»   »  ಚಿರಂಜೀವಿ ಮಗ ನನ್ನ ಮಾಜಿ ಗೆಳೆಯ; ರಮ್ಯಾ

ಚಿರಂಜೀವಿ ಮಗ ನನ್ನ ಮಾಜಿ ಗೆಳೆಯ; ರಮ್ಯಾ

Subscribe to Filmibeat Kannada

ಕಳೆದ ಒಂದು ವರ್ಷದಿಂದ ರಮ್ಯಾ ನಟನೆಯ ಒಂದೇ ಒಂದು ಚಿತ್ರವೂ ತೆರೆಕಂಡಿಲ್ಲ. ಪರಿಸ್ಥಿತಿ ಹೀಗಿದ್ದರೂ ಕನ್ನಡದಲ್ಲಿ ನಂಬರ್ ಒನ್ ಪಟ್ಟವನ್ನು ರಮ್ಯಾ ಯಾರಿಗೂ ಬಿಟ್ಟುಕೊಟ್ಟಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲೂ ಇರುತ್ತಾರೆ. ಸದ್ಯಕ್ಕೆ ಪ್ರಸಿದ್ಧ ಕೇಶತೈಲ ಕಂಪನಿಯ ರಾಯಭಾರಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ. ಜಾಹೀರಾತಿನ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಪ್ರಯಾಣ ಬೆಳಸಿದ್ದಾರಂತೆ.

'ಜಸ್ಟ್ ಮಾತ್ ಮಾತಲ್ಲಿ' ಹಾಡಿನ ಚಿತ್ರೀಕರಣಕ್ಕಾಗಿ ಜರ್ಮನ್ ವಿಮಾನವನ್ನೂ ಹತ್ತಲಿದ್ದಾರೆ. ಸುದೀಪ್ ನಟಿಸಿ ನಿರ್ದೇಶಿಸುತ್ತಿರುವ ಜಸ್ಟ್ ಮಾತ್ ಮಾತಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಜಸ್ಟ್ ಮಾತ್ ಮಾತಲ್ಲಿ ನಂತರ 'ಕಿಚ್ಚ ಹುಚ್ಚ'ನ ಚಿತ್ರೀಕರಣಕ್ಕಾಗಿ ಮಲೇಷಿಯಾಗೆ ಹಾರಲಿದ್ದಾರೆ. ಕಾದಲ್ ಕಲ್ಯಾಣಂ ಮತ್ತು ಸಿಂಗಂ Vs ಪುಲಿ ಎಂಬ ತಮಿಳಿನ ಎರಡು ಚಿತ್ರಗಳು ಆಕೆಯ ಕೈಯಲ್ಲಿವೆ.

ಇಷ್ಟೆಲ್ಲಾ ಚಿತ್ರಗಳಿದ್ದರೂ ಕಳೆದ ವರ್ಷದಿಂದ ಒಂದೇ ಒಂದು ಚಿತ್ರವೂ ಬಿಡುಗಡೆಯಾಗಿಲ್ಲವಲ್ಲ ಎಂದರೆ, ವೀರ ಮದಕರಿ ಮತ್ತು ಅಂಬಾರಿ ಚಿತ್ರಗಳನ್ನು ಹೊರತುಪಡಿಸಿದರೆ ಕಳೆದ ವರ್ಷ ಒಂದೇ ಒಂದು ಚಿತ್ರವೂ ಗೆದ್ದಿಲ್ಲ. ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶವೂ ಬಂದಿತ್ತು. ಕತೆ ಇಷ್ಟವಾಗದ ಕಾರಣ ಒಪ್ಪಲಿಲ್ಲ. ಬೊಂಬಾಟ್ ಚಿತ್ರ ಸೋತ ಬಳಿಕ ಕತೆಯ ಆಯ್ಕೆಯಲ್ಲಿ ಮತ್ತಷ್ಟು ಜಾಗ್ರತೆ ವಹಿಸುತ್ತಿದ್ದೇನೆ ಎನ್ನುತ್ತಾರೆ.

ಇತ್ತೀಚೆಗೆ ನಿರ್ದೇಶಕ ವಾಸು ಮಾತನಾಡುತ್ತಾ ಯೋಗೀಶ್ ಗೆ (ಲೂಸ್ ಮಾದ)ರಮ್ಯಾ ಅಕ್ಕನ ತರಹ ಕಾಣಿಸುತ್ತಾರೆ ಎಂದಿದ್ದರು. ''ಅವರ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಕ್ಕೆ ವಾಸು ಈ ರೀತಿ ಸುಳ್ಳು ಹೇಳಿದ್ದಾರೆ. ಅವರೊಬ್ಬ ಅಪ್ಪಟ ಸುಳ್ಳುಗಾರ'' ಎಂದು ಮುಖ ಗಂಟಿಕ್ಕಿದ್ದಾರೆ. ಹಾಗೆಯೇ ಯೋಗೀಶ್ ನನ್ನ ಅಭಿಮಾನಿ. ಹಾಗಾಗಿ ಅವರ 'ರಾವಣ' ಚಿತ್ರದಲ್ಲಿ ನಟಿಸಲು ಒಪ್ಪಿದ್ದೇನೆ. ಗಣೇಶ್ ಸಹ ನನ್ನ ಅಭಿಮಾನಿ. ಅವರು ನನ್ನೊಂದಿಗೆ ಮತ್ತೊಂದು ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿಸುತ್ತಿದ್ದಾರೆ ಎನ್ನುತ್ತಾರೆ.

'ಮಗಧೀರ' ಚಿತ್ರದ ನಾಯಕ ನಟ ರಾಮ್ ಚರಣ್ ತೇಜ ನನ್ನ ಆತ್ಮೀಯ ಗೆಳೆಯ. ಇಬ್ಬರೂ ಒಂದೇ ನಟನಾ ಶಾಲೆಯಲ್ಲಿ ಕಲಿತಿದ್ದು. ಅವರು ಅದ್ಭುತ ನಟನಾಗಿ ಹೊರಹೊಮ್ಮಿರುವುದನ್ನು ಕಂಡರೆ ನಿಜಕ್ಕೂ ಖುಷಿಯಾಗುತ್ತದೆ. ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಚರಣ್ ಪಕ್ಕದಲ್ಲಿ ಕುಳಿತು ಕಳೆದು ಹೋದ ದಿನಗಳನ್ನು ನೆನೆಸಿಕೊಂಡೆವು ಎನ್ನುವ ರಮ್ಯಾ ಸದ್ಯಕ್ಕೆ ಕೆಪಿಎಲ್ ನೆಡೆಗೆ ದೃಷ್ಟಿ ನೆಟ್ಟಿದ್ದಾರೆ. ಸಾಕಷ್ಟು ತಂಡಗಳು ರಾಯಭಾರಿ ಆಗುವಂತೆ ರಮ್ಯಾಗೆ ದುಂಬಾಲು ಬಿದ್ದಿವೆಯಂತೆ. ಆದರೆ ರಮ್ಯಾ ಮಾತ್ರ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada