»   » ಪುನೀತ್ ಗೆ ಅಭಿಮಾನಿಗಳ ಹುಟ್ಟುಹಬ್ಬದ 'ಅಪ್ಪು'ಗೆ

ಪುನೀತ್ ಗೆ ಅಭಿಮಾನಿಗಳ ಹುಟ್ಟುಹಬ್ಬದ 'ಅಪ್ಪು'ಗೆ

Posted By:
Subscribe to Filmibeat Kannada

ಪವರ್ ಫುಲ್ ಅಭಿನಯದ ಮೂಲಕ ಕರ್ನಾಟಕದ ಜನತೆಯ ಮನಗೆದ್ದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ನಿವಾಸದಲ್ಲಿ 35ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಬಾಲ ನಟನೆಯಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಚಿತ್ರಪ್ರಿಯರನ್ನು ಸೂಜಿಯಂತೆ ಸೆಳೆದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಗಂಗಾನಗರದಲ್ಲಿರುವ ನಿವಾಸದಲ್ಲಿ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಸದ್ಯಕ್ಕೆ ನಂಬರ್ 1 ಪಟ್ಟವೇರಿರುವ ಅಪ್ಪು ಅವರ ಅಭಿಮಾನಿಗಳ ಸಾಗರವೇ ಅವರ ಮನೆ ಮುಂದೆ ಸೇರಿತ್ತು. ತುಮಕೂರು, ಶಿರಾ, ಹೊಸಪೇಟೆ ಮುಂತಾದ ಪ್ರದೇಶಗಳಿಂದ ಬಂದಿದ್ದ ಅಭಿಮಾನಿಗಳು ಪುನೀತ್ ಅವರನ್ನು ಹಾರೈಸಿದರು.

ರಾಜ್ ಮತ್ತು ರಾಮ್ ಚಿತ್ರಗಳ ಸಾಮಾನ್ಯ ಯಶಸ್ಸಿನ ನಂತರ ದುನಿಯಾ ಖ್ಯಾತಿಯ ಸೂರಿ ಜತೆ ಕೈಜೋಡಿಸಿರುವ ಪುನೀತ್ ಜಾಕಿ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ. ಮಲಯಾಳಂ ನಟಿ ಭಾವನಾ ಈ ಚಿತ್ರದಲ್ಲಿ ನಟಿಸುತ್ತಿದ್ದು ಅಭಿಮಾನಿಗಳು ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ವನಂತ ಗೀತಾ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿರಿಸಿದ್ದ ಪುನೀತ್, ಬೆಟ್ಟದ ಹೂವು ಚಿತ್ರದಲ್ಲಿನ ಮನೋಜ್ಞ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ಗಳಿಸಿದರು. ಸುಮಾರು 12 ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ ನಂತರ ಅಭಿನಯಕ್ಕೆ ಅಲ್ಪವಿರಾಮ ಹಾಕಿದ್ದ ಪುನೀತ್ ನಾಯಕ ನಟನಾಗಿ ಮರುಪ್ರವೇಶ ಮಾಡಿದ್ದು ಅಪ್ಪು ಚಿತ್ರದ ಮುಖಾಂತರ. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಮಿಲನ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನೂ ಮಡಿಲಿಗಿಳಿಕೊಂಡಿದ್ದಾರೆ.

ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುನೀತ್ ರಾಜಕುಮಾರ್ ಅವರು ಯುವ ರಾಯಭಾರಿಯಾಗಿ ಭಾಗವಹಿಸಲಿದ್ದಾರೆ.

ಪುನೀತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada