಿದ ತಂಗ್ಯವ್ವ ಮೀರಾ!

ಶಿವಣ್ಣನ ಗುಣಗಾನ ಮಾಡಿದ ತಂಗ್ಯವ್ವ ಮೀರಾ!

By: * ಜಯಂತಿ
Subscribe to Filmibeat Kannada

ದೇವರು ಕೊಟ್ಟ ತಂಗಿ ಚಿತ್ರದ ಚಿತ್ರೀಕರಣ ನೋಡಲಿಕ್ಕೆ ರಾಕ್‌ಲೈನ್ ಸ್ಟುಡಿಯೋಗೆ ಹೋದ ಪತ್ರಕರ್ತರ ಅಜೆಂಡಾದಲ್ಲಿ ನಟಿ ಮೀರಾ ಜಾಸ್ಮಿನ್ ಅವರನ್ನು ಮಾತನಾಡಿಸುವ ಕಾರ್ಯಕ್ರಮವಿರಲಿಲ್ಲ. ಮಾಹಿತಿಯಿದ್ದುದು ಸಾಹಿಪ್ರಕಾಶ್ ಹುಟ್ಟುಹಬ್ಬದ್ದು ಮಾತ್ರ.

ಸಾಯಿಪ್ರಕಾಶ್ ಕೇಕ್ ಕತ್ತರಿಸಿದ್ದಾಯಿತು. ಫಾರ್ ಎ ಚೇಂಜ್ ಎನ್ನುವಂತೆ ಮಚ್ಚು-ಲಾಂಗು ಬದಿಗಿಟ್ಟ ಶಿವರಾಜ್‌ಕುಮಾರ್ ಗೋಪಾಲಕನ ಗೆಟಪ್ಪಿನಲ್ಲಿ ಕೊಟ್ಟಿಗೆಯಲ್ಲಿದ್ದರು. ಅವರ ಕಷ್ಟಸುಖವನ್ನೂ ಕೇಳಿದ್ದಾಯಿತು. ಆಗ ಬಂದದ್ದು ತಂಗಿಯ ಮಾತು.

ಮುತ್ತಿನಂಥ ತಂಗಿ ಎಂದರು ಶಿವಣ್ಣ. ಅವರೊಂದಿಗೆ ಅಭಿನಯಿಸುವುದೇ ಖುಷಿ. ಚಿತ್ರೀಕರಣ ಎನ್ನುವುದನ್ನು ಮರೆತು ನಿಜವಾದ ಅಣ್ಣನ ಸುಖ ಅನುಭವಿಸುತ್ತಿದ್ದೇನೆ ಎಂದರು ಶಿವಣ್ಣ. ಹ್ಯಾಟ್ರಿಕ್ ಹೀರೊನಿಂದ ಅಷ್ಟೆಲ್ಲ ಹೊಗಳಿಸಿಕೊಂಡ ತಂಗ್ಯಮ್ಮನನ್ನು ಮಾತನಾಡಿಸದಿದ್ದರೆ ಹೇಗೆ?

ಮೀರಾ ಜಾಸ್ಮಿನ್ ಬಡಪೆಟ್ಟಿಗೆ ಪತ್ರಕರ್ತರ ಎದುರು ಕೂರಲಿಲ್ಲ. ಆಕೆಗೆ ಪತ್ರಿಕಾಗೋಷ್ಠಿಗಳೆಂದರೆ ಒಂಥರಾ ಅಂತೆ. ಈ ಮೊದಲು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದಾಗಲೂ ಈ ಮಲೆಯಾಳಿ ಚೆಲುವೆ ಪತ್ರಕರ್ತರ ಎದುರು ಬಂದಿರಲಿಲ್ಲ. ಇಂಥ ಗೌರಮ್ಮನನ್ನು ನಿರ್ದೇಶಕರು ಬಲವಂತವಾಗಿ ಕರಕೊಂಡು ಬಂದು ಪತ್ರಕರ್ತರ ಎದುರು ಕೂರಿಸಿದರು. ಹಾಗೆ ಮಾತಿಗೆ ಕೂರುವ ಮುನ್ನ ಮೀರಾ ಷರತ್ತೊಂದನ್ನು ಒಡ್ಡಿದ್ದರು. ಮಾತೇನಿದ್ದರೂ ಸಿನಿಮಾಕ್ಕೆ ಸಂಬಂಧಿಸಿದಂತೆ ಮಾತ್ರವಿರಬೇಕು. ಸ್ವಂತ ವಿಷಯದ ಬಗ್ಗೆ ಯಾರೂ ಕೆದಕಬಾರದು.

ಶಿವರಾಜ್ ತಂಗಿಯನ್ನು ಹೊಗಳಿದ್ದರು. ಅದಕ್ಕೆ ಪ್ರತಿಯೆಂಬಂತೆ ಮೀರಾ ಅಣ್ಣನ ಗುಣಗಾನದಲ್ಲಿ ತೊಡಗಿದರು. ಶಿವಣ್ಣನಂಥ ದೊಡ್ಡ ನಟನ ಜೊತೆ ಅಭಿನಯಿಸುತ್ತಿರುವುದು ಖುಷಿಯ ಸಂಗತಿ. ಅವರು ಗುರುಗಳಿದ್ದಂತೆ. ಈ ಗುರುಗಳ ಮಾತನ್ನು ಹೊಸಬರು ಪಾಲಿಸಿದರೆ ಉದ್ಯಮದಲ್ಲಿ ಅವರಿಗೆ ದೀರ್ಘಾಯುಷ್ಯ ಕಟ್ಟಿಟ್ಟ ಬುತ್ತಿ ಎಂದರು. ಅಲ್ಲಿಗೆ ಮೀರಾ ಮಾತಿಗೆ ಶುಭಂ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada