»   »  ದುರ್ಗಾಪೂಜೆ ಸಡಗರದಲ್ಲಿ ಐಂದ್ರಿತಾ, ಪ್ರಿಯಾಂಕ!

ದುರ್ಗಾಪೂಜೆ ಸಡಗರದಲ್ಲಿ ಐಂದ್ರಿತಾ, ಪ್ರಿಯಾಂಕ!

Subscribe to Filmibeat Kannada

ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬವನ್ನು ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ದೇಶದಾದ್ಯಂತ ಆಚರಿಸಲಾಗುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ನೆಲೆನಿಂತಿರುವ ಬಂಗಾಳಿ ಮೂಲದ ಐಂದ್ರಿತಾ ರೇ ಮತ್ತು ಪ್ರಿಯಾಂಕಾ ಉಪೇಂದ್ರ ಹಬ್ಬಕ್ಕೆ ಹೇಗೆ ಸಿದ್ಧತೆ ನಡೆಸಿದ್ದಾರೆ? ಅವರ ಬಾಯಿಂದಲೇ ಕೇಳೋಣ ಬನ್ನಿ!

''ಹಲಸೂರಿನಲ್ಲಿ (ಬೆಂಗಳೂರು) ನಾವು ಈಗಾಗಲೇ ದುರ್ಗಾಪೂಜೆ ಸಡಗರದಲ್ಲಿ ಮುಳುಗಿದ್ದೇವೆ. ದುರ್ಗಾಪೂಜೆಯ ದಿನ ನೂರಾರು ಜನರಿಗೆ ಪ್ರಸಾದ ವಿತರಿಸುವುದೆಂದರೆ ನನಗೆ ಖುಷಿಯ ಸಂಗತಿ. ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ ಪ್ರಸಾದ ತಯಾರಿಸುವುದು ದೊಡ್ಡ ಕೆಲಸ. ಬಹಳಷ್ಟು ವರ್ಷಗಳಿಂದ ಇದನ್ನು ನಾನು ಧಾರ್ಮಿಕವಾಗಿ ನಡೆಸಿಕೊಂಡು ಬರುತ್ತಿದ್ದೇನೆ'' ಎನ್ನುತ್ತಾರೆ ಚಿಗರೆ ಕಂಗಳ ಐಂದ್ರಿತಾ.

''ಎರಡನೇ ದಿನ ನವಮಿ, ಅಂದು ನಾವು ಬೆಂಗಳೂರಿನ ಸುತ್ತಮುತ್ತ ಇರುವ ದೇವಸ್ಥಾನಕ್ಕೆ ಭೇಟಿ ಕೊಡುತ್ತೇವೆ. ಕೊನೆಯ ದಿನ ದಶಮಿ ಅಂದು ನಾವೆಲ್ಲರೂ ಮಕ್ಕಳಂತೆ ಕುಣಿದಾಡುತ್ತೇವೆ. ಸಿಂಧೂರ್ ಖೇಳ (ಹಣೆಗೆ ಕುಂಕುಮ ಇಡುವ ಸಂಪ್ರದಾಯ) ಆಚರಿಸಲಾಗುತ್ತದೆ. ನಾನು ಸಹ ಇದರಲ್ಲಿ ಭಾಗಿಯಾಗಿ ಸಂಭ್ರಮಿಸುತ್ತೇನೆ'' ಎಂದು ಐಂದ್ರಿತಾ ವಿವರ ನೀಡಿದರು.

ಇನ್ನು ಪ್ರಿಯಾಂಕಾ ಉಪೇಂದ್ರ ಅವರಿಗೆ ದುರ್ಗಾಪೂಜೆ ಎಂದರೆ ಎಲ್ಲಿಲ್ಲದ ಸಡಗರ. ''ಹಬ್ಬಕ್ಕೂ ಮುನ್ನವೇ ಕೋಲ್ಕತ್ತಾದ ತಮ್ಮ ಅಜ್ಜಿಯ ಮನೆಗೆ ಇಬ್ಬರು ಮಕ್ಕಳಾದ ಆಯುಶ್ ಮತ್ತು ಐಶ್ವರ್ಯ ಹೊರಟು ಹೋಗುತ್ತಾರೆ. ಈ ಬಾರಿಯ ದುರ್ಗಾಪೂಜೆಗೆ ನಾವೂ ಸಹ ಅಲ್ಲಿಗೆ ಹೋಗುತ್ತಿದ್ದೇವೆ. ದುರ್ಗಾಪೂಜೆಯನ್ನು ನಮ್ಮ ಆಂಟಿ ಮನೆಯಲ್ಲೇ ಆಚರಿಸಿಕೊಳ್ಳುತ್ತೇವೆ. ಈ ಬಾರಿ ಜತೆಗೆ ಮಕ್ಕಳಿರುವ ಕಾರಣ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ'' ಎನ್ನುತ್ತಾರೆ ಪ್ರಿಯಾಂಕಾ ಉಪೇಂದ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada