»   »  ಪಂಚಮವೇದ ವಿಶ್ವನಾಥ್ ಮರಳಿ ನಿರ್ದೇಶನಕ್ಕೆ

ಪಂಚಮವೇದ ವಿಶ್ವನಾಥ್ ಮರಳಿ ನಿರ್ದೇಶನಕ್ಕೆ

Posted By:
Subscribe to Filmibeat Kannada

ಗುಣಾತ್ಮಕ ಚಿತ್ರಗಳಿಗೆ ಹೆಸರಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಮಕ್ಕಳ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ವಿಶ್ವನಾಥ್ ಕೆಲಸ ಮಾಡಿದ್ದರು. ಪುಟ್ಟಣ್ಣ ಕಣಗಾಲರ 'ಪಡುವಾರಳ್ಳಿ ಪಾಂಡವರು, ಧರ್ಮಸೆರೆ, ರಂಗನಾಯಕಿ ಮತ್ತು ಮಾನಸ ಸರೋವರ' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ನಂತರ ಟಿ.ಎಸ್.ನಾಗಾಭರಣರ 'ಆಸ್ಫೋಟ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವಿ ವಿಶ್ವನಾಥ್.

ಅವರ ಸ್ವತಂತ್ರ ನಿರ್ದೇಶನದ 'ಪಂಚಮವೇದ' ಚಿತ್ರ1989-90ರಲ್ಲಿ ರಾಜ್ಯ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ನಂತರ ದೇವದಾಸಿ ಪದ್ಧತಿ ಕುರಿತ 'ಅರಗಿಣಿ' ಚಿತ್ರ ಮೂರು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದಿತ್ತು. ಶ್ರೀಗಂಧ, ಮುಂಜಾನೆ ಮಂಜು, ರಂಗೋಲಿ, ಒಲವೆ ಚಿತ್ರಗಳು ವಿಶ್ವನಾಥ್ ನಿರ್ದೇಶನದ ಇನ್ನಿತರೆ ಕನ್ನಡ ಚಿತ್ರಗಳು. ಅವರ ನಿರ್ದೇಶನದ ಒಲವೆ ಚಿತ್ರವೇ ಕೊನೆಯದು. ಸುದೀರ್ಘ ವಿರಾಮದ ನಂತರ ಮಕ್ಕಳ ಚಿತ್ರದ ಮೂಲಕ ಈಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಅಂದಹಾಗೆ ಕಿನ್ನರ ಬಾಲೆ ಯನ್ನು ವಿಶ್ವನಾಥ್ ಅವರೆ ನಿರ್ಮಿಸುತ್ತಿದ್ದಾರೆ. ಛಾಯಾಗ್ರಹಣ ಮಂಜುನಾಥ್. ಚಿತ್ರಕ್ಕೆ ಸ್ಲಂ ಹಾಗೂ ಮೀನುಗಾರರ ನೇಪಥ್ಯ ಬೇಕಾಗಿರುವ ಕಾರಣ ಚಿತ್ರೀಕರಣವನ್ನು ಭಟ್ಕಳದಲ್ಲಿ ಪ್ರಾರಂಭಿಸುತ್ತಿರುವುದಾಗಿ ವಿಶ್ವನಾಥ್ ತಿಳಿಸಿದ್ದಾರೆ. ಬೇಬಿ ಮಧುಶ್ರೀ ಮತ್ತು ಬೇಬಿ ಶ್ರೇಯಾ ಚಿತ್ರದ ಪ್ರಧಾನ ಪಾತ್ರಧಾರಿಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada