For Quick Alerts
  ALLOW NOTIFICATIONS  
  For Daily Alerts

  ಕಾಸರವಳ್ಳಿ ಸ್ಯಾಂಡಲ್‌ವುಡ್‌ನ ಸಜ್ಜನ!

  By *ಜಯಂತಿ
  |

  ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ 'ಕನಸೆಂಬ ಕುದುರೆಯನೇರಿ' ಚಿತ್ರದ ಚಿತ್ರೀಕರಣಕ್ಕೆ ತಮ್ಮ ಚಿತ್ರತಂಡ ಉತ್ತರ ಕರ್ನಾಟಕಕ್ಕೆ ಮರಳುವ ಮೊದಲು, ಚಿತ್ರದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ದಟ್ಸ್‌ಕನ್ನಡದೊಂದಿಗೆ ಮಾತನಾಡಿದರು. ಅವರ ಈಚಿನ ಚಿತ್ರ 'ಗುಲಾಬಿ ಟಾಕೀಸ್' ಅನೇಕ ಹಿರಿಮೆಗಳ ಚಿತ್ರ. ಓಸಿಯಾನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ 'ಗುಲಾಬಿ ಟಾಕೀಸ್" ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ. ಈ ಚಿತ್ರದಲ್ಲಿನ ನಟನೆಗಾಗಿ ನಟಿ ಉಮಾಶ್ರೀ ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

  'ಗುಲಾಬಿ ಟಾಕೀಸ್"ಗೆ ಸ್ವರ್ಣಕಮಲ ನಿರೀಕ್ಷಿಸ್ದಿದಿರಾ?

  ಇಲ್ಲ ಎಂದರೆ ಅದು ಸುಳ್ಳಾಗುತ್ತೆ. ಈ ಸಲ ರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಕನ್ನಡದ ಪ್ರಾತಿನಿಧ್ಯ ಸರಿಯಾಗಿ ಆಗಲಿಲ್ಲ. ಆ ಕಾರಣದಿಂದಾಗಿಯೇ ನಮ್ಮ ಚಿತ್ರಕ್ಕೆ ಪ್ರಶಸ್ತಿ ಬರಲಿಲ್ಲ. ಆದರೆ, ಉಮಾಶ್ರೀ ಅವರಿಗೆ ಸಂದ ಉತ್ತಮ ನಟಿ ಪ್ರಶಸ್ತಿ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಸ್ವರ್ಣಕಮಲ ಸಿಗುವುದಕ್ಕಿಂತಲೂ ದೊಡ್ಡ ಖುಷಿಯದು. ಆ ಸಂಭ್ರಮದಲ್ಲಿ ನಮ್ಮ ಚಿತ್ರಕ್ಕೆ ಸ್ವರ್ಣಕಮಲ ಬಾರದ ನಿರಾಶೆ ನಮ್ಮನ್ನು ಕಾಡುತ್ತಿಲ್ಲ.

  'ಗುಲಾಬಿ ಟಾಕೀಸ್" ಹಾಗೂ ಕಾಸರವಳ್ಳಿ ಒಡನಾಟ ಹೇಗನ್ನಿಸಿತು?

  ಅದೊಂದು ಅದ್ಭುತ ಅನುಭವ. ಗಿರೀಶ್ ಅವರೊಂದಿಗೆ ಸಿನಿಮಾ ಮಾಡುವುದೇ ಒಂದು ಸಂಭ್ರಮ. ಅವರಂಥ ಮತ್ತೊಬ್ಬ ಸಜ್ಜನ ವ್ಯಕ್ತಿಯನ್ನು ಕನ್ನಡ ಚಿತ್ರರಂಗದಲ್ಲಿ ನಾನು ಕಂಡಿಲ್ಲ. ಅವರೊಂದಿಗೆ ಮೂರನೇ ಸಿನಿಮಾ ಮಾಡುತ್ತಿದ್ದೇನೆ. ಅವರು ಕನ್ನಡದ ಹೆಮ್ಮೆ. ಅವರಿಗೆ ನಾನು ಚಿರಋಣಿ. ಕಾಸರವಳ್ಳಿ ಅವರ ಸಂಪರ್ಕದಿಂದಾಗಿ ನಮ್ಮ ಚಿತ್ರಸಂಸ್ಥೆಗೊಂದು ಘನತೆ ಬಂದಿದೆ.

  ಒಳ್ಳೆಯ ಸಿನಿಮಾ ಮಾಡುವುದು ಸರಿ. ಆದರೆ ಅದು ಜನರಿಗೆ ತಲುಪದಿದ್ದರೆ ಹೇಗೆ?

  ಏನು ಮಾಡೋದು. ದೊಡ್ಡ ದೊಡ್ಡ ಚಿತ್ರಮಂದಿರಗಳು ಕೇಳುವ ಬಾಡಿಗೆ ಕೊಡೋದು ನಮಗೆ ಸಾಧ್ಯವಾಗೊಲ್ಲ. ಗುಲಾಬಿಯಂಥ ಚಿತ್ರಗಳನ್ನು ಬಿಡುಗಡೆ ಮಾಡಲು ಉದ್ಯಮದಿಂದ ಪ್ರೋತ್ಸಾಹವೂ ದೊರೆಯೊಲ್ಲ. ಇದು ಕಮರ್ಷಿಯಲ್ ಜಗತ್ತು! ನಾನು ನಿರ್ಮಾಪಕರ ಸಂಘದ ಅಧ್ಯಕ್ಷನಾಗಿದ್ದವನು. ಆದರೂ ನನ್ನ ಚಿತ್ರವನ್ನು ತೆರೆಕಾಣಿಸುವುದು ಕಷ್ಟ. ನಮ್ಮ ಅಭಿರುಚಿ ಚೆನ್ನಾಗಿರಬಹುದು. ಹಾಗೆಂದು, ಎಲ್ಲರಿಂದಲೂ ಅದನ್ನೇ ನಿರೀಕ್ಷಿಸುವುದು ಲೆಕ್ಕಾಚಾರದ ಜಗತ್ತಿನಲ್ಲಿ ಕಷ್ಟ.

  ಹಾಗಾದರೆ ಕಲಾತ್ಮಕ ಚಿತ್ರಗಳನ್ನು ಜನರಿಗೆ ಮುಟ್ಟಿಸೋದು ಹೇಗೆ?

  ನಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಕಾಲೇಜುಗಳಲ್ಲಿ ಸಿನಿಮಾ ತೋರಿಸುತ್ತಿದ್ದೇವೆ. ಕೋಲಾರ, ಶಿವಮೊಗ್ಗ, ಕರಾವಳಿ, ಬಿಜಾಪುರ- ಹೀಗೆ 'ಗುಲಾಬಿ ಟಾಕೀಸ್" ಸುತ್ತಾಟ ಸಾಗಿದೆ. ಜನರ ಪ್ರತಿಕ್ರಿಯೆ ಅದ್ಭುತವಾಗಿದೆ. ಕಲಾತ್ಮಕ ಚಿತ್ರಗಳ ಬಗ್ಗೆ ಜನರಿಗೆ ನಿಜವಾಗಲೂ ಒಲವಿದೆ.

  ಉಮಾಶ್ರೀ ಅವರೊಂದಿಗಿನ ಒಡನಾಟದಲ್ಲಿ ವಿಶೇಷ ಅನುಭವವೇನಾದರೂ ಇದೆಯಾ?

  ಅವರು ಅಪೂರ್ವ ನಟಿ. ಅದ್ಭುತ ನಟಿ. ಗುಲಾಬಿ ಟಾಕೀಸ್ ಚಿತ್ರೀಕರಣ ನಡೆದದ್ದು ಕುಂದಾಪುರ ಸಮೀಪದ ಕಡಲ ತೀರದಲ್ಲಿ. ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿತ್ತು. ಹಿರಿಯ ನಟಿಯೊಬ್ಬಳು ಕನಿಷ್ಠ ಸೌಕರ್ಯಗಳೂ ಇಲ್ಲದ ಪರಿಸರದಲ್ಲಿ ಯಾವುದೇ ತಕರಾರು ಎತ್ತದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಅನೇಕ ಸಂದರ್ಭಗಳಲ್ಲಿ ನನಗೆ ಮುಜುಗರವಾಗುತ್ತಿತ್ತು. ಅಂಥ ಸಂದರ್ಭಗಳನ್ನು ತೀರಾ ಸಹಜವಾಗಿ ಉಮಾಶ್ರೀ ನಿಭಾಯಿಸಿದರು. ಕಲಾವಿದೆಯಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಅವರು ದೊಡ್ಡವರು.

  ಹೊಸ ಚಿತ್ರದ ಬಗ್ಗೆ ಹೇಳಿ?

  ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಮಾಡಿಕೊಡಿ ಎಂದು ಗಿರೀಶರನ್ನು ತುಂಬಾ ಹಿಂದೆಯೇ ಕೇಳಿಕೊಂಡಿದ್ದೆ. ಆ ಭಾಗದ ಜನಜೀವನ ಭಾಷೆಯನ್ನು ಬಿಂಬಿಸುವ ಒಳ್ಳೆಯ ಸಿನಿಮಾ ಮಾಡುವ ಆಸೆ ನನಗಿತ್ತು. ಆ ಆಸೆ ಅಮರೇಶರ ಕಥೆಯ ಮೂಲಕ ಕಾಸರವಳ್ಳಿ ನನಸಾಗಿಸುತ್ತಿದ್ದಾರೆ. ಕನಸೆಂಬ ಕುದುರೆಯನೇರಿ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೇವೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X