»   »  ವೆಂಕಟ ಇನ್ ಸಂಕಟ, ಈ ಸಂಭಾಷಣೆ ಜತೆ ತಬ್ಬಲಿ

ವೆಂಕಟ ಇನ್ ಸಂಕಟ, ಈ ಸಂಭಾಷಣೆ ಜತೆ ತಬ್ಬಲಿ

Posted By:
Subscribe to Filmibeat Kannada
ವೆಂಕಟ ಇನ್ ಸಂಕಟ
ರಾಮ, ಶ್ಯಾಮ ಭಾಮ, ಸತ್ಯವಾನ್ ಸಾವಿತ್ರಿ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ರಮೇಶ್‌ ಅರವಿಂದ್ ನಿರ್ದೇಶನದ ಮತ್ತೊಂದು ಚಿತ್ರ 'ವೆಂಕಟ ಇನ್ ಸಂಕಟ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ನಿರ್ದೇಶಕ ರಮೇಶ್‌ಅರವಿಂದ್ ನಾಯಕನಾಗಿ ಅಭಿನಯಿಸಿದ್ದಾರೆ. ಶರ್ಮಿಳಾಮಾಂಡ್ರೆ, ಮೇಘನಮುಡಿಯನ್ ಹಾಗೂ ಅನುಶಾ ವೆಂಕಟನ ನಾಯಕಿಯರಾಗಿದ್ದಾರೆ. ಬಿಸಿಲಿನ ಬೇಗೆಗೆ ತಂಪು ಪಾನೀಯದಂತೆ ನಮ್ಮ ವೆಂಕಟ ಬೇಸತ್ತ ಹೃದಯಗಳಿಗೆ ಪರಿಶುದ್ದ ಹಾಸ್ಯದ ಮುದ ನೀಡಲಿದ್ದಾನೆ.

ಹಿರಿಯ ನಟ ಎಂ.ಎಸ್.ಉಮೇಶ್ ಅವರ ವೆಂಕಮ್ಮಜ್ಜಿ ಪಾತ್ರವಂತೂ ಚಿತ್ರದಲ್ಲಿ ಸೊಗಸಾಗಿ ಮೂಡಿಬಂದಿದ್ದು ಈ ಪಾತ್ರ ಉಮೇಶ್ ಅವರ ಉತ್ತಮ ಅಭಿನಯಕ್ಕೆ ಕನ್ನಡಿ ಹಿಡಿದಂತಿದೆ ಎಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ತಮ್ಮ ಅಮೋಘ ಅಭಿನಯದಿಂದ ಮಂಗಳೂರು ರಂಗಭೂಮಿಯಲ್ಲಿ ಹೆಸರಾಗಿದ್ದ ದೇವದಾಸ್‌ಕಪ್ಪಿಕಡ್ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದಾರೆ.

ನರೇನ್ ಮಗಲಾನಿ ಅವರು ಸಿನಿಮಾಹೌಸ್ ಲಾಂಛನದಲ್ಲಿ ನಿರ್ಮಿಸಿರುವ 'ವೆಂಕಟ ಇನ್ ಸಂಕಟ' ಚಿತ್ರಕ್ಕೆ ರವಿಜೋಷಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ರಿಕ್ಕಿಕೇಜ್ ಸಂಗೀತ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ನಂದ ಸಂಭಾಷಣೆ, ಎ.ಎನ್.ಮೂರ್ತಿ, ರವಿವರ್ಮ ಸಾಹಸ, ಮದನ್ ಹರಿಣಿ ನೃತ್ಯ, ಬಾಲಾಜಿಮನೋಹರ್, ಧನಂಜಯ ಬಾಲಾಜಿ ಸಹನಿರ್ದೇಶನ, ರಮೇಶ್‌ದೇಸಾಯಿ ಕಲೆ, ಟಿ.ಎನ್.ಎಲ್.ಶಾಸ್ತ್ರಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್‌ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನ ಮುಡಿಯನ್, ಅನುಶಾ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಪ್ಪಿಕಡ್, ಎಂ.ಎಸ್.ಉಮೇಶ್ ಮುಂತಾದವರು ನಕ್ಕು ನಗಿಸಲು ಬರುತ್ತಿದ್ದಾರೆ.

ಈ ಸಂಭಾಷಣೆ
ಸುಂದರ ಗೀತೆಗಳ ಪದವೊಂದನ್ನು ಶೀರ್ಷಿಕೆಯಾಗಿಸುವ ಪರಿಪಾಠ ಕನ್ನಡದಲ್ಲಿ ಹಿಂದಿನಿಂದ ಬಂದಿದೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ನಿರ್ದೇಶನದ 'ಧರ್ಮಸೆರೆ' ಚಿತ್ರದ 'ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ' ಗೀತೆಯಿಂದ ಪ್ರೇರಿತರಾದ ನಿರ್ಮಾಪಕ ಶ್ರೀನಿವಾಸ್‌ಪೂಜಾರ್ ತಮ್ಮ ಚಿತ್ರಕ್ಕೆ 'ಈ ಸಂಭಾಷಣೆ' ಎಂದು ನಾಮಕರಣ ಮಾಡಿದರು. ಸುಂದರ ಶೀರ್ಷಿಕೆಯ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪರಿಸರದ ಸೊಬಗು ಆಹ್ಲಾದಕರ ತಾಣಗಳ ತವರಾಗಿರುವ ಮಡಿಕೇರಿ ಹಾಗೂ ಅನೇಕ ಪುಣ್ಯಕ್ಷೆತ್ರಗಳ ನೆಲದಲ್ಲಿ ಚಿತ್ರೀಕೃತವಾಗಿರುವ 'ಈ ಸಂಭಾಷಣೆ'ಯಲ್ಲಿ ಸಂದೇಶ್ ಹಾಗೂ ಹರಿಪ್ರಿಯ ನಾಯಕ-ನಾಯಕಿಯರಾಗಿ ಅಭಿನಯಿಸಿದ್ದಾರೆ.

ಮೇಜರ್ ಶ್ರೀನಿವಾಸ ಪೂಜಾರ್ ಹಾಗೂ ಜ್ಯೋತಿ ಬಸವರಾಜ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ರಾಜಶೇಖರ್ ಅವರು ಪ್ರಥಮ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಇಮ್ರಾನ್, ಮದನ್‌ಹರಿಣಿ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಹೀಗೆ ದೊಡ್ಡ ತಾರಾಗಣವೇ ಇದೆ.

ತಬ್ಬಲಿ
ಎನ್.ಲೋಕಿ ನಿರ್ದೇಶಿಸುತ್ತಿರುವ ತಬ್ಬಲಿ ಚಿತ್ರವೂ ಈ ವಾರ ತೆರೆಕಾಣುತ್ತಿದೆ. ಹಿರಿಯ ಪೋಷಕ ನಟ ಸತ್ಯಜಿತ್ ಮಗ ತಬ್ಬಲಿಯ ನಾಯಕ ನಟ. ಇತ್ತೀಚೆಗೆ ನಿಧನರಾದ ಭರತ್ ಭಾಗವತರ್ ಮಗಳು ಮೇಘನಾ ಈ ಚಿತ್ರದ ನಾಯಕಿ. ಇದು ಮೇಘನಾರ ಮೊದಲ ನಾಯಕಿ ಪಾತ್ರ. ಒಟ್ಟಿನಲ್ಲಿ ಮೂರು ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವ ಸಂಪ್ರದಾಯ ಈ ವಾರವೂ ಮುಂದುವರಿದಿದೆ. ಈ ಮೂರು ಚಿತ್ರಗಳ ಭವಿಷ್ಯ ಈ ವಾರ ನಿರ್ಧಾರವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ವೆಂಕಟ ಇನ್ ಸಂಕಟನಿಗೆ ನೂರಾರು ಸಂಭ್ರಮ
ಗ್ಯಾಲರಿಯಲ್ಲಿ ವೆಂಕಟ ಇನ್ ಸಂಕಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada