»   »  ರಾಜಕುಮಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಕೇಕ್!

ರಾಜಕುಮಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಕೇಕ್!

Posted By: * ಜಯಂತಿ
Subscribe to Filmibeat Kannada
Special cake for Rajkumar on his birthday
ಏಪ್ರಿಲ್ 24ರ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅವರಷ್ಟೇ ಎತ್ತರದ ಕೇಕ್ ಪ್ರತಿಮೆ ಮಾಡಿಸುವ ವಿಶಿಷ್ಟ ಕೆಲಸಕ್ಕೆ ಅಭಿಮಾನಿಯೊಬ್ಬರು ಕೈಹಾಕಿದ್ದಾರೆ. ಮೂರು ವರ್ಷಗಳಿಂದ ರಾಜ್ ಹುಟ್ಟುಹಬ್ಬದ ದಿನ ಅವರ ಭಾವಚಿತ್ರ ಪ್ರದರ್ಶನಗಳನ್ನು ಮಾಡುತ್ತಾ ಬಂದಿರುವ ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ಫ್ರೇಮ್ ವರ್ಕ್ಸ್‌ನ ಕುಮಾರ್ ಹಾಗೂ ಸುರೇಶ್ ಬಾಬು ಈ ಸಾಹಸದ ರೂವಾರಿಗಳು.

ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ತಮ್ಮ ಅಂಗಡಿಯಲ್ಲಿ ಅಣ್ಣಾವ್ರ ಹುಟ್ಟುಹಬ್ಬದ ದಿನ ರಾಜ್ ಕೇಕ್ ಪ್ರದರ್ಶನ ನಡೆಯಲಿದೆ. ಅವರ ಅಪರೂಪದ ಭಾವಚಿತ್ರಗಳನ್ನು ನೋಡುವ ಅವಕಾಶ ಕೂಡ ಇರುವುದು ಬೋನಸ್ಸು.

ಐದಡಿ ಏಳು ಅಂಗುಲದ ಕೇಕ್ ಪ್ರತಿಮೆ ಮಾಡುವುದಕ್ಕೆ ಬೇಕಾದ ಪರಿಕರಗಳಿಗೇ 50 ಸಾವಿರ ಖರ್ಚಾಗಿದೆ. ಬನಶಂಕರಿಯ ಕಲಾವಿದ ರಾಜು ಅವರು ಮೊದಲಿಗೆ ರಾಜ್ ಪ್ರತಿಮೆಯನ್ನು ಮಣ್ಣಲ್ಲಿ ಮೌಲ್ಡ್ ಮಾಡಿದ್ದಾರೆ. ಆಮೇಲೆ ಅದೇ ಮೌಲ್ಡ್‌ನೊಳಗೆ ಕೇಕ್ ತಯಾರಿಸುವ ಕೆಲಸ ದೇವರಾಜ್ ಅವರ ಹೆಗಲಿಗೆ ಬಿದ್ದಿದೆ. ಮೌಲ್ಡ್‌ನೊಳಗಿನ ಮಣ್ಣಿನ ಭಾಗವನ್ನೆಲ್ಲಾ ತೆಗೆದು ಅದರಲ್ಲಿ ಕೇಕ್ ಇರಿಸಿ, ಆಕಾರ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕೆ ಸಾಮಾನ್ಯವಾಗಿ ಆರು ತಿಂಗಳ ಶ್ರಮ ಬೇಕಾಗುತ್ತದೆ. ಆದರೆ, ರಾಜು ಹಾಗೂ ದೇವರಾಜು ಕೇವಲ 25 ದಿನಗಳಲ್ಲಿ ಈ ಕೆಲಸ ಮಾಡಿ ಮುಗಿಸಿದ್ದಾರೆ. ಇಷ್ಟು ಶ್ರಮಕ್ಕೆ ಒಂದು ಲಕ್ಷ ರೂಪಾಯಿಯಾದರೂ ಸಂಭಾವನೆ ಪಡೆಯುವುದು ರೂಢಿ. ಆದರೆ, ಈ ಇಬ್ಬರೂ ಅಣ್ಣಾವ್ರ ಮೇಲಿನ ಅಭಿಮಾನದಿಂದ ಚಿಕ್ಕಾಸನ್ನೂ ಪಡೆದಿದೆ. ಪರಿಕರಗಳಿಗೆ ಆದ ಖರ್ಚನ್ನು ಕುಮಾರ್ ಹಾಗೂ ಬಾಬು ಒದಗಿಸಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್ ಅನುಮತಿ ಪಡೆದೇ ಈ ಕೇಕ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಹುಟ್ಟುಹಬ್ಬದ ಮರುದಿನ ಅದನ್ನು ಅಣ್ಣಾವ್ರ ಮನೆಗೆ ತೆಗೆದುಕೊಂಡು ಹೋಗುವುದು ಬಾಬು ಉದ್ದೇಶ. ಅದು ಆಮೇಲೆ ಅಲ್ಲೇ ಇರುತ್ತದೋ, ಬೇರೆಲ್ಲಿಯಾದರೂ ಇಡಬೇಕೋ ಎಂಬುದನ್ನು ಅವರಿನ್ನೂ ನಿರ್ಧರಿಸಿಲ್ಲ. ಎರಡು ವರ್ಷ ಬಿಸಿಲು ತಾಕದಿದ್ದರೆ ಈ ಪ್ರತಿಮೆ ಹಾಳಾಗುವುದಿಲ್ಲವಂತೆ. ಐಸ್ ಶುಗರ್ ಉಪಯೋಗಿಸಿ ನಿರ್ಮಿಸಿರುವುದರಿಂದ ಎಲ್ಲೂ ಇಡಲು ಆಗದಿದ್ದಲ್ಲಿ ನೀರಿನಲ್ಲಿ ವಿಸರ್ಜನೆ ಮಾಡಬೇಕಷ್ಟೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada