twitter
    For Quick Alerts
    ALLOW NOTIFICATIONS  
    For Daily Alerts

    ಪ್ರೀತಿಸಿದ ಹುಡುಗಿ ಜೊತೆ ಸಿನಿಮಾ ನೋಡಿದ್ದೆ ಕೊನೆ

    By Rajendra
    |

    "ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರಬೇಕಾದರೆ ನಾನು ಸಿನಿಮಾಗಳನ್ನು ಸಿಕ್ಕಾಪಟ್ಟೆ ನೋಡುತ್ತಿದ್ದೆ. ಬಳಿಕ ಅದೇ ಹುಡುಗಿಯನ್ನು ಮದುವೆಯಾದ ಮೇಲೆ ಸಿನಿಮಾಗಳಿಂದ ಕಲಿಯುವುದೇನು ಇಲ್ಲ ಎಂದು ಅನ್ನಿಸಿತು. ಹಾಗಾಗಿ ಚಿತ್ರಗಳನ್ನು ನೋಡುವುದನ್ನು ಬಿಟ್ಟೆ". ಹಾಗಂತ ನಲವತ್ತು ವರ್ಷಗಳ ಹಿಂದಕ್ಕೆ ಹೊರಳಿದವರು ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗಡೆ.

    'ಚಿತ್ರ ಸಮೂಹ' ಹಮ್ಮಿಕೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತೋಷ್ ಹೆಗಡೆ ಅವರು ಮಾತನಾಡುತ್ತಿದ್ದರು. ಅವರು ಹಾಸ್ಯಮಿಶ್ರಿತ ಧಾಟಿಯಲ್ಲಿ ಹೇಳುತ್ತಿದ್ದರೆ ಇಡೀ ಸಭೆ ನಗೆಗಡಲಲ್ಲಿ ತೇಲುತ್ತಿತ್ತು. ಸಿನಿಮಾಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಸಿನಿಮಾಗಳಿಗೆ ನನ್ನ ಬೆಂಬಲವಿದೆ. ನಾನು ನೋಡಿದ ಕೊನೆಯ ಚಿತ್ರ 'ಇಷ್ಕ್ ಪರ್ ಜೋರ್'. ಸಿಟಿ ಮಾರುಕಟ್ಟೆಯಲ್ಲಿರುವ ಅಪ್ಸರಾ ಚಿತ್ರಮಂದಿರಲ್ಲಿ ನಲವತ್ತು ವರ್ಷಗಳ ಹಿಂದೆ ನೋಡಿದ ಚಿತ್ರವದು ಎಂದರು.

    ನಿತ್ಯೋತ್ಸವ ಕವಿ ಡಾ.ನಿಸಾರ್ ಅಹ್ಮದ್ ಮಾತನಾಡುತ್ತಾ, ಗಿರೀಶ್ ಕಾಸರವಳ್ಳಿ ಅವರ 'ಹಸೀನಾ' ಚಿತ್ರವನ್ನು ನೋಡಿದ್ದೇನೆ. ಅದರಲ್ಲಿನ ಕೆಲವೊಂದು ದೃಶ್ಯಗಳು ಅದ್ಭುತವಾಗಿವೆ. ಹಾಗೆಯೇ 'ಘಟ ಶ್ರಾದ್ಧ' ಚಿತ್ರ ಸಹ ಅತ್ಯುತ್ತಮವಾಗಿದೆ. ಅಂದಿನಿಂದಲೂ ಗಿರೀಶ್ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುತ್ತಲೆ ಬರುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಸಂವೇದನಾಶೀಲತೆ, ಸೂಚ್ಯತೆ ಇರುವುದರಿಂದ ಅವು ಶ್ರೇಷ್ಠ ಚಿತ್ರಗಳಾಗಿ ನಿಲ್ಲುತ್ತವೆ ಎಂದರು.

    ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾದ ಅರುಂಧತಿ ನಾಗ್, ನಾನು 35 ವರ್ಷಗಳಿಂದಲೂ ರಂಗಭೂಮಿಯಲ್ಲಿದ್ದೇನೆ. ಈ ಪ್ರಶಸ್ತಿ ನನಗೆ ಖುಷಿ ತಂದಿದೆ. ಅಮಿತಾಬ್ ಜೊತೆ ನಟಿಸಿದ್ದು ಮರೆಯದ ಅನುಭವ. ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

    'ಸಿನಿಮಾ ಯಾನ' ಪುಸ್ತಕಕ್ಕೆ ಸ್ವರ್ಣ ಕಮಲ ಪಡೆದ ಡಾ.ಕೆ.ಪುಟ್ಟಸ್ವಾಮಿ ಮತನಾಡುತ್ತಾ, ಇದು ಸಿನಿಮಾ ಕುರಿತ ಚರಿತ್ರೆಯ ಪುಸ್ತಕವಂತೂ ಅಲ್ಲ. ಇದರಲ್ಲಿ ಎಲ್ಲವೂ ಸಮಗ್ರವಾಗಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಸಣ್ಣ ಅವಲೋಕನ ಮಾಡಿದ್ದಕ್ಕೆ ದೊಡ್ಡ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.

    ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಒಂದು ಸಣ್ಣ ಎಳೆ ಇಟ್ಟುಕೊಂಡು ಮಾಡಿದ ಸಣ್ಣ ಚಿತ್ರಕ್ಕೆ ಈ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ ಎಂದು 'ಪುಟಾಣಿ ಪಾರ್ಟಿ' ಚಿತ್ರದ ನಿರ್ದೇಶಕ ಪಿ ಎನ್ ರಾಮಚಂದ್ರ ಹೇಳಿದರು. ಕನಸೆಂಬ ಕುದುರೆಯನೇರಿ ಚಿತ್ರದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದ ಗೋಪಾಲ ಕೃಷ್ಣ ಪೈ ಹಾಗೂ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಸಹ ಉಪಸ್ಥಿತರಿದ್ದರು.

    Tuesday, September 21, 2010, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X