»   » 'ಸಾರಥಿ' ಚಿತ್ರೀಕರಣದಲ್ಲಿ ಶರತ್ ಕುಮಾರ್ ಗೆ ಗಾಯ

'ಸಾರಥಿ' ಚಿತ್ರೀಕರಣದಲ್ಲಿ ಶರತ್ ಕುಮಾರ್ ಗೆ ಗಾಯ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಚಿತ್ರ 'ಸಾರಥಿ'. ಈ ಚಿತ್ರದಲ್ಲಿ ನಡಿಗರ್ ಸಂಘಂ (ಕಲಾವಿದರ ಸಂಘ ಎಂದರ್ಥ) ಅಧ್ಯಕ್ಷ ಶರತ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಸಾರಥಿ' ಚಿತ್ರದ ಸಾಹಸ ಚಿತ್ರೀಕರಣದ ವೇಳೆ ಶರತ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಸದ್ಯಕ್ಕೆ ಪಾಂಡಿಚೆರಿಯಲ್ಲಿ 'ಸಾರಥಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಾಹಸ ಸನ್ನಿವೇಶಕ್ಕಾಗಿ ಪಾಲ್ಗೊಂಡಿದ್ದ ಶರತ್ ಕುಮಾರ್ ಕುದುರೆ ಸವಾರಿ ಮಾಡುವ ವೇಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟದ ಮೂಳೆ ಮುರಿದಿರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ದಿನಕರ್ ತೂಗುದೀಪ ಆಕ್ಷನ್, ಕಟ್ ಹೇಳುತ್ತಿರುವ ಸಾರಥಿ ಚಿತ್ರದಲ್ಲಿ ಶರತ್ ಕುಮಾರ್ ಅವರದು ಮಹತ್ವದ ಪಾತ್ರ. ಅಂಬ್ಯುಲೆನ್ಸ್ ಮೂಲಕ ಶರತ್ ಕುಮಾರ್ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯಕ್ಕೆ ಶರತ್ ಕುಮಾರ್ ತಮ್ಮ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಒಂದು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದು ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂದು ತಾಕೀತು ಮಾಡಿದ್ದಾರೆ. ಶರತ್ ಕುಮಾರ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರು ನಟಿಸುತ್ತಿರುವ ತಮಿಳು ಚಿತ್ರಗಳ ಚಿತ್ರೀಕರಣವನ್ನು ಮುಂದೂಡಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada