»   »  ಉಪ್ಪಿ ಚಿತ್ರಕ್ಕೆ ನಿರ್ಮಾಪಕ ಬಂಡೆ ಗೆರೆ ವೆಂಕಟೇಶ!

ಉಪ್ಪಿ ಚಿತ್ರಕ್ಕೆ ನಿರ್ಮಾಪಕ ಬಂಡೆ ಗೆರೆ ವೆಂಕಟೇಶ!

By: *ಜಯಂತಿ
Subscribe to Filmibeat Kannada

ಒಂದು ಬಂಡೆ. ಒಂದು ಗೆರೆ. ಆಮೇಲೆ ವೆಂಕಟೇಶನ ಚಿತ್ರ. ಅದರ ಮೇಲೆ ನಿರ್ಮಾಪಕರು ಎಂಬ ಬರೆಹ. ಉಪೇಂದ್ರ ಹುಟ್ಟುಹಬ್ಬಕ್ಕೆ ಶುಕ್ರವಾರ ಶುಭಾಶಯ ಕೋರಿ ಈ ನಿರ್ಮಾಪಕರು ಜಾಹೀರಾತುಗಳನ್ನು ನೀಡಿದ್ದಾರೆ. ಉಪೇಂದ್ರ ನಾಲ್ಕು ಭಾಷೆಗಳಲ್ಲಿ ನಿರ್ದೇಶಿಸಲಿರುವ ಚಿತ್ರದ ನಿರ್ಮಾಪಕ ಇವರೇ ಎಂಬುದನ್ನು ಚಿತ್ರದ ಶೀರ್ಷಿಕೆಯ ರೀತಿಯೇ ಸಾಂಕೇತಿಕವಾಗಿ ತಿಳಿಸಿದ್ದಾರೆ. ಬಂಡೆ ಅಂದರೆ ರಾಕ್, ಗೆರೆ ಅಂದರೆ ಲೈನ್. ವೆಂಕಟೇಶ ಅಂದರೆ ವೆಂಕಟೇಶ್. ಅಲ್ಲಿಗೆ ಈ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಎಂಬುದು ಸ್ಪಷ್ಟವಾಯಿತು.

ಉಪೇಂದ್ರ ಖುದ್ದು ಹೇಳಿಕೊಳ್ಳುವಂತೆ ಈ ಸಲದ ಹುಟ್ಟುಹಬ್ಬಕ್ಕೆ ಕುತೂಹಲದ ಟಚ್ ಇದೆ. ನನಗೆ ಯಾರನ್ನು ಮಾತಾಡಿಸಲೂ ಈಚೀಚೆಗೆ ಭಯ. ಎಲ್ಲರೂ ಹೊಸ ಚಿತ್ರದ ಬಗ್ಗೆ ಕೇಳುತ್ತಾರೆ. ಶ್ರೀಮತಿ ಚಿತ್ರವನ್ನು ಪೂರ್ತಿ ಮುಗಿಸಿ, ಆಮೇಲೆ ನನ್ನ ನಿರ್ದೇಶನದ ಚಿತ್ರದ ಕೆಲಸಗಳಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತೇನೆ. ಸ್ಕ್ರಿಪ್ಟ್ ಕೆಲಸ ಹೆಚ್ಚೂಕಮ್ಮಿ ಮುಗಿದಿದೆ. ನನಗೆ ಪೂರ್ತಿ ಸಮಾಧಾನ ಆಗುವಂತೆ ಅದನ್ನು ಪರಿಶೀಲಿಸಬೇಕಷ್ಟೆ.

ಯಾವ ಭಾಷೆಯಲ್ಲಿ ರೀಮೇಕ್ ಮಾಡುವುದು, ಎಲ್ಲದರಲ್ಲೂ ನಾನೇ ನಾಯಕನಾಗಬೇಕಾ, ಕೆಲವು ಭಾಷೆಗಳಿಗೆ ಡಬ್ ಮಾಡಿದರೆ ಸಾಕಾ ಇಂಥ ಪ್ರಶ್ನೆಗಳಿಗೆ ಇನ್ನೂ ಉತ್ತರ ಕಂಡುಕೊಂಡಿಲ್ಲ. ಚರ್ಚೆ ನಡೆದಿದೆ. ಇನ್ನು ಒಂದು ಒಂದೂವರೆ ತಿಂಗಳಲ್ಲಿ ನಾವು ಚಿತ್ರೀಕರಣ ಪ್ರಾರಂಭಿಸಿದರೂ ಆಶ್ಚರ್ಯವಿಲ್ಲ ಅಂತಾರೆ ಉಪೇಂದ್ರ. ಜಾಹೀರಾತಿನ ಪ್ರಕಾರ ರಾಕ್‌ಲೈನ್ ವೆಂಕಟೇಶ್ ಅವರೇ ನಿರ್ಮಾಪಕರಲ್ಲವೇ ಎಂದು ಕೇಳಿದರೆ, ನೀವು ಹಾಗೆ ಅಂದುಕೊಂಡರೆ ಹಾಗೆ ಅಂತ ನಕ್ಕು ಸುಮ್ಮನಾಗುತ್ತಾರೆ.

ಅಂದಹಾಗೆ, ಹುಟ್ಟುಹಬ್ಬದ ದಿನವೇ ಉಪೇಂದ್ರ ಅಭಿನಯದ ರಜನಿ ಚಿತ್ರ ತೆರೆಕಂಡಿದೆ. ಮಾಸ್ ಏನೇನು ಬಯಸುತ್ತದೋ ಅದೆಲ್ಲವನ್ನೂ ಒಳಗೊಂಡ ಈ ಚಿತ್ರ ಲಘು ಹಾಸ್ಯವನ್ನು ಮೆತ್ತಿಕೊಂಡಿದೆ. ಹಾಗಾಗಿ ಇದರ ಬಗ್ಗೆಯೂ ಒಳ್ಳೆ ಪ್ರತಿಕ್ರಿಯೆ ಇದೆ. ಅಂತೂಇಂತೂ ಉಪೇಂದ್ರಗೆ ಈಗ ಮತ್ತೆ ಟೈಮ್ ಬಂದಿದೆ.

ಯೋಗರಾಜ ಭಟ್ ಹದಿನೈದು ಕೋಟಿ ಬಜೆಟ್ ಕೇಳಿದ್ದಕ್ಕೆ ಒಲ್ಲೆ ಎಂದಿದ್ದ ರಾಕ್‌ಲೈನ್ ಉಪ್ಪಿ ಪ್ರತಿಭೆಯನ್ನು ನೆಚ್ಚಿಕೊಂಡು ಇಪ್ಪತ್ತು ಕೋಟಿ ಹೂಡುತ್ತಿರುವುದು ನಿಜವಾದ ಬರ್ತ್‌ಡೇ ಗಿಫ್ಟ್ ಅಲ್ಲವಾ? ಆದರೆ, ಉಪ್ಪಿ ಅಹುದಹುದು ಅನ್ನುವುದಿಲ್ಲ. ಅವರ ಪ್ರಕಾರ ಅವರದ್ದು ತುಂಬಾ ದೊಡ್ಡ ಬಜೆಟ್ಟಿನ ಚಿತ್ರವೇನೂ ಅಲ್ಲ. ನಾಲ್ಕು ಭಾಷೆಗಳಲ್ಲಿ ತೆಗೆಯಲು ನಿರ್ಧರಿಸಿರುವುದರಿಂದ ಅದು ದೊಡ್ಡದಾಗಿ ಕಾಣುತ್ತಿದೆ. ಮಾರುಕಟ್ಟೆಯ ಅಂದಾಜು ಇಟ್ಟುಕೊಂಡೇ ಈ ಚಿತ್ರಕ್ಕೆ ಕೈಹಾಕುತ್ತಿರುವುದಾಗಿಯೂ ಉಪ್ಪಿ ಸ್ಪಷ್ಟೀಕರಣ ನೀಡುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada