»   »  ಉಪೇಂದ್ರ ಸಿನಿಮಾಗಳನ್ನು ಕೊಳ್ಳೋರಿಲ್ಲ!

ಉಪೇಂದ್ರ ಸಿನಿಮಾಗಳನ್ನು ಕೊಳ್ಳೋರಿಲ್ಲ!

Posted By: *ಜಯಂತಿ
Subscribe to Filmibeat Kannada

ಉಪೇಂದ್ರ ಚಿತ್ರಗಳಿಗೆ ಮಾರುಕಟ್ಟೆ ಬ್ದಿದುಹೋಗಿದೆ ಎನ್ನುತ್ತಿದೆ ಗಾಂಧಿನಗರ. 'ರಜನಿ" ಚಿತ್ರವನ್ನು ನಿರ್ಮಾಪಕ ರಾಮು ಸೇಲಿಗಿಟ್ಟರೂ ಯಾರು ಮೂಸಿನೋಡಲಿಲ್ಲ. ಅದಕ್ಕೇ ಈಗ ಅವರೇ ಚಿತ್ರವನ್ನು ಈ ವಾರ ಬಿಡುಗಡೆ ಮಾಡುತ್ತಿದ್ದಾರೆ.

'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್"ಗೆ ಆಗಿರುವ ಗತಿಯೂ ಇದೇ. ಐಡಿಬಿಐ ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರವನ್ನು ಯಾರಾದರೂ ವಿತರಕರು ಕೊಂಡರಷ್ಟೇ ನೆಮ್ಮದಿಯ ನಿಟ್ಟುಸಿರಿಡಲು ಸಾಧ್ಯ. ಆದರೆ, ನಾಲ್ಕು ತಿಂಗಳಿಂದ ವ್ಯಾಪಾರ ಕುದುರಿಸಲು ಅವರಿಗೆ ಸಾಧ್ಯವಾಗಿಲ್ಲ.

'ದುಬೈ ಬಾಬು" ಚಿತ್ರ ಮಕಾಡೆಯಾದದ್ದರ ಫಲ- ನಿರ್ಮಾಪಕ ಶೈಲೇಂದ್ರ ಬಾಬು ಅವರಿಗೆ ಮೂರೂಮುಕ್ಕಾಲು ಕೋಟಿ ಲುಕ್ಸಾನು. ಅದು ಹಾಗೂ ಹಿಂದಿನ ಅನೇಕ ಉಪೇಂದ್ರ ಚಿತ್ರಗಳ ಸೋಲು ಅವರ ಚಿತ್ರಗಳಿಗೆ ಮಾರುಕಟ್ಟೆಯೇ ಇಲ್ಲವೆಂಬ ಪರಿಸ್ಥಿತಿ ಹುಟ್ಟುಹಾಕಿದೆ. ಕೊಳ್ಳಲು ಮುಂದೆ ಬಂದರೂ ಕೇಳುವ ಬೆಲೆಗೂ ಚಿತ್ರದ ವೆಚ್ಚಕ್ಕೂ ಸ್ವಲ್ಪವೂ ತಾಳೆಯಾಗುವುದಿಲ್ಲ.

ಹೀಗಿದ್ದೂ ಉಪೇಂದ್ರ ಮಾತ್ರ ತಮ್ಮ ಸಂಭಾವನೆಯಲ್ಲಿ ಚಿಕ್ಕಾಸೂ ಇಳಿಸಿಲ್ಲ. ಈ ವರ್ಷದೊಳಗೆ ಹೊಸ ಚಿತ್ರದ ನಿರ್ದೇಶಿಸಲಿರುವ ಉಪೇಂದ್ರ ಆ ಬಗ್ಗೆ ಮಾತ್ರ ಕುತೂಹಲ ಮೂಡಿಸಿದ್ದಾರೆ. ಈಗ ಎದ್ದಿರುವ ಪ್ರಶ್ನೆಗಳಿಗೆ ಆ ಚಿತ್ರವೇ ಉತ್ತರವಾಗಲಿದೆ ಎಂಬುದಂತೂ ಸತ್ಯ. ಹಾಲಿವುಡ್, ಮಸ್ತಿಯಂಥ ಚಿತ್ರಗಳ ಮೂಲಕ ದೊಡ್ಡ ಪೆಟ್ಟು ತಿಂದಿರುವ ರಾಮು 'ರಜನಿ" ಮೂಲಕವಾದರೂ ಸೇಫ್ ಆಗುತ್ತಾರಾ ಎಂಬುದು ಸದ್ಯದ ಇನ್ನೊಂದು ಕುತೂಹಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada