»   » ಅಂದಿನ ಕ್ರೇಜ್‌ ಮಾಲಾಶ್ರೀ ಉಳಿಸಿಕೊಂಡಿದ್ದಾರಾ?

ಅಂದಿನ ಕ್ರೇಜ್‌ ಮಾಲಾಶ್ರೀ ಉಳಿಸಿಕೊಂಡಿದ್ದಾರಾ?

Posted By:
Subscribe to Filmibeat Kannada

*ವಿನಾಯಕ ರಾಮ್ ಕಲಗಾರು

ಕನ್ನಡಿಗರ 'ಕನಸಿನ ರಾಣಿ" ಮಾಲಾಶ್ರಿ ಸದ್ಯಕ್ಕೆ ತೆರೆಮರೆಯಲ್ಲಿ ಬಿಜಿಯಾಗಿದ್ದಾರೆ. ತೆರೆಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ ಕೂಡ. ಈ ಮಧ್ಯೆ ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಗುಲಾಮ ಚಿತ್ರದ ಮುಹೂರ್ತ ಸಮಾರಂಭಕ್ಕಾಗಿ ಕಂಠೀರವ ಸ್ಟುಡಿಯೊಕ್ಕೆ ಆವತ್ತು  ಬಂದಿದ್ದರು. ಅಲ್ಲೆಲ್ಲೋ ಅಡ್ಡಾಡುತ್ತಿದ್ದ ನನಗೆ ಕೆಲವೇ ನಿಮಿಷ ಮಾತಿಗೆ ಸಿಕ್ಕರು. ಅವರ ಮಾತುಗಳನ್ನು ಪ್ರಶ್ನೋತ್ತರ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಅದು ನಿಮಗೂ ಇಷ್ಟವಾಗುತ್ತೆ ಎಂದುಕೊಳ್ಳುತ್ತಾ...

* ಎಲ್ಲಿ ಮೇಡಮ್ ಸುಮಾರು ತಿಂಗಳಿಂದ ಪತ್ತೇನೇ ಇಲ್ಲ?

ಹಾಗೇನಿಲ್ಲ. ಸದ್ಯಕ್ಕೆ ಓಂ ಪ್ರಕಾಶ್ ನಿರ್ದೇಶನದ ಕಿರಣ್ ಬೇಡಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೆ. ಅರ್ಧಭಾಗ ಶೂಟಿಂಗ್ ಮುಗಿದಿದೆ. ಈಗ ಬಳ್ಳಾರಿಯಲ್ಲಿ ನಡೀತಾ ಇದೆ. ಇನ್ನೇನು ಮುಗಿದುಬಿಡುತ್ತೆ.

* ಸ್ವಲ್ಪ ತೆಳ್ಳಗಾಗಿದ್ದೀರಿ...?

ಹೌದು. ಶೂಟಿಂಗ್‌ಗಾಗಿ ಸಾಕಷ್ಟು ಡಯಟ್ ಮಾಡ್ತಾ ಇದ್ದೀನಿ. ಕಿರಣ್ ಬೇಡಿಗೋಸ್ಕರ ಅಂತಾನೇ 19 ಕೆಜಿ ಇಳಿದಿದ್ದೀನಿ. ಎಣ್ಣೆ ಪದಾರ್ಥವನ್ನೇ ಮುಟ್ಟದೆ ಎಷ್ಟೋ ದಿನ ಆಗೋಯ್ತು. ಡೆಲಿವರಿ ಬೇರೆ ಆಗಿದೆಯಲ್ಲ. ಆದ್ದರಿಂದ ತುಂಬಾ ಕೇರ್ ತೊಗೋತಾ ಇದೀನಿ. ನೀವ್ ನಂಬುತ್ತೀರೋ ಇಲ್ಲವೊ. ಮಸಾಲೆ ದೋಸೆ ತಿನ್ನದೇ ಎಷ್ಟೋ ತಿಂಗಳಾಗಿತ್ತು. ನಿನ್ನೆ ತಿಂದೆ ಗೊತ್ತಾ!

* ಕಿರಣ್ ಬೇಡಿ ಜತೆ ಮಾತನಾಡಿದ್ದೀರಾ? ಅವರ ಆತ್ಮ ಚರಿತ್ರೆ ಓದಿದ್ದೀರಾ?

ಅದನ್ನೇನೂ ಓದಿಲ್ಲ. ತಯಾರಿ ಅಂತೇನಿಲ್ಲ. ಅವರನ್ನು ಭೇಟಿಯಾಗಬೇಕೆಂದಿದ್ದೆ. ಸಾಧ್ಯವಾಗಲಿಲ್ಲ. ಆದರೆ ಅವರನ್ನು ಈ ಮೇಲ್ ಮುಖಾಂತರ ಭೇಟಿಯಾಗಿದ್ದೀನಿ.

* ಅಂದಿನ ಕ್ರೇಜ್‌ ಅನ್ನೇ ಉಳಿಸಿಕೊಂಡಿದ್ದೀರಾ?

ಅದಕ್ಕಿಂತಲೂ ಹೆಚ್ಚಾಗಿದೆ ಸ್ವಾಮಿ. ಅದಕ್ಕೊಂದು ಘಟನೆ ಹೇಳ್ತೀನಿ ಕೇಳಿ. ಚಾಮುಂಡಿ ಬಿಡುಗಡೆಯಾದ ಸಮಯದಲ್ಲಿ ಅನ್ನಿಸುತ್ತೆ. ಕೆಲವು ಪಡ್ಡೆಗಳು ಟೈಟ್‌ಆಗಿ ಬಂದು, ಕೈಯಲ್ಲಿ ಇಷ್ಟುದ್ದುದ್ದ ಬಾಟಲ್ ಹಿಡಕೊಂಡು, 'ತೊಗೋಳ್ಳಿ ಮೇಡಮ್. ನೀವು ಗುಂಡಿನ ರಾಣಿ. ಈ ಗುಂಡು ಒಳಗೆ ಸೇರಿದರೆ ಅದರ ಲೆವೆಲ್ಲೇ ಬೇರೆ ಮೇಡಮ್" ಎಂದುಬಿಟ್ಟರು. (ಒಮ್ಮೆ ಜೋರಾಗಿ ನಕ್ಕರು) ಕೊನೆಗೆ ಬಾಟೆಲ್‌ಗಳ ಸರಮಾಲೆಯನ್ನೇ ನನ್ನ ಕೊರಳಿಗೆ ನೇತು ಹಾಕಿಬಿಟ್ಟರು. ಗುಂಡಿನ ರಾಣಿ ಅಂತ ಅನಂತ್‌ನಾಗ್ ಪ್ರೀತಿಯಿಂದ ಕರೆಯುತ್ತಿದ್ದರು. ಈಗ ಹೇಳಿ ಕ್ರೇಜ್ ಹೇಗಿದೆ ಅಂತ.

* ಬೇರೆ ಬ್ಯಾನರ್‌ನಲ್ಲಿ ಆಫರ್ ಬರಲಿಲ್ಲವಾ?

ಸಾಕಷ್ಟು ಬಂದಿತ್ತು. ದುರ್ಗಿ ನಂತರ ತುಂಬಾ ನಿರ್ಮಾಪಕರು ಕೇಳಿಕೊಂಡು ಬಂದರು. ಆದರೆ ಮಾಲಾಶ್ರೀ ಎಂದರೆ ಹೀಗೇ ಇರಬೇಕು ಎಂಬ ಕನಸು ಪ್ರತಿಯೊಬ್ಬ ಪ್ರೇಕ್ಷಕನಿಗೂ ಇದೆ. ಆ ನನ್ನ ಇಮೇಜಿಗೆ ಧಕ್ಕೆಯಾಗಬಾರದು ಎಂದು ಕೆಲಕಾಲ ಸುಮ್ಮನಿದ್ದೆ. ನಂತರ ಬಸುರಿ, ಬಾಣಂತನ ಅಂತ ಮನೆ ಸೇರಿಬಿಟ್ಟೆ. ಈಗ ಕಿರಣ್ ಬೇಡಿಯಲ್ಲಿ ಬಿಜಿಯಾದೆ. ಯಾವುದೇ ಒಳ್ಳೆಯ ಪಾತ್ರಕ್ಕಾದರೂ ಸದಾ ಸಿದ್ಧಳಿದ್ದೇನೆ.

* ನಟನೆಯಲ್ಲಿ ಅಂದಿನ ಎನರ್ಜಿ ಇಂದಿಗೂ ಇದೆಯಾ?

ಓ... ಅದೇ ತಾಕತ್ತು, ಅದೇ ಎನರ್ಜಿ ಇಂದಿಗೂ ಇದೆ. ಆದರೆ ನನಗೆ ಇದು ಶೂಟಿಂಗು, ಇಲ್ಲಿ ಹೀಗೇ ಇರಬೇಕು, ಹೀಗೇ ಮಾಡಬೇಕು ಎಂದು ಯಾವತ್ತೂ ಅನಿಸಿಯೇ ಇಲ್ಲ. ನಿರ್ದೇಶಕರು ಏನು ಹೇಳ್ತಾರೋ ಅದನ್ನು ಯಥಾವತ್ತಾಗಿ ಮಾಡುತ್ತಿದ್ದೆ ಅಷ್ಟೆ. ಆ ವರಸೆಯನ್ನು ಇವತ್ತು ಟಿವಿಯಲ್ಲಿ ನೋಡಿದರೆ ನನಗೇ ಆಶ್ಚರ್ಯ ಆಗುತ್ತೆ. ಇದು ನಾನೇನಾ ಎಂಬ ಸಂಶಯವೂ ಬರುತ್ತೆ. ಆದರೆ ಈಗ ಅಭಿನಯದಲ್ಲಿ ಇನ್ನಷ್ಟು ಗಟ್ಟಿತನ, ಆಳವನ್ನು ಕಂಡುಕೊಂಡಿದ್ದೇನೆ. ಎಲ್ಲಾ ಒಂದೇ ಶಾಟ್‌ನಲ್ಲಿ ಫಿನಿಶ್.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X