»   »  ಉಪೇಂದ್ರ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

ಉಪೇಂದ್ರ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

Subscribe to Filmibeat Kannada

ಸುದೀರ್ಘ ಸಮಯದ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಮರಳಿರುವುದು ಗೊತ್ತೇ ಇದೆ. ತಮ್ಮ 'ಸೂಪರ್' ಚಿನ್ಹೆಯ ಚಿತ್ರಕ್ಕೆ ಬಾಲಿವುಡ್ ನಟಿ ಐಶ್ವರ್ಯ ರೈ ಅವರನ್ನು ಕರೆತರಲು ಉಪೇಂದ್ರ ಸಿದ್ಧತೆ ನಡೆಸಿದ್ದಾರೆ. ಉಪೇಂದ್ರ ನಿರ್ದೇಶನದ ಚಿತ್ರ ಸೆಪ್ಟೆಂಬರ್ 18ರಂದು ಸೆಟ್ಟೇರುವ ಸಾಧ್ಯತೆಗಳಿವೆ.

'ಸೂಪರ್' ಚಿನ್ಹೆಯ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳಲಿದೆ. ತಮ್ಮ ಚಿತ್ರದ ತಾರಾಗಣಕ್ಕೆ ಸಂಬಂಧಿಸಿದಂತೆ ಉಪೇಂದ್ರ ಇದುವರೆಗೂ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದರು. ಇದೀಗ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ. ಉಪೇಂದ್ರ ಮತ್ತಷ್ಟು ಗುಟ್ಟನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಉಪೇಂದ್ರ ನಿರ್ದೇಶಿಸಲು ಹೊರಟಿರುವ 'ಸೂಪರ್' ಚಿನ್ಹೆಯ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ನಿರ್ಮಾಪಕರ ಹೆಸರನ್ನು ಪ್ರಕಟಿಸಿಲ್ಲ. ಹಾಗಾಗಿ ಉಪೇಂದ್ರ ಅವರ ಸ್ವಂತ ನಿರ್ಮಾಣದಲ್ಲಿ ಈ ಚಿತ್ರ ಬರುತ್ತದೋ ಅಥವಾ ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ಸೆಟ್ಟೇರುತ್ತದೋ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

ಚಿತ್ರ ನಿರ್ದೇಶನದಿಂದ ಉಪೇಂದ್ರ ದೂರವಾಗಿ ಹತ್ತ್ತು ವರ್ಷಗಳೇ ಕಳೆದು ಹೋಗಿವೆ. 1999 ತೆರೆಕಂಡ 'ಉಪೇಂದ್ರ' ಅವರ ನಿರ್ದೇಶನದ ಕೊನೆಯ ಚಿತ್ರ. ಉಪೇಂದ್ರ ಮರಳಿ ನಿರ್ದೇಶನಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳ ಬಯಕೆಯಾಗಿತ್ತು. ಇದೀಗ ಸೂಪರ್ ಚಿನ್ಹೆಯ ಚಿತ್ರದ ಮೂಲಕ ಆ ಕನಸು ನೆರೆವೇರುತ್ತಿದೆ.

ತಮ್ಮ ಮಹತ್ವಾಕಾಂಕ್ಷಿ 'ಸೂಪರ್' ಚಿತ್ರಕ್ಕೆ ಐಶ್ವರ್ಯ ರೈ ಅವರನ್ನು ಕರೆತರಲು ಉಪೇಂದ್ರ ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ಮೂಲಕದ ಐಶ್ವರ್ಯ ರೈ ಇದುವರೆಗೂ ಕನ್ನಡ ಚಿತ್ರದಲ್ಲಿ ನಟಿಸಿಲ್ಲ. ಉಪೇಂದ್ರ ಪ್ರಯತ್ನವೇನಾದರೂ ಫಲಿಸಿದರೆ ಆ ಕೊರೆತೆಯೂ ನೀಗಲಿದೆ. ಈ ಎಲ್ಲಾ ಕುತೂಹಲಗಳಿಗೆ ತೆರೆಬೀಳಬೇಕಾದರೆ ಸ್ವಲ್ಪ ದಿನ ಕಾಯಲೇ ಬೇಕು!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada