For Quick Alerts
  ALLOW NOTIFICATIONS  
  For Daily Alerts

  ರಾಜ್ ಜನ್ಮೋತ್ಸವ :ಸಾಧಕರಕೃತಿಗಳ ಬಿಡುಗಡೆ

  By Staff
  |

  ಮೈಸೂರು, ಜೂ. 22 : ಡಾ.ರಾಜ್‌ಕುಮಾರ್ ಅವರ 80ನೇ ಜನ್ಮೋತ್ಸವ ಹಾಗೂ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಅಂಗವಾಗಿ ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಸಾಧಕರ ಕುರಿತು ಬೆಂಗಳೂರಿನ ಸುಂದರ ಪ್ರಕಾಶನ ಹೊರ ತಂದಿರುವ ಆರು ಕೃತಿಗಳು ಹಾಗೂ ಚಿತ್ರರಂಗದ ಕಲಾವಿದರು, ತಂತ್ರಜ್ಞರನ್ನು ಕುರಿತ 33 ಪುಸ್ತಕಗಳು ಶನಿವಾರ ಬಿಡುಗಡೆಗೊಂಡವು.

  ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 'ಚಿತ್ರರಂಗದ ರಣಧೀರರು','ಮೈಸೂರಿನ ನಕ್ಷತ್ರಗಳು', 'ಗುಗ್ಗು ಮಹಲ್‌ನ ಸಂಭಾವಿತ ನಟ ಗುಗ್ಗು', 'ಚಿರಂಜೀವಿ ಚಿ.ಉದಯಶಂಕರ್', 'ಕನ್ನಡ ಚಿತ್ರರಂಗ-ಚಳವಳಿ', 'ಕ್ರಿಯಾಶೀಲ ಸಾಧಕ ತಮಾಷ್ ಮಾಧವರಾವ್' ಕೃತಿಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು.

  ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ತಮ್ಮ ಕಂಚಿನ ಕಂಠದಲ್ಲಿ ಕುವೆಂಪು ಅವರ 'ಎಲ್ಲಾದರೂ ಇರು ಎಂತಾದರೂ ಇರು ನೀ ಕನ್ನಡವಾಗಿರು...' ಸುಶ್ರಾವ್ಯ ಗೀತ ಗಾಯನದ ಮೂಲಕ ಸಮಾರಂಭ ಉದ್ಘಾಟಿಸಿದರು. ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಸಂಸದ ಎಚ್.ವಿಶ್ವನಾಥ್ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಇವು ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಸಾಹಿತ್ಯ ಪ್ರಕಾರಗಳು ಎಂದು ಹೇಳಿದರು.

  ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಮಾತನಾಡಿ, ಪ್ರಸ್ತುತ ಕನ್ನಡ ಚಿತ್ರರಂಗ ಪ್ರೇಕ್ಷಕರ ಪ್ರೋತ್ಸಾಹದ ನಡುವೆಯೂ ಸೊರಗುತ್ತಿರುವುದು ಆತಂಕಕಾರಿ ಎಂದರು. ಮಾಜಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಚ್.ಎಸ್. ಶಂಕರಲಿಂಗೇಗೌಡ, ಎಚ್.ಎನ್.ರಾಮತೀರ್ಥ, ನಟರಾದ ರಾಜೇಶ್, ಸೃಜನ್ ಲೋಕೇಶ್, ಗ್ರಂಥಾಲಯ ಇಲಾಖೆ ನಿರ್ದೇಶಕ ಎಸ್.ಬಿ. ಹೊಂಡದಕೇರಿ ಭಾಗವಹಿಸಿದ್ದರು. ನಟ ಸುದರ್ಶನ್, ಶೈಲಶ್ರೀ ಸುದರ್ಶನ್ ಹಳೆಯ ಮಧುರ ಗೀತೆಗಳನ್ನು ಹಾಡಿದರು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X