»   » ವಾರ್ತಾ ಇಲಾಖೆ ಹೊಸ್ತಿಲಲ್ಲಿ ಎದ್ದೇಳು ಮಂಜುನಾಥ

ವಾರ್ತಾ ಇಲಾಖೆ ಹೊಸ್ತಿಲಲ್ಲಿ ಎದ್ದೇಳು ಮಂಜುನಾಥ

Posted By:
Subscribe to Filmibeat Kannada

ಕರ್ನಾಟಕ ಘನ ಸರಕಾರ 2009-10ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಚಿತ್ರ ನಿರ್ಮಾಪಕರು, ನಿರ್ದೇಶಕರು ಪ್ರಶಸ್ತಿಗಾಗಿ ಅರ್ಜಿ ಗುಜರಾಯಿಸಲು ವಾರ್ತಾ ಇಲಾಖೆಯ ಹೊಸ್ತಿಲು ತುಳಿದಿದ್ದಾರೆ. ಈ ಬಾರಿ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿದೆ.

ಕಳೆದ ವರ್ಷ ಬಿಡುಗಡೆಯಾದ ಒಟ್ಟು 115 ಚಿತ್ರಗಳಲ್ಲಿ ಪ್ರಶಸ್ತಿಗೆ ಅರ್ಹತೆ ಪಡೆದ ಚಿತ್ರಗಳ ಸಂಖ್ಯೆ ಕೇವಲ 50. ಉಳಿದ ಚಿತ್ರಗಳೆಲ್ಲಾ ರೀಮೇಕ್ ಎಂಬುದು ಕಠೋರ ಸತ್ಯ. ಕಳೆದ ವರ್ಷ ಬಾಕ್ಸಾಫೀಸಲ್ಲಿ ಸದ್ದು ಮಾಡಿದ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರವೂ ಪ್ರಶಸ್ತಿಗೆ ಅರ್ಹವಲ್ಲ ಎಂಬುದು ಆಸಕ್ತಿಕರ ಸಂಗತಿಗಳಲ್ಲಿ ಒಂದು. ತೆಲುಗಿನ 'ರೆಡಿ' ಚಿತ್ರದ ರೀಮೇಕ್ ಇದಾಗಿತ್ತು.

ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ಸು ದಾಖಲಿಸಿದ ಮತ್ತೊಂದು ಚಿತ್ರ 'ಸವಾರಿ' ಸಹ ಪ್ರಶಸ್ತಿಗೆ ದೂರವಾಗಿದೆ. ಕಾರಣ ಸ್ಪಷ್ಟ, ಇದೂ ತೆಲುಗಿನ 'ಗಮ್ಯಂ' ಚಿತ್ರದ ರಿಮೇಕ್. ಯೋಗರಾಜಭಟ್ಟರ 'ಮನಸಾರೆ', ಗುರು ಪ್ರಸಾದ್ ನಿರ್ದೇಶನದ 'ಎದ್ದೇಳು ಮಂಜುನಾಥ' ಹಾಗೂ ಪ್ರೇಮ್ ನಿರ್ದೇಶನದ 'ರಾಜ್ ದಿ ಶೋ ಮ್ಯಾನ್' ಚಿತ್ರಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ.

'ಪೃಥ್ವಿ' ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಬಳ್ಳಾರಿ ಧೂಳೆಬ್ಬಿಸಿರುವ ಪುನೀತ್ ರಾಜ್ ಕುಮಾರ್ ಗೆ ಯಡಿಯೂರಪ್ಪ ಈ ವರ್ಷ ಪ್ರಶಸ್ತಿ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. 'ಎದ್ದೇಳು ಮಂಜುನಾಥನಿ'ಗಂತೂ ಒಂದು ಪ್ರಶಸ್ತಿ ಕಟ್ಟಿಟ್ಟ ಬುತ್ತಿ. ಇನ್ನು ಭಟ್ಟರ 'ಮನಸಾರೆ' ಸಹ ಪ್ರಶಸ್ತಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಾರ್ತಾ ಇಲಾಖೆ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರುವ 50 ಚಿತ್ರಗಳಲ್ಲಿ ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಬೇಕಾಗಿದೆ. ಯಾರಿಗೆ ಯಾವ ವಿಭಾಗದಲ್ಲಿ ಪ್ರಶಸ್ತಿ ದೊರೆಯಲಿದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada