twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನಿಗೆ ಕರವೇ ಸಂಪಾದಕರ ಬಹಿರಂಗ ಪತ್ರ

    By * ದಿನೇಶ್ ಕುಮಾರ್ ಎಸ್ ಸಿ, ಸಂಪಾದಕ, ನಲ್ನುಡಿ
    |

    Dinesh Kumar, Editor, Karave Nalnudi
    ಪ್ರಿಯ ಶಿವಣ್ಣ,

    ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ, ನೆರೆ ಬಂದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದಾಗ, ಬೆಂಗಳೂರು ಜನರು ಒಳಚರಂಡಿ ನೀರನ್ನೇ ಶುದ್ಧಗೊಳಿಸಿ ಕುಡಿಯಬೇಕು ಎಂದು ಕಾವೇರಿ ನ್ಯಾಯಮಂಡಳಿ ಆದೇಶ ಹೊರಡಿಸಿದಾಗ, ಕನ್ನಡದ ಮಕ್ಕಳ ಉದ್ಯೋಗವನ್ನು ಇನ್ಯಾವುದೋ ರಾಜ್ಯಗಳ ಜನರು ಅಕ್ರಮವಾಗಿ ಕಿತ್ತುಕೊಂಡಾಗ ಹೀಗೆ ಪ್ರಾಣತ್ಯಾಗದ ಮಾತನ್ನು ಚಿತ್ರೋದ್ಯಮದವರು ಆಡಿದ ಉದಾಹರಣೆ, ನಡೆದುಕೊಂಡ ಉದಾಹರಣೆಯೂ ಇಲ್ಲ.

    ಅದು ಹಾಗಿರಲಿ, ಅಣ್ಣಾವ್ರು ಗೋಕಾಕ್ ವರದಿ ಜಾರಿಗಾಗಿ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಿದರು. ಕನ್ನಡವೇ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂಬುದು ಆ ಆಂದೋಲನದ ಮೂಲಗುರಿಯಾಗಿತ್ತು. ಇವತ್ತು ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಎಗ್ಗಿಲ್ಲದೆ ಮೆರೆಯುತ್ತಿವೆ. ಅಣ್ಣಾವ್ರು ಬದುಕಿದ್ದರೆ, ಇವತ್ತಿನ ಸ್ಥಿತಿಯಲ್ಲಿ ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಇರಲಿ ಎಂದು ಹೇಳುತ್ತಿದ್ದರೇನೋ, ಇದು ಅಣ್ಣಾವ್ರ ಅಭಿಮಾನಿಗಳಾದ ನನ್ನಂಥವರ ಅನಿಸಿಕೆ.

    ಯಾಕೆ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಕನ್ನಡ ಚಿತ್ರರಂಗದವರು ಇಷ್ಟೊಂದು ಕೆರಳುತ್ತಾರೆ ಶಿವಣ್ಣ? ಈಗ ನೋಡಿ, ನೀವು ಕೂಡ ನೂರು ಸಿನಿಮಾ ಮಾಡಿದ್ದೀರಿ. ಅದರಲ್ಲಿ ಕನ್ನಡದ ಕಥೆಗಳೆಷ್ಟು, ರೀಮೇಕ್ ಸಿನಿಮಾಗಳೆಷ್ಟು? ಎಷ್ಟು ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರಲಾಗಿದೆ? ಎಷ್ಟು ಸಿನಿಮಾಗಳಲ್ಲಿ ಬೇರೆ ಭಾಷೆ ಸಿನಿಮಾಗಳ ತುಣುಕುಗಳನ್ನು ಕದ್ದು ತೂರಿಸಲಾಗಿದೆ? ಇದೆಲ್ಲ ನಿಮಗೆ ಗೊತ್ತಿರುವಂಥದ್ದೇ, ಇದನ್ನು ತಡೆಯುವುದೂ ಸಹ ನಿಮ್ಮ ಕೈಯಲ್ಲಿಲ್ಲ.

    ಬೇರೆ ಭಾಷೆ ಸಿನಿಮಾಗಳ ಹಂಗಲ್ಲೇ ಬದುಕುತ್ತಿರುವ ಕನ್ನಡ ಚಿತ್ರೋದ್ಯಮ ಡಬ್ಬಿಂಗ್ ವಿಷಯದಲ್ಲಿ ಮಾತ್ರ ತೊಡೆತಟ್ಟಿ ನಿಲ್ಲುವುದು ಹಾಸ್ಯಾಸ್ಪದ ಅನಿಸೋದಿಲ್ವೇ? ಅದೆಲ್ಲ ಹೋಗಲಿ, ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಯಾಕೆ ಡಬ್ ಮಾಡ್ತೀರಿ? ಆ ಭಾಷೆ ನಟರು ಪ್ರಾಣ ಕಳೆದುಕೊಂಡರೂ ಪರವಾಗಿಲ್ಲವೇ?

    ಶಿವಣ್ಣ, ಪ್ರಾಣ ಕಳೆದುಕೊಳ್ಳುವ ಮಾತು ಬೇಡ. ಕನ್ನಡ ಭಾಷೆಯ ಉಳಿವಿಗಾಗಿಯೇ ಇವತ್ತು ಡಬ್ಬಿಂಗ್ ಬೇಕಾಗಿರೋದು. ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಅದರ ಡಬ್ಬಿಂಗ್ ಆವೃತ್ತಿಗಳನ್ನು ನಾವು ನೋಡುತ್ತೇವೆ. ಚೆನ್ನಾಗಿಲ್ಲದಿದ್ದರೆ ತಿರಸ್ಕರಿಸುತ್ತೇವೆ. ಹಾಗೆ ನೋಡಿದರೆ ನಮಗೆ ಶಾರೂಕ್, ಚಿರಂಜೀವಿ, ರಜಿನಿಗಿಂತ ನೀವೇ ಇಷ್ಟ. ನಿಮ್ಮ ಸಿನಿಮಾಗಳು ಸ್ಪರ್ಧೆ ಮಾಡಲಿ ಬಿಡಿ, ಯಾಕೆ ಈ ಅಂಜುಬುರುಕುತನ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ?

    ಕಡೇದಾಗಿ ಒಂದು ಮಾತು. ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದಾಗ ಇದ್ದ ಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಡಬ್ಬಿಂಗ್ ವಿವಾದಕ್ಕೆ ದಯವಿಟ್ಟು ಅಣ್ಣಾವ್ರನ್ನು ಎಳೆಯಬೇಡಿ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬ ಸಿನಿಮಾ ನೋಡುಗನಿಗೂ ಅವನದೇ ಆದ ಮೂಲಭೂತ ಸ್ವಾತಂತ್ರ್ಯವಿರುತ್ತದೆ. ಅದನ್ನು ಗೌರವಿಸೋಣ.

    English summary
    Dubbing of other language movies to Kannada should be allowed. We are living in a democratic country. Lets be sportive and accept the challenge - An open letter to Kannada movie hero, Dr Rajkumars eldest son Shivarajkumar. Letter by Dinesh Kumar SC , chief editor. Karave Nalnudi- Kannada monthly magazine
    Wednesday, April 25, 2012, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X