ಶಂಕರಣ್ಣ ನೀವು ಇಂದು ಇರಬೇಕಾಗಿತ್ತಣ್ಣ

ಒಂದಲ್ಲ ಒಂದು ಕಾರಣಕ್ಕೆ ಶಂಕರಣ್ಣ ನೆನಪಾಗುತ್ತಲೆ ಇರುತ್ತಾರೆ. ಶಂಕರಣ್ಣ ಕನ್ನಡ ಚಿತ್ರರಂಗವನ್ನು ಅಗಲಿ ಗುರುವಾರಕ್ಕೆ (ಸೆ.30) ಭರ್ತಿ ಇಪ್ಪತ್ತು ವರ್ಷಗಳು ತುಂಬುತ್ತವೆ. ಕಳೆದು ಹೋದ ಈ ಇಪ್ಪತ್ತು ವರ್ಷಗಳಲ್ಲಿ ಅವರಂತಹ ಅಪ್ಪಟ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ದೊರೆಯಲಿಲ್ಲ ಎಂಬುದು ದುರಂತ.
ಖಾಕಿ ತೊಡುವ ಮೂಲಕ ಪೊಲೀಸ್ ಚಿತ್ರಗಳನ್ನು ಹೀಗೂ ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದರು. ಅವರ ಪ್ರಯೋಗಗಳು ಒಂದೇ ಎರಡೇ. ನಂದಿಬೆಟ್ಟಕ್ಕೆ ರೋಪ್ ವೇ ಹಾಕುವ ಕನಸು, ಫ್ಲೈ ಓವರ್ ಗಳ ಕಲ್ಪನೆಯೇ ಇಲ್ಲದ ಕಾಲದಲ್ಲಿ ಅವುಗಳ ಬಗ್ಗೆ ಯೋಚನೆ, ಸಾರ್ವಜನಿಕರಿಗೆ ಕಂಟ್ರಿ ಕ್ಲಬ್ಬು ಹೀಗೇ ಅವರ ಕನಸುಗಳು ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರಲಿಲ್ಲ.
ಸದಾ ಕ್ರಿಯಾಶೀಲರಾಗಿದ್ದ ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿದರು. ಕಿರುತೆರೆಯಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಮುಖ್ಯವಾಗಿ ಯುವ ನಿರ್ದೇಶಕರು, ಕಲಾವಿದರಿಗೆ ಸ್ಫೂರ್ತಿಯಾಗಿದ್ದರು. ಕನ್ನಡ ಚಿತ್ರೋದ್ಯಮದ ಬಗ್ಗೆ ಶಂಕರಣ್ಣನಂತೆ ವಿಭಿನ್ನವಾಗಿ ಆಲೋಚಿಸುವ ಒಂದೆರಡು ತಲೆಗಳು ತುರ್ತು ಬೇಕಾಗಿವೆ. ಇಲ್ಲದಿದ್ದರೆ ಕನ್ನಡ ಚಿತ್ರರಂಗ ಹಳಿ ತಪ್ಪಿದ ಗೂಡ್ಸ್ ರೈಲಿನಂತಾಗುತ್ತದೆ.


Click it and Unblock the Notifications











