»   » ನಾವಿಕದಲ್ಲಿ ಹ್ಯಾಟ್ರಿಕ್ ಹೀರೋ ಶಿವತಾಂಡವ

ನಾವಿಕದಲ್ಲಿ ಹ್ಯಾಟ್ರಿಕ್ ಹೀರೋ ಶಿವತಾಂಡವ

Posted By:
Subscribe to Filmibeat Kannada

ಅಮೆರಿಕಾದ ನ್ಯೂ ಜರ್ಸಿ ಪ್ರಾಂತ್ಯದಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಪುನೀತ್ ಅವರನ್ನು ಅಕ್ಕದ ಬ್ರ್ಯಾಂಡ್ ಅಂಬಾಸಡರ್ ಎಂದೂ ನಾಮಕರಣ ಮಾಡಲಾಗಿದೆ. ಇದೀಗ ನಾವೇನು ಕಮ್ಮಿ ಎಂಬಂತೆ ಪುನೀತನ ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಾವಿಕ (ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ)ಸಂಸ್ಥೆ ಕನ್ನಡ ಸಮ್ಮೇಳನಕ್ಕೆ ಆಹ್ವಾನಿಸಿದೆ. ಲಾಸ್ ಏಂಜಲೀಸ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವತಾಂಡವಕ್ಕೆ ವೇದಿಕೆ ಸಿದ್ಧವಾಗಿದೆ.

ಅನಿವಾಸಿ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳಿಗೆ ತಾರಾ ರಂಗು ಬಳಿಯುವುದು ಇಂದು ನಿನ್ನೆಯದಲ್ಲ. ಅಣ್ಣ ರಾಜ್ ಕುಮಾರ್ ಅವರಿಂದ ಮೊದಲುಗೊಂಡು ಕನ್ನಡ ಚಿತ್ರ ರಂಗದ ಅನೇಕ ತಮ್ಮ ತಂಗಿಯರು ಅನಿವಾಸಿ ಬಳಗವನ್ನು ರಂಜಿಸಿದ್ದಾರೆ. ಕಳೆದ ವಾರವಷ್ಟೆ ರಘು ದೀಕ್ಷಿತ್ ಲಂಡನ್ ವಸಂತೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.

'ಜೋಗಿ 'ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದ ಜೆನ್ನಿಫರ್ ಕೊತ್ವಾಲ್ ಸಹ ನಾವಿಕ ಆಹ್ವಾನಿತರಲ್ಲಿ ಒಬ್ಬರು. ಶರ್ಮಿಳಾ ಮಾಂಡ್ರೆ, ಮೇಘನಾ, ರಮೇಶ್ ಅರವಿಂದ್ ಕೂಡ ನಾವಿಕದ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಕಾಣಿಸುತ್ತಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ ಇತರ ಸಾಂಸ್ಕೃತಿಕ ಕ್ಷೇತ್ರಗಳನ್ನು ಪ್ರತಿನಿಧಿಸುವ ಕರ್ನಾಟಕ ಕವಿ ಕಲಾವಿದರ ಜತೆಗೆ ನಾವಿಕ ಸಮ್ಮೇಳನಕ್ಕೆ ರಾಜ್ಯಾಡಳಿತ ಕಲಾವಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ.

ನಾವಿಕ ಸಮ್ಮೇಳನದಲ್ಲಿ ಕಲಾವಿದರು, ಸಾಹಿತಿಗಳು, ಥಳುಕು ಬಳುಕು ತಾರೆಗಳು, ರಾಜಕಾರಣಿಗಳು, ಉದ್ಯಮಿಗಳು ಹೀಗೆ ನಾನಾ ವಿಭಾಗಗಳಲ್ಲಿ ಹೆಸರು ಮಾಡಿರುವವರು ಭಾಗಿಯಾಗಲಿದ್ದಾರೆ. ಸೋಜಿಗವೆಂಬಂತೆ ಕನ್ನಡ ಚಿತ್ರರಂಗದ ಒಬ್ಬೇ ಒಬ್ಬ ನಿರ್ಮಾಪಕನಾಗಲೀ ಅಥವಾ ನಿರ್ದೇಶಕನಾಗಲೀ ಅಥವಾ ತಂತ್ರಜ್ಞನ ಹೆಸರು ಪಟ್ಟಿಯಲ್ಲಿಲ್ಲದಿರುವುದು ಚಕಿತಗೊಳಿಸಿದೆ. 2010ನೇ ಸಾಲಿನ ನಾವಿಕ ಸಮ್ಮೇಳನ ಜುಲೈ 2 ರಿಂದ ಆರಂಭವಾಗಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada