»   »  ರು.22 ಲಕ್ಷದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ

ರು.22 ಲಕ್ಷದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ದಾಖಲೆ ಗಾತ್ರದ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಅಣ್ಣಾವ್ರ 13 ಅಡಿ ಎತ್ತರ ಮತ್ತ್ತು ಬರೋಬ್ಬ್ಬರಿ 2,000 ಕೆಜಿ ತೂಗುವ ಕಸ್ತೂರಿ ನಿವಾಸ ಮಾದರಿಯ ತಾಮ್ರದ ಪುತ್ಥಳಿ ಬೆಂಗಳೂರು ಪುರಭವನದ ಮುಂದೆ ಎದ್ದು ನಿಲ್ಲಲಿದೆ.

1970ರಲ್ಲಿ ಅಣ್ಣಾವ್ರು ನಟಿಸಿದ್ದ 'ಕಸ್ತೂರಿ ನಿವಾಸ' ಚಿತ್ರದ ಭಂಗಿಯಲ್ಲಿ ಈ ಪುತ್ತಳಿಯನ್ನು ನಿರ್ಮಿಸಲಾಗಿದೆ. ಭುಜದ ಮೇಲೆ ಪಾರಿವಾಳ ಕುಳಿತ ಮಾದರಿಯಅಣ್ಣಾವ್ರ ಪ್ರತಿಮೆಯನ್ನು ನಿರ್ಮಿಸಲು ರು.22 ಲಕ್ಷ ಖರ್ಚು ಮಾಡಲಾಗಿದೆ. ಎರಡು ವರ್ಷಗಳಷ್ಟು ತಡವಾಗಿ ರಾಜ್ ಪ್ರತಿಮೆ ಅನಾವಣಗೊಳ್ಳುತ್ತಿದೆ.

ಆರಂಭದಲ್ಲಿ ರು.13 ಲಕ್ಷದಲ್ಲಿ ಪ್ರತಿಮೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಎರಡು ವರ್ಷ ತಡವಾದ ಕಾರಣ ಖರ್ಚು ರು.22 ಲಕ್ಷಕ್ಕೆ ಮುಟ್ಟಿದೆ ಎನ್ನುತ್ತಾರೆ ಪ್ರತಿಮೆ ಸಿದ್ಧಪಡಿಸಿದ ನಾಗರಾಜ್ ಆಚಾರ್. ಈಗ ಸಿದ್ಧಗೊಂಡಿರುವ ಪುತ್ತಳಿಯನ್ನು ರಾಜ್ ಕುಟುಂಬ ಅಂಗೀಕರಿಸಿದ್ದು ಶೀಘ್ರದಲ್ಲೇ ರಾಜ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ರಾಜ್ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ , ಪೂರ್ಣವಾದ ಕೂಡಲೆ ಪ್ರತಿಷ್ಠಾಪಿಸಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ಪುತ್ತಳಿ ಅನಾವರಣದ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಆರ್ ಅಶೋಕ್ ಹೇಳಿದರು.

ಹಣ ಪಾವತಿ ಮಾಡಲು ಸರಕಾರ ಸುದೀರ್ಘ ಸಮಯ ತೆಗೆದುಕೊಂಡಿತು. ಇದರಿಂದ ಶಿಲ್ಪಿ ನಾಗರಾಜ ಆಚಾರ್ ಸಾಲದ ಸಂಕಷ್ಟಕ್ಕೆ ಸಿಲುಕಬೇಕಾಯಿತು. 2007ಕ್ಕೆ ಪ್ರತಿಮೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕಾರಣ ಮಾತಿನ ಪ್ರಕಾರ ನಮಗೆ ಕೊಡಬೇಕಾದ ಹಣ ಕೊಡಲಿಲ್ಲ. ತಾಮ್ರ ಮತ್ತು ಕಬ್ಬಿಣದ ಬೆಲೆ ಏರಿಕೆಯಿಂದ ಪ್ರತಿಮೆಗೆ ಮತ್ತಷ್ಟು ಖರ್ಚಾಯಿತು ಎನ್ನುತ್ತಾರೆ ಆಚಾರ್.

ಸಾಲದಲ್ಲಿ ಸಿಕ್ಕಿಕೊಂಡ ನಾಗರಾಜ್

ಪ್ರತಿಮೆಯನ್ನು ನಿರ್ಮಿಸಲು ವಿಜಯನಗರದ ಆಚಾರ್ ಅವರಿಗೆ ಒಂದು ವರ್ಷದ ಕಾಂಟ್ರಾಕ್ಟ್ ಸಿಕ್ಕಿತ್ತು. ಹನ್ನೆರಡು ತಿಂಗಳಲ್ಲಿ ಪ್ರತಿಮೆಯನ್ನು ಪೂರ್ಣಗೊಳಿಸಲು ಬಿಬಿಎಂಪಿ ತಿಳಿಸಿತ್ತು. ರಾಜ್ ಪ್ರತಿಮೆಯನ್ನು ನವಂಬರ್ 1, 2007ರಲ್ಲಿ ಅನಾವರಣಗೊಳಿಸಲು ನಿರ್ಧರಿಸಲಾಗಿತ್ತು. 1,000 ಕೆಜಿಯಲ್ಲಿ ನಿರ್ಮಿಸಬೇಕಾಗಿದ್ದ ಪ್ರತಿಮೆ 2,000 ಕೆಜಿ ತೂಕದಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು.

ಈ ಹೆಚ್ಚುವರಿ ತೂಕದಿಂದ ನಾಗರಾಜ್ ರು.9 ಲಕ್ಷ ಕೈಯಿಂದ ಕೊಡಬೇಕಾಯಿತು. ಇದಕ್ಕಾಗಿ ಅವರು ಸಾಲ ಮಾಡಬೇಕಾಯಿತು. ಕೆಜಿ ತಾಮ್ರದ ಬೆಲೆ ರು.160 ಇದ್ದದ್ದು ರು.300 ಆಗಿದ್ದೆ ಅವರ ಸಾಲಕ್ಕೆ ಕಾರಣವಾಯಿತು. ಅಷ್ಟು ಹಣವನ್ನು ನಾಗರಾಜ್ ಗೆ ಹಿಂತಿರುಗಿಸುವ ಭರವಸೆಯನ್ನು ಬಿಬಿಎಂಪಿ ಅಧಿಕಾರಿಗಳು ನೀಡಿದ್ದಾರೆ. ನಾಗರಾಜ್ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದು ಬಿಬಿಎಂಪಿ ಆಜ್ಞೆಯ ನಿರೀಕ್ಷೆಯಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada