»   » ಮಗುವನ್ನೇ ಮಾರಿಕೊಂಡ ನಮ್ಮ ಕಲ್ಯಾಣಿ ಶ್ರುತಿ

ಮಗುವನ್ನೇ ಮಾರಿಕೊಂಡ ನಮ್ಮ ಕಲ್ಯಾಣಿ ಶ್ರುತಿ

Posted By:
Subscribe to Filmibeat Kannada

'ನಮ್ಮ ಕಲ್ಯಾಣಿ' ನಟಿ ಶ್ರುತಿಗೆ ಏನು ಕಷ್ಟಗಳೋ ಏನೋ ಗೊತ್ತಿಲ್ಲ. ಆಕೆಯ ತಾಯಿ ಹೃದಯ ಕಲ್ಲಾಗಿದೆ. ತನ್ನ ಮುದ್ದಿನ ಮಗಳನ್ನು ರು.50ಕ್ಕೆ ಮಾರಿಬಿಟ್ಟಿದ್ದಾಳೆ! ಆದರೆ ಇದು ನಿಜವಾಗಿಯೂ ನಡೆದ ಕತೆಯಲ್ಲ. 'ನಮ್ಮ ಕಲ್ಯಾಣಿ' ಚಿತ್ರಕ್ಕಾಗಿ ಶ್ರುತಿ ನಟಿಸಲಿರುವ ಕರುಣಾರಸ ಉಕ್ಕಿಸುವ ಸನ್ನಿವೇಶದ ವಿವರಗಳಿವು. ಈ ಚಿತ್ರವನ್ನು ವಾಸುದೇವ್ ಆಲೂರು ನಿರ್ದೇಶಿಸಲಿದ್ದಾರೆ.

ಸುದೀರ್ಘ ಸಮಯದ ಬಳಿಕ ನಟಿ ಶ್ರುತಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಈ ಬಾರಿ ಅವರು ಕರುಣಾರಸ ಉಕ್ಕಿಸಲು ಕರುಣಾಮಯಿ ತಾಯಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಪಾತ್ರಕ್ಕೆ ಜೀವ ತುಂಬಲು ಶ್ರುತಿ ತನ್ನ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಶ್ರುತಿ ಮಾತನಾಡುತ್ತಾ, ನೆಗಟೀವ್ ಶೇಡ್ ಇರುವ ಪಾತ್ರವಿದು. ಮಗುವನ್ನು ಮಾರಿಕೊಂಡ ಬಳಿಕ ತಾಯ್ತನದ ಮಹತ್ವ ಅರಿವಾಗುತ್ತದೆ. ನನ್ನ ಬದುಕಿಗೆ ತೀರಾ ಹತ್ತಿರವಾದ ಕತೆಯಿದು. ವಾಸುದೇವ ಆಲೂರು ನನ್ನದೇ ಕತೆಯನ್ನು ಕದ್ದಿದ್ದಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ಎಂಟು ವರ್ಷಗಳ ಹಿಂದೆ ಮಲ್ಲೇಶ್ವರಂನ 18ನೇ ಕ್ರಾಸ್ ನಲ್ಲಿ ನವಜಾತ ಶಿಶುವೊಂದನ್ನು ಒಲ್ಲದ ತಾಯಿಯೊಬ್ಬಳು ಬಿಟ್ಟುಹೋಗಿರುತ್ತಾಳೆ. ಶಿಶುವನ್ನು ಇರುವೆಗಳು ಮುತ್ತುತ್ತಿರುತ್ತವೆ. ಆಗ ಕಣ್ಣಾರೆ ಕಂಡ ಈ ಸತ್ಯಕತೆಯನ್ನು ಹಂತ ಹಂತವಾಗಿ ಚಿತ್ರಕತೆಯಾಗಿ ಹೆಣೆದಿದ್ದಾರೆ ವಾಸುದೇವ ಆಲೂರು. ನೈಜಕತೆಗೆ ಕೊಂಚ ಸಿನಿಮೀಯ ಸ್ಪರ್ಶವನ್ನು ಕೊಟ್ಟು ತೆರೆಗೆ ತರುತ್ತಿರುವುದಾಗಿ ಆಲೂರು ತಿಳಿಸಿದ್ದಾರೆ.

ಕ್ಲಾಪ್ ಬಾಯ್ ಆಗಿ ಕನ್ನಡ ಚಿತ್ರರಂಗಕ್ಕೆ ಬಂದ ಆಲೂರು 200ಕ್ಕೂ ಹೆಚ್ಚು ಚಿತ್ರಕತೆಗಳನ್ನು ಬರೆದಿದ್ದಾರೆ. ಹಲವಾರು ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ಇವರು ಸಿನಿಮಾ ಕತೆಗಳನ್ನು ಹೆಣೆದುಕೊಟ್ಟಿದ್ದಾರಂತೆ. ಈ ಹಿಂದೆ ಇವರು ನಿರ್ದೇಶಿಸಿದ್ದ 'ಮರೀಚಿಕೆ' ಚಿತ್ರ ಇವರಿಗೆ ಮರೆಯಲಾಗದ ಅನುಭವಗಳನ್ನು ಕೊಟ್ಟಿದೆಯಂತೆ. ಆರ್ಥಿಕವಾಗಿ ಆಲೂರರನ್ನು ಜರ್ಜರಿತಗೊಳಿಸಿ 'ಮರೀಚಿಕೆ'ಯಾಗಿ ಅವರನ್ನು ಕಾಡುತ್ತಲೇ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada