»   » ಗಡಿಯಲ್ಲಿ ಈ ವಾರ 56 ಚಿತ್ರಗಳು ಬಿಡುಗಡೆ

ಗಡಿಯಲ್ಲಿ ಈ ವಾರ 56 ಚಿತ್ರಗಳು ಬಿಡುಗಡೆ

Subscribe to Filmibeat Kannada

ಬೀದರ, ಡಿ.28: ಕನ್ನಡ ವಾಕ್ಚಿತ್ರಕ್ಕೆ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜನವರಿ 2ರಿಂದ 8 ರವರೆಗೆ ಬೀದರಿನಲ್ಲಿ ಕನ್ನಡ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಕನ್ನಡ ಚಲನಚಿತ್ರ ರಂಗದ ಅಮೃತಮಹೋತ್ಸವ ಅಂಗವಾಗಿ ಕನ್ನಡದಲ್ಲಿ ತಯಾರಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ಹಾಗೂ ಜನಾದರಣೆ ಪಡೆದ ಚಿತ್ರಗಳನ್ನು ಸಾರ್ವಜನಿಕರಿಗೆ ತೋರಿಸುವ ಉದ್ದೇಶದಿಂದ ಗಡಿನಾಡ ಕನ್ನಡ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.

ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಈ ಚಲನಚಿತ್ರೋತ್ಸವ ಬೆಳಗಾವಿ, ಬೀದರ, ರಾಯಚೂರು, ಕೋಲಾರ ಮತ್ತು ಚಾಮರಾಜನಗರಗಳಲ್ಲಿನಡೆಯಲಿವೆ. ಬೀದರಿನ ಫರ್ದೀನ್ ಮತ್ತು ಮಿನಿದೀಪಕ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯಲಿದೆ.

ಇದರಲ್ಲಿ ಸ್ವರ್ಣಕಮಲ ಪಡೆದ ಚಿತ್ರಗಳು, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು, ಅಂತಾರಾಷ್ಟ್ರೀಯ ಮನ್ನಣೆ ಪಡೆದ ಚಿತ್ರಗಳು, ಪೌರಾಣಿಕ, ಐತಿಹಾಸಿಕ, ಜಾನಪದ ಚಿತ್ರಗಳು, ಸಾಹಿತ್ಯಕೃತಿ ಆಧರಿಸಿದ ಚಿತ್ರಗಳು ಸೇರಿದಂತೆ ಕನ್ನಡದ ಮಹತ್ವದ ಚಲನಚಿತ್ರಗಳು ಪ್ರದರ್ಶನ ಕಾಣಲಿವೆ. ಪ್ರತಿದಿನ ಬೆಳಿಗ್ಗೆ ಮಕ್ಕಳ ಮನೋವಿಕಾಸದ ಉದ್ದೇಶದಿಂದ ತಯಾರಾದ ಉತ್ತಮ ಕಥಾ ಹಂದರವುಳ್ಳ ಆಯ್ದ ಮಕ್ಕಳ ಚಿತ್ರಗಳ ಪ್ರದರ್ಶನವಿರುತ್ತದೆ.

ಪ್ರತಿದಿನ ಎರಡು ಚಲನಚಿತ್ರ ಮಂದಿಗಳಲ್ಲಿ ತಲಾ ನಾಲ್ಕು ಪ್ರದರ್ಶನ ನಡೆಯಲಿದೆ. ಒಂದು ವಾರಗಳ ಕಾಲ ಒಟ್ಟು 56 ಚಿತ್ರಗಳ ಪ್ರದರ್ಶನ ನಡೆಯಲಿದೆ. ಗಡಿಜಿಲ್ಲೆಗಳ ಚಲನಚಿತ್ರ ಪ್ರೇಕ್ಷಕರಿಗೆ ಕನ್ನಡದ ಉತ್ಕೃಷ್ಟ ಹಾಗೂ ಮಹತ್ವದ ಚಿತ್ರಗಳನ್ನು ನೋಡುವ ಸದಾವಕಾಶವನ್ನು ಈ ಚಲನಚಿತ್ರೋತ್ಸವ ಕಲ್ಪಿಸಿಕೊಡಲಿದೆ. ಪ್ರದರ್ಶನಕ್ಕೆ ಪ್ರವೇಶ ಸಂಪೂರ್ಣವಾಗಿ ಉಚಿತವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada