»   »  ಶಿವಮಣಿ, ಬಾಬು ಮೊಗದಲ್ಲಿ ನಗೆ ಮಳೆಬಿಲ್ಲು

ಶಿವಮಣಿ, ಬಾಬು ಮೊಗದಲ್ಲಿ ನಗೆ ಮಳೆಬಿಲ್ಲು

Subscribe to Filmibeat Kannada

ಹದಿನೇಳು ವರ್ಷಗಳ ವೃತ್ತಿಜೀವನ. "ರಾಜಕೀಯ", "ಗೋಲಿಬಾರ್", "ಸ್ವಾತಿ"ಗಳಂಥ ಜನಪ್ರಿಯ ಚಿತ್ರಗಳು. ಆದರೆ ಸೋಲು ಎನ್ನುವುದಿದೆಯಲ್ಲ- ಅಪಾರ ಅನುಭವ, ಅಕೌಂಟಿನಲ್ಲಿನ ಖ್ಯಾತಿ, ತಿಳಿವಳಿಕೆ, ಎಲ್ಲವನ್ನೂ ನುಂಗಿನೊಣೆಯುತ್ತದೆ. ಶಿವಮಣಿ ಅವರಿಗಾದದ್ದೂ ಅಷ್ಟೇ. ಸೋಲುಗಳಿಂದ ಕಂಗೆಟ್ಟ ಅವರು ಆತ್ಮವಿಶ್ವಾಸವನ್ನೇ ಕಳಕೊಂಡಿದ್ದರು. "ಎಂಥ ಸಿನಿಮಾ ಮಾಡಬೇಕು" ಎನ್ನುವ ಗೊಂದಲದಲ್ಲಿ ಬಿದ್ದಿದ್ದರು. ಅವರ ತವಕ ತಲ್ಲಣಗಳಿಗೆ ಉತ್ತರವಾಗಿ ಬಂದಿದ್ದು ನಿರ್ಮಾಪಕ ಎಸ್.ವಿ.ಬಾಬು.

ಬಾಬು ಕೂಡ ಸೋಲನ್ನು ಕಂಡವರೇ. ಅವರ ಮಹತ್ವಾಕಾಂಕ್ಷೆಯ ನಿರ್ಮಾಣದ "ಸವಿ ಸವಿ ನೆನಪು" ಸಿನಿಮಾ ದುಃಸ್ವಪ್ನವಾಗಿ ಪರಿಣಮಿಸಿತು. ಗಣೇಶ್‌ರನ್ನು ನೆಚ್ಚಿದರೆ ಗೆಲ್ಲಬಹುದು ಎನ್ನುವ ನಿರೀಕ್ಷೆಯೂ ಹುಸಿಯಾಯಿತು. "ಸಂಗಮ" ಚಿತ್ರ ಇನ್ನಿಲ್ಲದಂತೆ ನೆಲಕಚ್ಚಿತು. ಮನಸ್ಸಿನ ತುಂಬಾ ಪ್ರಶ್ನಾರ್ಥಕ ಚಿನ್ಹೆಗಳನ್ನೇ ತುಂಬಿಕೊಂಡಿದ್ದ ಬಾಬು ಗೆಲುವಿಗಾಗಿ ಶಿವಮಣಿ ಅವರತ್ತ ನೋಡಿದರು. ಇಬ್ಬರದ್ದೂ ಒಂದೇ ಅಜೆಂಡಾ- ಹೇಗಾದರೂ ಗೆಲ್ಲಬೇಕು!

ಗೆಲುವಿನ ಅಶ್ವಮೇಧಕ್ಕೆ ಹೊರಟ ಬಾಬು-ಶಿವಮಣಿ ಜೋಡಿಯ ಮನಸ್ಸಿನಲ್ಲಿದ್ದುದು ಮೂರು ಅಂಶಗಳು. ಮೊದಲನೆಯದು ಗೆಲ್ಲುವ ಕುದುರೆಗಳ ಬಾಲ ಹಿಡಿಯದಿರುವುದು. ಎರಡನೆಯದು ಹೊಸ ಪ್ರತಿಭೆಗಳನ್ನೇ ಬಳಸಿಕೊಂಡು ಸಿನಿಮಾ ನಿರ್ಮಿಸುವುದು, ಅದಕ್ಕಾಗಿ ಪ್ರತಿಭಾಶೋಧ ನಡೆಸುವುದು. ಮೂರನೆಯ ಅಂಶ- ಬಹುಮುಖ್ಯವಾದದ್ದು- ಕಥೆ ಇವತ್ತಿನ ಯುವಜನತೆಗೆ ಹತ್ತಿರವಾಗಿರಬೇಕು, ಆಪ್ತವೆನ್ನಿಸಬೇಕು ಎನ್ನುವುದು.

ತಿಂಗಳುಗಟ್ಟಲೆ ಪ್ರತಿಭಾಶೋಧ ನಡೆಸಿದ ಶಿವಮಣಿ ಅಂಡ್ ಟೀಂ ಕೊನೆಗೂ ಉತ್ಸಾಹಿ ಯುವಪಡೆಯೊಂದನ್ನು ಕಲೆಹಾಕಿತು. ಕಥೆಯೂ ರೆಡಿಯಿತ್ತು. ಹೀಗೆ ಸಿದ್ಧಗೊಂಡಿದ್ದು "ಜೋಶ್"! ಸಿನಿಮಾ ಗೆದ್ದಿದೆ. ಶಿವಮಣಿ-ಬಾಬು ಮೊಗದಲ್ಲಿ ನಗೆಯ ಮಳೆಬಿಲ್ಲು.

ಒಂದೆರಡು ವಾರಗಳಿಗೇ ಕನ್ನಡ ಚಿತ್ರಗಳು ಎತ್ತಂಗಡಿಯಾಗುತ್ತಿರುವ ಸಂದರ್ಭದಲ್ಲಿ "ಜೋಶ್" ನೂರಾ ಇಪ್ಪತ್ತೈದು ದಿನ ಪೂರೈಸಿದೆ. ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನ ಇನ್ನೂ ಚಾಲ್ತಿಯಲ್ಲಿದೆ. ಅಂದಹಾಗೆ, ಶಿವಮಣಿ ಅವರ ಹದಿನೇಳು ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಸೆಂಚುರಿಯ ಸಂಭ್ರಮವಿದು. ಕಳೆದ ವಾರ ಬಾಬು ಸಂತೋಷಕೂಟ ಹಮ್ಮಿಕೊಂಡಿದ್ದರು. ಹಾಡು, ಕುಣಿತ, ಮಾತು, ಮನರಂಜನೆ, ನಿಶೆ, ಧನ್ಯವಾದ ಸಮರ್ಪಣೆ. ಫುಲ್ ಜೋಶ್!

ಕನ್ನಡದ "ಜೋಶ್" ಸಂಭ್ರಮವನ್ನು ತಮಿಳಿಗೆ ಹಾಗೂ ತೆಲುಗಿಗೆ ಕೊಂಡೊಯ್ಯಲು ಶಿವಮಣಿ ನಿರ್ಧರಿಸಿದ್ದಾರೆ. ಅಲ್ಲಿಯೂ ಯುವಪಡೆಗೇ ಆದ್ಯತೆ. ತಮಿಳು-ತೆಲುಗಿನ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಕೊಂಚ ಬದಲಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಗೆಲುವಿನ ನಶೆ ಹೇಗಿದೆ ನೋಡಿ. ಸಾಲು ಸಾಲು ಸೋಲುಗಳ ವಿಷಾದವನ್ನು ಒಂದು ಗೆಲುವು ಪರಿಹರಿಸಬಲ್ಲದು. ಅದೇ ಅಲ್ಲವೇ ಸಿನಿಮಾ ಮಾಯೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada