»   » ಉಪೇಂದ್ರ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ ಟೆಕ್ಕಿ

ಉಪೇಂದ್ರ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ ಟೆಕ್ಕಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಮುಂದಿನ 'ಸೂಪರ್' ಚಿಹ್ನೆಯ ಚಿತ್ರದಲ್ಲಿ ಅಭಿನಯಿಸಲು ಟೆಕ್ಕಿಯೊಬ್ಬರಿಗೆ ಅವಕಾಶ ಕೊಟ್ಟಿದ್ದಾರೆ. ಟೆಕ್ಕಿಗೆ ಐದು ನಿಮಿಷಗಳಲ್ಲಿ ಅಭಿನಯ ತರಬೇತಿ ನೀಡಿ ಎಲ್ಲಾ ಓಕೆ ಎಂದು ಆಕ್ಷನ್, ಕಟ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಯೊಂದರಲ್ಲಿ ಸಂಭ್ರಮದ ಕ್ಷಣಗಳಿಗೆ ಉಪೇಂದ್ರ ಕಾರಣರಾಗಿದ್ದಾರೆ.

ಬರೋಬ್ಬರಿ ಹತ್ತು ವರ್ಷಗಳ ನಂತರ 'ಸೂಪರ್' ಚಿತ್ರಕ್ಕೆ ಉಪೇಂದ್ರ ಆಕ್ಷನ್, ಕಟ್ ಹೇಳುತ್ತಿರುವುದು ಗೊತ್ತೆ ಇದೆ. ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ನಯನತಾರಾ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಉಪೇಂದ್ರ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಚಿತ್ರ.

ಇಷ್ಟಕ್ಕೂ ಉಪೇಂದ್ರ ಚಿತ್ರದಲ್ಲಿ ಅವಕಾಶ ಗಿಟ್ಟಿಸಿರುವ ಯುವಕನ ಹೆಸರು ಎಸ್ ವಿಶ್ವನಾಥ್ ಅಂತ. ಬೆಂಗಳೂರಿನ ಇಕೊ ಸ್ಪೇಸ್ ಎಂಬ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ.ಇದೀಗ ಉಪೇಂದ್ರ ಚಿತ್ರದ ತಾರಾಬಳಗದಲ್ಲಿ ಒಬ್ಬರು. ''ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್''ನ ಪ್ರಧಾನ ಕಾರ್ಯದರ್ಶಿಯಾಗಿಯೂ ವಿಶ್ವನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೆಲ್ಲಾಆಗಿದ್ದು ಹೇಗೆಂದರೆ...ಕಳೆದ ವಾರ 'ಸೂಪರ್' ಚಿತ್ರದ ಚಿತ್ರೀಕರಣ ಇಕೊ ಸ್ಪೇಸ್ ಸಾಫ್ಟ್ ವೇರ್ ಕಂಪನಿಯ ಕ್ಯಾಂಪಸ್ ನಲ್ಲಿ ನಡೆಯುತ್ತಿತ್ತು. ಮುಂಜಾನೆಯಿಂದ ಸಂಜೆಯ ತನಕ ಸತತ ಚಿತ್ರೀಕರಣ. ಚಿತ್ರದಲ್ಲಿ ಸಾಫ್ಟ್ ವೇರ್ ಉದ್ಯೋಗಿಯೊಬ್ಬನ ಪಾತ್ರವೊಂದು ಇದೆಯಂತೆ. ಈ ಪಾತ್ರಕ್ಕೆ ಸಾಫ್ಟ್ ವೇರ್ ಉದ್ಯೋಗಿಯೇ ಯಾಕಾಗಬಾರದು ಎನ್ನಿಸಿದ್ದೆ ತಡ. ಉಪೇಂದ್ರ ಅದೇ ಕ್ಯಾಂಪಸ್ ನ ವಿಶ್ವನಾಥ್ ಎಂಬ ಐಟಿ ಉದ್ಯೋಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಅಲ್ಲವೆ ಅಭಿಮಾನಿಗಳು ಉಪೇಂದ್ರನನ್ನು ರಿಯಲ್ ಸ್ಟಾರ್ ಅಂತ ಕರೆಯೋದು!

''ನಟನಾಗುತ್ತೇನೆ ಎಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಚಿತ್ರದಲ್ಲಿ ಅವಕಾಶ ಕೊಡುವುದರ ಜೊತೆಗೆ ಹೇಗೆ ಅಭಿನಯಿಸಬೇಕು ಎಂಬುದನ್ನು ಸ್ಥಳದಲ್ಲೆ ಉಪೇಂದ್ರತಿಳಿಸಿದರು. ಅವರು ಹೇಳಿದಂತೆ ಮಾಡಿದೆ. ಮೂರು ಟೇಕ್ ಗಳಲ್ಲಿ ಶಾಟ್ ಓಕೆ ಆಯಿತು. ನನಗಾಗಿ ಅವರೆ ಸಂಭಾಷಣೆಯನ್ನು ಬರೆದಿದ್ದಾರೆ. ಅಂದಕೊಂಡಂತೆ ಚಿತ್ರೀಕರಣವನ್ನು ಮುಗಿಸಿದರು'' ಎನ್ನುತ್ತಾರೆ ವಿಶ್ವಾನಾಥ್.

ಈ ಪಾತ್ರಕ್ಕಾಗಿ ಉಪೇಂದ್ರ ಆಡಿಷನ್ ಸಹ ನಡೆಸಿದ್ದರು. ಆದರೆ ಅವರಿಗೆ ಯಾರೂ ಅಷ್ಟಾಗಿ ಇಷ್ಟವಾಗಿರಲಿಲ್ಲ. ಕಡೆಗೆ ನನ್ನನ್ನು ಆಯ್ಕೆ ಮಾಡಿಕೊಂಡು ಅವಕಾಶಕೊಟ್ಟಿದ್ದಾರೆ. ಉಪೇಂದ್ರ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಬಹಳ ಕಲಾವಿದರಿಗೆ ಇರುತ್ತದೆ. ಅವರಿಗೆ ಸಿಗದ ಅವಕಾಶ ನನಗೆ ಸಿಕ್ಕಿದ್ದಕ್ಕೆ ನಿಜಕ್ಕೂ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ವಿಶ್ವನಾಥ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada