»   » 2012 ಏನಾಗುತ್ತದೋ ಆಗಲಿ: ಗಣೇಶ್

2012 ಏನಾಗುತ್ತದೋ ಆಗಲಿ: ಗಣೇಶ್

Subscribe to Filmibeat Kannada

ಶಿವಮೊಗ್ಗ,ಡಿ. 21: ಯುವಸಾಹಿತಿ, ಪತ್ರಕರ್ತ ಶಿ.ಜು.ಪಾಶ ಬರೆದಿರುವ "2012 ಮಹಾವಿನಾಶ" ಪುಸ್ತಕ ಬಿಡುಗಡೆಯನ್ನು ಚಲನಚಿತ್ರ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಸೋಮವಾರ ಇಲ್ಲಿ ಬಿಡುಗಡೆಗೊಳಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಗಣೇಶ್, ಸ್ವಂತ ನಿರ್ಮಾಣದ 'ಮಳೆಯಲಿ ಜೊತೆಯಲಿ' ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನದತ್ತ ಸಾಗುತ್ತಿದ್ದು, ಲಕ್ಷ್ಮೀ ಚೆನ್ನಾಗಿ ಓಡುತ್ತಿದ್ದಾಳೆ. ಅದೇ ರೀತಿ ಶಿ.ಜು.ಪಾಶರವರ ಸರಸ್ವತಿಯು ಚೆನ್ನಾಗಿ ಓಡುವಂತಾಗಲಿ ಎಂದು ಹಾರೈಸಿದರು.

ಮಹಾವಿನಾಶ 2012 ರ ಬಗ್ಗೆ ತಿಳಿದಿದ್ದೇನೆ. ಆದರೆ, ಭವಿಷ್ಯದಲ್ಲಿ ಏನು ಸಂಭವಿಸುತ್ತದೋ ಗೊತ್ತಿಲ್ಲ. ಆಗಬೇಕಾದದ್ದು ಆಗೇ ಆಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಸುಮ್ಮನೆ ಜನತೆ ಭಯದಲ್ಲಿ ಬದುಕುವುದು ಬೇಡ. ಏನಾಗುತ್ತದೋ ಆಗಲಿ ಎಂದರು.

ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಹಾವಿನಾಶ ಇಂದು ಬಹಳ ಚರ್ಚೆಗೆ ಒಳಗಾಗಿರುವ ವಿಷಯವಾಗಿದೆ. ಪ್ರಳಯದ ಬಗ್ಗೆ ನಾವುಗಳೇ ಆತಂಕ ಸೃಷ್ಟಿ ಮಾಡುತ್ತಿದ್ದೇವೆ ಎಂದೆನಿಸುತ್ತಿದೆ. ಆತಂಕದ ಬದುಕು ಸಮಸ್ಯೆಯುಂಟುಮಾಡಲಿದ್ದು, ಆತಂಕದಲ್ಲಿ ಬದುಕದೇ ಸಾವು ಮನುಷ್ಯನ ಜೀವನದಲ್ಲಿ ಅನಿರೀಕ್ಷಿತವಾಗಿದೆ ಎಂದು ತಿಳಿದರೆ ಜೀವನ ಉಲ್ಲಾಸಮಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿ.ಜು.ಪಾಶರವರನ್ನು ಹಲವು ವರ್ಷಗಳಿಂದಲೂ ನೋಡುತ್ತಾ ಬಂದಿದ್ದೇನೆ. ವೃತ್ತಿ ಬದುಕಿನಲ್ಲಿ ಅನೇಕ ಕವಲುಗಳನ್ನು ಸೃಷ್ಟಿಸಿಕೊಂಡಿರುವ ಇವರು, ಹಲವು ಬಾರಿ ಕೈಸುಟ್ಟುಕೊಂಡ ಉದಾಹರಣೆಯೂ ಇದೆ. ಮುಂದೆ ಇವರು ಒಬ್ಬ ಒಳ್ಳೆಯ ಕಥೆಗಾರ, ಬರಹಗಾರ ಆಗಲಿ ಎಂದು ಇದೇ ಸಂದರ್ಭದಲ್ಲಿ ಹಾರೈಸಿದರು.

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಎ.ಹೆಚ್.ಸುನೀಲ್, ಸೃಷ್ಟಿರಾಜ್ ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ.ಸತೀಶ್ ಗೌಡ, ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ಪತ್ರಕರ್ತ ಮಂಜುನಾಥ್ ಬ್ಯಾಣದ್, ಮುರಳೀಧರ್, ಪಿ.ಸಿ.ಜಯ, ಅಮೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada