»   »  'ಸೂರ್ಯಕಾಂತಿ' ಅರಳುವ ಸಮಯ ಹತ್ತಿರ

'ಸೂರ್ಯಕಾಂತಿ' ಅರಳುವ ಸಮಯ ಹತ್ತಿರ

Subscribe to Filmibeat Kannada

ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಎರಡನೇ ಚಿತ್ರ 'ಸೂರ್ಯಕಾಂತಿ' ಅರಳುವ ಸಮಯ ಹತ್ತಿರ ಬಂದಿದೆ. ಅವಿಘ್ನ ಮೀಡಿಯ ವತಿಯಿಂದ ಎಂ. ವಾಸು ಅರ್ಪಿಸುವ, ಬಿ.ಎನ್. ಸುಜಾತ ನಿರ್ಮಾಪಿಸಿರುವ ಸೂರ್ಯಕಾಂತಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಚಿತ್ರದ ನಾಯಕ ಚೇತನ್ ಹಾಗೂ ನಾಯಕಿ ರೆಜೀನಾ. ಇತರ ಮುಖ್ಯ ಪಾತ್ರಗಳಲ್ಲಿ ತಮಿಳಿನ ಖ್ಯಾತ ನಟ ನಾಸಿರ್, ಕನ್ನಡದ ರಾಮಕೃಷ್ಣ, ಕಿಶೋರಿ ಬಲ್ಲಾಳ, ಆಸಿಫ್ ಹಾಗೂ ರಾಮ್‌ಗೋಪಾಲ ವರ್ಮಾ ಗರಡಿಯಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಗಣೇಶ್ ಯಾದವ್ ಇದ್ದಾರೆ.

ಈ ಚಿತ್ರಕ್ಕೆ ಸಂಗೀತ ನೀಡಿರುವವರು ಇಳಯರಾಜ. ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಕಲ್ಯಾಣ್ ಮತ್ತಿತರರು ರಚಿಸಿದ್ದಾರೆ. ಶ್ರೇಯಾ ಗೋಶಾಲ್, ಕುನಾಲ್ ಗಾಂಜಾವಾಲಾ, ಕಾರ್ತಿಕ್ ಹಾಗೂ ಇತರ ಖ್ಯಾತ ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ.

ಈ ಚಿತ್ರಕ್ಕೆ ಹೆಚ್.ಸಿ. ವೇಣು ಛಾಯಾಗ್ರಹಣ, ಹರಿದಾಸ್ ಕೆ.ಜಿ.ಎಫ್ ಸಂಕಲನ, ದಿನೇಶ್ ಮಂಗಳೂರು ಕಲೆ, ರವಿವರ್ಮಾ ಅವರ ಸಾಹಸ ದೃಶ್ಯಗಳು ಹಾಗೂ ರಾಮಕೃಷ್ಣ ಪ್ರಸಾದನ ನೀಡಿದ್ದಾರೆ. ಪ್ರೇಮ, ಸಾಹಸ, ಘರ್ಷನೆ, ಕೌಟುಂಬಿಕ ವಾತ್ಸಲ್ಯ ಈ ಎಲ್ಲಾ ಗುಣಗಳೂ ಕಾಣಿಸಿಕೊಳ್ಳುವ ಸೂರ್ಯಕಾಂತಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದವರು ಕನ್ನಡದ ಶ್ರೇಷ್ಠ ಸಾಹಿತಿ ಕೆ.ವೈ. ನಾರಾಯಣಸ್ವಾಮಿ.

ರಷ್ಯಾ ಗಡಿಗೆ ಅಂಟಿಕೊಂಡಿರುವ ಉಜ್‌ಬೇಕಿಸ್ತಾನ, ಉತ್ತರ ಭಾರತದ ಉತ್ತರಾಂಚಲ ಪರ್ವತ ಶ್ರೇಣಿ, ಗೋವಾ, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಸೂರ್ಯಕಾಂತಿಯ ಚಿತ್ರೀಕರಣ ನಡೆದಿದೆ. ಸುಮಾರು ೭೦ ದಿನಗಳ ಕಾಲ ಸುಧೀರ್ಘ ಚಿತ್ರೀಕರಣ ನಡೆಸಿ ಕಳೆದ ವಾರ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿತು. ಅತ್ಯುತ್ತಮ ಚಿತ್ರಕಥೆ, ಇಂಪಾದ ಸಂಗೀತ, ಪಕ್ವವಾದ ನಟರು ಹಾಗೂ ನುರಿತ ತಂಡ ಹೊಂದಿರುವ ಸೂರ್ಯಕಾಂತಿ ಚಿತ್ರದ ಡಬ್ಬಿಂಗ್ ಈಗ ಮುಗಿದಿದ್ದು, ಅತಿ ಶೀಘ್ರದಲ್ಲೇ ಈ ಚಿತ್ರ ತೆರೆ ಕಾಣಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada