»   » ಪ್ರಭುದೇವಾಗೆ ಕನ್ನಡ ಸಿನ್ಮಾ ಮಾಡುವಾಸೆ!

ಪ್ರಭುದೇವಾಗೆ ಕನ್ನಡ ಸಿನ್ಮಾ ಮಾಡುವಾಸೆ!

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಕುರುಚಲು ಗಡ್ಡ. ನಗುವಿನ ಮೀಮಾಂಸೆಗೆ ಮತ್ತಷ್ಟು ಪುಷ್ಟಿ ನೀಡುವ ಮೀಸೆ. ದಾಳಿಂಬೆ ಬೀಜಕ್ಕೆ ಬಿಳೀ ಬಣ್ಣ ಬಳಿದಿಟ್ಟಂತಿರುವ ದಂತಪಂಕ್ತಿಗಳು. ಕುಣಿಯಲು ನಿಂತರೆ ಅವರ ಮಾತನ್ನೇ ಕೇಳದ ಕೈ ಕಾಲುಗಳು. ರೊಬೊಟ್ ಥರ ರಿಮ್ ಜಿಮ್ ಎನ್ನುವ ಕುತ್ತಿಗೆ. ನೆಲವನ್ನೇ ನಾಚಿಸಿ, ಬೆಚ್ಚಿ ಬೀಳಿಸುವಂಥ ಕುಣಿತ...

ಇಂತಿಪ್ಪ ಪ್ರಭುದೇವ ಮೊದಲ ಬಾರಿಗೆ ಕಿರುತೆರೆ ವಾಹಿನಿಗೆ ಬಂದಿದ್ದರು. ಆ ಮೂಲಕ Down to earth ಎಂಬ ಪದಕ್ಕೆ ಹೊಸ ಅರ್ಥ ಕೊಟ್ಟಿದ್ದರು. ಅರಮನೆ ಮೈದಾನದಲ್ಲಿ ಮೊನ್ನೆ ನಡೆದ ಡ್ಯಾನ್ಸ್ ಕಾರ್ಯಕ್ರಮ 'ಸೈ"(ಸುವರ್ಣ) ಜಡ್ಜ್ ಸ್ಥಾನ ಅಲಂಕರಿಸಿದ್ದರು...

ಮೂಲತಃ ಮೈಸೂರಿನವರಾದ ಪ್ರಭುದೇವಾ ಇಂದು ವಿಶ್ವಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ರಾಷ್ಟ್ರಕ್ಕೆ ಒಬ್ಬನೇ ಮೈಕಲ್ ಆದರೆ ದೇಶಕ್ಕೆ ಒಬ್ಬನೇ ಪ್ರಭುದೇವ ಎನ್ನುವುದು ಈಗಾಗಲೇ ಪ್ರೂವ್ ಆಗಿದೆ. ಕನ್ನಡ ಮೂಲದ ಬೇರು ಭಾರತದಾದ್ಯಂತ ಕಾಂಡವಾಗಿ ಬೆಳೆದುನಿಂತಿದೆ. ತೆಲುಗಿನ 'ನುವ್ವು ವಸ್ತಾನಂಟೆ ನೇನೊದ್ದಂಟಾನ" ಚಿತ್ರದ ಮೂಲಕ ನಿರ್ದೇಶಕನ ಪಟ್ಟವೇರಿದರು. ಅದು ತೆಲುಗುದೇಶಂನಲ್ಲಿ ಮೆಗಾ ಡ್ಯಾನ್ಸ್ ಹಿಟ್ ಸಿನಿಮಾ ಎನಿಸಿಕೊಂಡಿತು.

ತಮಿಳಿನ 'ಪೋಕಿರಿ" ಚಿತ್ರವನ್ನು ನಿರ್ದೇಶಿಸಿ, ಅಲ್ಲಿಯೂ 'ಸೈ" ಎನಿಸಿಕೊಂಡರು. ಅಲ್ಲಿಂದ ಹಿಂದಿಯಲ್ಲಿ ಸಲ್ಮಾನ್ ಜತೆ 'ವಾಂಟೆಡ್" ಚಿತ್ರಕ್ಕೆ ಕ್ಯಾಮೆರಾ ಹಿಡಿದರು. ಅದು ಅಲ್ಲಿಯೂ ಸೂಪರ್ ಡೂಪರ್... ರಜನಿಕಾಂತ್, ಕಮಲಹಾಸನ್ ಮೊದಲಾದ ದಿಗ್ಗಜರ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭು, ಕನ್ನಡದ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಉಪ್ಪಿ ಜತೆ ಹೆಚ್ ಟುಒ, ತಮ್ಮಂದಿರಾದ ರಾಜು, ರಾಮ್ ಪ್ರಸಾದ್ ಜತೆ 123ಯಲ್ಲಿ ಅಂಧನ ಪಾತ್ರ ಮಾಡಿದ್ದರು.

'ಮನಸೆಲ್ಲಾನೀನೆ' ಚಿತ್ರದಲ್ಲಿ ಸ್ನೇಹಪೂರ್ವಕವಾಗಿ ಕಾಣಿಸಿಕೊಂಡಿದ್ದರು.ಸೈ ಕಾರ್ಯಕ್ರಮದ ಮಧ್ಯೆ ಒಂದು ನಿಮಿಷ ಮಾತಿಗೆ ಸಿಕ್ಕಿದ್ದರು. ನಾವು ಕೇಳಿದ ಪ್ರಶ್ನೆ: ದೇಶದ ನಾನಾ ಭಾಷೆಗಳಲ್ಲಿ ನಟಿಸಿದ್ದೀರಿ, ನಿರ್ದೇಶನ ಮಾಡಿದ್ದೀರಿ. ಆದರೆ ಕನ್ನಡಿಗನಾಗಿ ಕನ್ನಡದಲ್ಲಿ ಏಕೆ ಒಂದು ಸಿನಿಮಾಕ್ಕೆ ನಿರ್ದೇಶನ ಮಾಡಬಾರದು?

ಪ್ರಭು ಕೊಟ್ಟ ಉತ್ತರ: ನನಗೆ ಶಾನೇ ಆಸೆ ಇದೆ. ಬಟ್, ಯಾರಾದ್ರೂ ಕರೆದು ಅವಕಾಶ ಗೊಡ್ತಾರಾ ಅಂತ ಕಾಯ್ತಾ ಇದೀನಿ. ಒಳ್ಳೆ ಆಫರ್ ಇದ್ರೆ ಖಂಡಿತ ಡೈರೆಕ್ಟ್ ಮಾಡ್ತೀನಿ. ನಮ್ಮ ತಂದೆ ಮೂಗೂರು ಸುಂದರ್ ಅವ್ರಿಗೂ ನಾನು ಕನ್ನಡ ಸಿನ್ಮಾ ಮಾಡ್ಬೇಕು ಅಂತ ಶಾನೆ ಆಸೆ ಇದೆ. ಗ್ಯಾರಂಟಿ ಮಾಡ್ತೀನಿ. ಕನ್ನಡದವನಾಗಿ, ಅದೂ ಮೈಸೂರಿನವನಾಗಿ ಅಷ್ಟೂ ಮಾಡದಿದ್ದರೆ ಹೇಗೆ?!

ಪ್ರಭು ಬೀಟ್...
ಮಾತುಮಾತಿಗೆ ಶಾನೆ ಶಾನೆ... ಅಂತಾರೆ.ಯಾರು ಏನೇ ಹೇಳಿದ್ರೂ 'ಓಕೆ... ಓಕೆ" ಎಂದು ಬಲಗೈ ಹೆಬ್ಬೆಟ್ಟು ತೋರಿಸುತ್ತಾರೆ. ಮಾತಿಗೆ ಮುನ್ನ ನಾನು ಕನ್ನಡಿಗ ನಾನು ಮೈಸೂರಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ! ನೀವು(ಅಭಿಮಾನಿಗಳು, ಬೆಂಗಳೂರಿಗರು) ಕೇಳೋದು ಹೆಚ್ಚಾ ನಾನು ಡ್ಯಾನ್ಸ್ ಮಾಡೋದು ಹೆಚ್ಚಾ ಎಂದು ಹೆಜ್ಜೆ ಹಾಕಲು ಶುರುಮಾಡುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada