»   »  ನಾಗೇಶ್ ಚೆಲುವಿನ ಕೂಸು ಒಲವೇ ವಿಸ್ಮಯ!

ನಾಗೇಶ್ ಚೆಲುವಿನ ಕೂಸು ಒಲವೇ ವಿಸ್ಮಯ!

Subscribe to Filmibeat Kannada

ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ. ಜನರ ಹುತ್ತ. ನಡುವೆ ಸುದ್ದಿಮಿತ್ರರೊಟ್ಟಿಗೆ ಚಿತ್ರತಂಡ. ಕಥೆಯ ಎಳೆ ಹೇಳಿ ಎಂಬ ಪ್ರೀತಿಯ ನಿವೇದನೆಗೆ ಚಿತ್ರತಂಡದ ಯಾರೊಬ್ಬರೂ ಕರಗಲಿಲ್ಲ. ಗುಟ್ಟು ಮಾಡುವುದೀಗ ಮಾಮೂಲು. ಇದೂ ಪ್ರೇಮಕಥೆ. ಹೆಸರು 'ಒಲವೇ ವಿಸ್ಮಯ'.

ಎಸ್.ನಾರಾಯಣ್, ಎಂ.ಎಸ್.ರಾಜಶೇಖರ್ ಹಾಗೂ ನಂಜುಂಡೇಗೌಡ ಅವರ ಸಹಾಯಕರಾಗಿ ಕೆಲಸ ಮಾಡಿದ ಅನುಭವ ನಿರ್ದೇಶಕ ಬಿ.ಎನ್.ನಾಗೇಶ್ ಅವರದ್ದು. ಸರೋಜಿನಿ ಧಾರಾವಾಹಿ ನಿರ್ದೇಶಿಸಿದ್ದೂ ಅವರೇ. ಈಗ ಚಂದನ ವಾಹಿನಿಯಲ್ಲಿ ಅವರ ನಿರ್ದೇಶನದ ಹೃದಯ ಸಾಕ್ಷಿ ಧಾರಾವಾಹಿ ಪ್ರಸಾರವಾಗುತ್ತಿದೆ.

ಏಳೆಂಟು ವರ್ಷದ ಹಿಂದೆ ದೂರದರ್ಶನಕ್ಕೆಂದು ಅವರು ಒಲವು ಸೆಳೆದ ಹಾದಿ ಟೆಲಿಚಿತ್ರ ಮಾಡಿದ್ದರು. ಒಲವೇ ವಿಸ್ಮಯ ಕೂಡ ಅದೇ ಕಥೆಯನ್ನು ಒಳಗೊಂಡಿದೆ. ಸಿನಿಮಾ ಆಗಿ ಅದನ್ನು ಅಪ್‌ಡೇಟ್ ಮಾಡಲು ಏನೇನು ಬೇಕೋ ಅದೆಲ್ಲವನ್ನೂ ಹಾಕಿದ್ದಾರೆ. ಆರು ಹಾಡುಗಳು, ಎರಡು ಫೈಟ್‌ಗಳು ಉಂಟು.

ಚಿತ್ರದ ನಾಯಕ ಧರ್ಮ ಕೀರ್ತಿರಾಜ್. ನವಗ್ರಹ ಸಿನಿಮಾದ ಕಣ್ ಕಣ್ಣ ಸಲಿಗೆ ಹಾಡಿನಲ್ಲಿ ಗುರುತಾದ ಹುಡುಗ. ನಾಯಕನಾಗಿ ಇದು ಮೊದಲ ಸಿನಿಮಾ. ನಾಯಕಿ ಪ್ರತಿಭಾ ರಾಣಿ. ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಮುಖ. ಸುಂದರಶ್ರೀ ಅವರಲ್ಲಿ ಅಭಿನಯ ಕಲಿತಿರುವ ಈಕೆ ಎರಡು ವರ್ಷದಿಂದ ಅವಕಾಶದ ಬೇಟೆಯಲ್ಲಿದ್ದರು. ಬೇಟೆ ಈಗ ಸಿಕ್ಕಿದೆ.

ಕಾರಂಜಿ ಸಿನಿಮಾಗೆ ಕೆಲಸ ಮಾಡಿರುವ ಗುರುಪ್ರಶಾಂತ್ ರೈ ಛಾಯಾಗ್ರಹಣ, ಬನದ ನೆರಳು ಚಿತ್ರದ ಸಾಲುಗಳನ್ನು ಮೂಡಿಸಿದ್ದ ಬಸವರಾಜ್ ಸೂಳೇರಿಪಾಳ್ಯ ಸಂಭಾಷಣೆ ಚಿತ್ರಕ್ಕಿದೆ. ಸಂಗೀತ ನಿರ್ದೇಶಕ ವೀರ ಸಮರ್ಥ್. ಎರಡು ಹಾಡುಗಳ ಕೆಲಸವನ್ನು ಅವರು ಸಂಪೂರ್ಣ ಮುಗಿಸಿದ್ದಾರೆ.

ಬೆಂಗಳೂರು, ಮಡಿಕೇರಿ, ಗುಲ್ಬರ್ಗ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಚಿತ್ರೀಕರಣ ನಿಗದಿಯಾಗಿದೆ. 45ದಿನಗಳಲ್ಲಿ ಶೂಟಿಂಗ್ ಮುಗಿಸುವುದು ನಾಗೇಶ್ ಯೋಚನೆ. ನಿರ್ಮಾಪಕ ಲಿಂಗರಾಜ್ ಕೂಡ ಇದನ್ನು ಬೆಂಬಲಿಸಿದ್ದಾರೆ. ತಿಪಟೂರು ತಾಲ್ಲೂಕಿನ ಜಕ್ಕನಹಳ್ಳಿಯ ಲಿಂಗರಾಜ್ ಕೊಬ್ಬರಿ ಮರ್ಚೆಂಟ್. ಸಿನಿಮಾಗೆ ಅವರು ಬಂಡವಾಳ ಹೂಡುತ್ತಿರುವುದು ಇದೇ ಮೊದಲು. ನಾಯಕಿಯ ತಂದೆ ಪಾತ್ರದಲ್ಲಿ ಅನಂತನಾಗ್ ಅಭಿನಯಿಸುತ್ತಿದ್ದಾರೆ. ಅವರು ಖಾಸಗಿ ಕೆಲಸಕ್ಕೆ ಹೊರಡುವ ತರಾತುರಿಯಲ್ಲಿದ್ದರು. ಸ್ಕ್ರಿಪ್ಟ್‌ನಲ್ಲಿ ಧಮ್ ಇರುವ ಹಾಗಿದೆ ಎಂದಷ್ಟೇ ಅವರು ಹೇಳಿದ್ದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅನಂತ್, ಸುಹಾಸಿನಿ 'ಎರಡನೇ ಮದುವೆ' ಅಂತ್ಯ!
ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!
ಸೌಂದರ್ಯ ಜಗದೀಶ್ ಗೆ ಪುನೀತ್ ಕಾಲ್ ಶೀಟ್
ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada