»   » 'ಮಠ' ಗುರುಪ್ರಸಾದ್ ಮೇಲೆ ಜಗ್ಗೇಶ್ ಪರೋಕ್ಷ ದಾಳಿ

'ಮಠ' ಗುರುಪ್ರಸಾದ್ ಮೇಲೆ ಜಗ್ಗೇಶ್ ಪರೋಕ್ಷ ದಾಳಿ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರು ಡಬ್ಬಿಂಗ್ ವಿರುದ್ಧ ಮಡುಗುಗಟ್ಟಿದ್ದ ತಮ್ಮ ಆಕ್ರೋಶ, ಅಸಹನೆಯನ್ನು ಸೋಮವಾರ (ಜ.27) ಹೊರಹಾಕಿದರು. ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಡಬ್ಬಿಂಗ್ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು. ಡಾ.ರಾಜ್ ಕುಮಾರ್ ವೇದಿಕೆ ಮೇಲೆ ಅವರು ಬಹಳ ಸುದೀರ್ಘವಾಗಿ ಡಬ್ಬಿಂಗ್ ವಿರುದ್ಧ ಮಾತನಾಡಿದರು. ಓವರ್ ಟು ಜಗ್ಗೇಶ್...

"ಗಾಸಿಪ್ ಮಾಂಗರ್ ಎಂಬ ದೊಡ್ಡ ನೇಚರ್ ಕರ್ನಾಟಕದಲ್ಲಿದೆ. ಇದನ್ನು ರಾಜಕಾರಣಿಗಳು ಬಹಳಷ್ಟು ಬೆಳಸಿಕೊಳ್ಳುತ್ತಾರೆ. ಇತ್ತೀಚೆಗೆ ಇದೇ ಸಂಸ್ಕೃತಿಯನ್ನು ಸಿನಿಮಾದವರು ಬೆಳೆಸಿಕೊಳ್ಳಲು ಶುರುಮಾಡಿದ್ದಾರೆ. ಅದೆಲ್ಲಾ ಬಿಟ್ಟುಬಿಡಿ. ಸಿನಿಮಾ ನಮ್ಮ ಜೀವನ ಅಲ್ಲ.

ಸಿನಿಮಾದಿಂದ ನಾವು ಜೀವನ ಮಾಡಬೇಕು ಎಂದಿಲ್ಲ. ನಾವೆಲ್ಲಾ ಹೆಮ್ಮೆ ಪಡುತ್ತೇವೆ. ಸುಮಾರು ಮೂವತ್ತು ವರ್ಷ ನಮಗೆ ಊಟ ಹಾಕಿದ್ದೀರಿ. ನಾವೆಲ್ಲಾ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದವರು. ನನ್ನಂತಹ ಅದೆಷ್ಟೋ ಕಲಾವಿದರಿಗೆ ಮೂವತ್ತು, ಮೂವ್ವತ್ತೈದು ವರ್ಷ ಜೀವನ ಕೊಟ್ಟಿದ್ದೀರಿ. [ಬಂದ್ ಗೆ 'ಮಠ' ಗುರು, ನಿರ್ಮಾಪಕ ಸಂಘ ವಿರೋಧ]

ನೂರಾರು ವರ್ಷ ಈ ಕನ್ನಡ ಚಿತ್ರರಂಗ ಉಳಿಯಬೇಕು

ನಾವೆಲ್ಲಾ ಚೆನ್ನಾಗಿದ್ದೀವಿ, ಆರಾಮವಾಗಿದ್ದೀವಿ. ಆದರೆ ಮುಂದಿನ ಪೀಳಿಗೆಯವರು ಬಾಯಿಗೆ ಮಣ್ಣಾಕಿಸಿಕೊಂಡು ಹೋಗಲೀನಾ? ಇನ್ನೂ ನೂರಾರು ವರ್ಷ ಈ ಕನ್ನಡ ಚಿತ್ರರಂಗ ಉಳಿಯಬೇಕು. ನೂರಾರು ಜನ ಕಲಾವಿದರು ಬರಬೇಕು. ಡಾ.ರಾಜ್ ಕುಮಾರ್ ಕಾಲದಿಂದ ಬಂದಂತಹ ನಮ್ಮ ಕನ್ನಡತನವನ್ನು ಮುಂದುವರಿಸಬೇಕು.

ನಮ್ಮ ಕನ್ನಡದ ನಟರನ್ನು ಬೆಂಬಲಿಸಿ

ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಿದ್ದಾರೆ ಅಂತ ಅಲ್ಲ. ಮಾಧ್ಯಮಗಳಲ್ಲೂ ವಿಶೇಷವಾದಂತಹ ಶಕ್ತಿ ಇದೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಈಗ ಏನಾಗಿದೆ ಅಂದರೆ ತೆಲುಗುನಲ್ಲಿ ನೋಡಿ ಎನ್ಟಿಆರ್ ಮೊಮ್ಮಗ ಏನು ಎತ್ತರ ಅವ್ನೆ, ತಮಿಳಲ್ಲಿ ನೋಡು ಸೂರ್ಯ ಹಿಂಗವ್ನೆ ಹಂಗವ್ನೆ, ಯಾಕ್ರಪ್ಪಾ ನಮ್ಮ ಕನ್ನಡದ ಮಕ್ಕಳು ಕೊಟ್ಟಿಲ್ವಾ ಇಪ್ಪತ್ತು ಕೋಟಿ, ಮೂವತ್ತು ಕೋಟಿ ಹೇಳಿ ಅವರ ಬಗ್ಗೆ ನಿರಂತರವಾಗಿ ಮಾತನಾಡಿ.

ಶತ್ರುಗಳು ನಮ್ಮ ಜೊತೆಗೆ ಇದ್ದಾರೆ

ನಮಗೆ ನೋವಾಗುವಂತಹ ವಿಚಾರ ಏನೆಂದರೆ. ನಮಗೆ ಶತ್ರುಗಳು ಎಲ್ಲೂ ಇಲ್ಲಪ್ಪಾ. ನಮ್ಮ ಜೊತೆಯಲ್ಲೇ ಇದ್ದಾರೆ. ಇಲ್ಲೇ ಇದ್ದು ಕಾಲೆಳೆಯುತ್ತಾರೆ. ನೆನ್ನೆನೋ ಮೊನ್ನೆನೋ ಬಂದಂತಹವನು ಎರಡೇ ಎರಡು ಚಿತ್ರ ಮಾಡಿಬಿಟ್ಟು ಏಳು ವರ್ಷ ಪಬ್ಲಿಸಿಟಿ ತಗೊಂಡ. ಎರಡೇ ಎರಡು ಸಿನಿಮಾ ಮಾಡಿದ್ದು ಅವ್ನು.

ಮಠ ಗುರುಪ್ರಸಾದ್ ಮೇಲೆ ಜಗ್ಗೇಶ್ ಗರಂ

ಈಗ ಅವನು ನಾನು ಡಬ್ಬಿಂಗ್ ಪರವಾಗಿಯೇ ಇದ್ದೇನೆ. ಯಾಕೆಂದರೆ ನಾನು ಇಪ್ಪತ್ತೆಂಟು ವರ್ಷಗಳಲ್ಲಿ ಸರ್ವೇನೆ ಮಾಡಿಬಿಟ್ಟಿದ್ದೀನಿ ಹಾಗೆ ಹೀಗೆ ಎಂದು ಹೇಳಿಕೊಳ್ಳುತ್ತಿದ್ದಾನೆ. ಮೊನ್ನೆ ಯಾರನ್ನೋ ಕೇಳ್ದೆ ಏನಾಯಿತು ಅವನಿಗೆ ಎಂದೆ. ಸಣ್ಣ ವಯಸ್ಸಿನಲ್ಲೇ ಬಿದ್ದುಬಿಟ್ಟು ತಲೆಗೆ ಪೆಟ್ಟಾಗಿತ್ತು. ಈಗ ಅವನು ತಲೆಕೆಟ್ಟಿರಬೇಕು ಎಂದರು.

ನಮ್ಮ ಮನೆಗೆ ಬೆಂಕಿ ಇಡುವ ಮಾತಾಡಬೇಡಿ

ಅವರಿಗೂ ನಾನು ವಿನಂತಿ ಮಾಡುತ್ತೇನೆ. ನೀವು ನಮ್ಮ ಮನೆ ಮಗ ರೀ. ನೀನು ಕನ್ನಡದವನು. ನೀನ್ಯಾಕಯ್ಯಾ ನಮ್ಮ ಮನೆಗೆ ಬೆಂಕಿ ಇಡುವ ಮಾತಾಡುತ್ತಿದ್ದೀಯಾ. ದಯವಿಟ್ಟು ಮಾತನಾಡಬೇಡಿ. ಈ ಹೊತ್ತು ಕನ್ನಡ ಚಿತ್ರರಂಗಕ್ಕೆ ಕೈಹಾಕಿದ್ದೀರಿ. ನಾಳೆ ಕನ್ನಡಿಗರ ಭಾವನೆಗಳಿಗೆ ಕೈಹಾಕುತ್ತೀರಿ.

ಡಬ್ಬಿಂಗ್ ಕನ್ನಡ ಸಂಸ್ಕೃತಿಯನ್ನೂ ಹಾಳು ಮಾಡುತ್ತದೆ

ಇದು ಈ ಹೊತ್ತು ಬಹಳ ಸಣ್ಣ ವಿಚಾರವಾಗಿ ಕಾಣಬಹುದು. ಮುಂದೊಂದು ದಿನ ಇದು ಬೃಹತ್ ಪ್ರಮಾಣದಲ್ಲಿ ಕಾಳ್ಗಿಚ್ಚಾಗಿ ಬದಲಾಗಬಹುದು. ಯಾವುದ್ಯಾವುದೋ ಭಾಷೆಯ ಚಿತ್ರಗಳಿಗೆ ಬಾಯಿ ಅಲ್ಲಾಡಿಸುವುದು ಬಹಳ ಕೆಟ್ಟದಾಗಿರುತ್ತದೆ ಗೊತ್ತಾ. ಡಬ್ಬಿಂಗ್ ಸಂಸ್ಕೃತಿ ಕನ್ನಡ ಸಂಸ್ಕೃತಿಯನ್ನೂ ಹಾಳು ಮಾಡುತ್ತದೆ.

ಬೇಕಿದ್ದರೆ ಉರುಳುಸೇವೆ ಮಾಡುತ್ತೇನೆ

ಇಲ್ಲಿ ನೆರೆದಿರುವ ಎಲ್ಲಾ ಮಾಧ್ಯಮಗಳಿಗೂ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಬಂಗಾರದ ಕಾಲುಗಳಿಗೆ ಮುಗಿಯುತ್ತೇನೆ. ನಿಮ್ಮ ಟಿ.ವಿ.ಸ್ಟೇಷನ್ ಮುಂದೆ ಉರುಳು ಸೇವೆ ಮಾಡುತ್ತೇನೆ. ನೀವು ಹೇಳಿದ ಕೆಲಸವೆಲ್ಲಾ ಮಾಡುತ್ತೇನೆ. ದಯವಿಟ್ಟು ನಾನು ಕೇಳಿಕೊಳ್ಳುವುದಿಷ್ಟೇ ಮೊದಲು ಕನ್ನಡಕ್ಕೆ ಕೈ ಎತ್ತಿ. ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ.

ರಂಗರಾವ್ ಕ್ಲೋಸಪ್ ನಲ್ಲಿ ಮಕಕ್ಕೆ ಉಗಿದಿದ್ದರು

ಎಸ್.ವಿ.ರಂಗರಾವ್ ಮಹಾನ್ ಕಲಾವಿದರು. 'ಮಾಯಾಬಜಾರ್' ಎಂಬ ಚಿತ್ರವನ್ನು ಡಬ್ಬಿಂಗ್ ಮಾಡಿ ಕನ್ನಡಕ್ಕೆ ಬಂದಿತ್ತು. ಅವರೇ ಬೆಂಗಳೂರಿಗೆ ಬಂದು ಆ ಚಿತ್ರವನ್ನು ನೋಡಿ. ಡಬ್ಬಿಂಗ್ ಮಾಡಿದವರನ್ನು ಹತ್ತಿರ ಕರೆದು ಕ್ಲೋಸಪ್ ನಲ್ಲಿ ಮಕಕ್ಕೆ ಕ್ಯಾಕರಿಸಿ ಉಗಿದಿದ್ದರು.

ಕಮಲ್ ಹಾಸನ್ ಕೂಡ ಅದೇ ಮಾತನ್ನು ಆಡಿದ್ದಾರೆ

ಏನು ಇಷ್ಟು ಕೆಟ್ಟದಾಗಿದೆ. ಇನ್ಮೇಲೆ ಯಾವಾನಾರ ನನ್ನ ಚಿತ್ರಗಳನ್ನು ಡಬ್ಬಿಂಗ್ ಮಾಡಿದರೆ ನಾನು ಡೇಟ್ ಕೊಡೋದಿಲ್ಲ ಎಂದು ಹೇಳಿದ್ದರಂತೆ. ಜನ ಇಷ್ಟಪಡಲ್ಲ ಎಂದು ಆ ಹೊತ್ತೆ ರಂಗರಾಯರು ವ್ಯಕ್ತಪಡಿಸಿದ್ದರು. ನೆನ್ನೆ ಕೂಡ ಕಮಲಹಾಸನ್ ಅದೇ ಮಾತನ್ನು ಹೇಳಿದ್ದಾರೆ. ಆದರೆ ಅವರು ಹೇಳಿದ ಇನ್ನೊಂದು ಮಾತು ಬಹಳ ಬೇಸರ ತರಿಸಿತು.

ತುಂಬಾ ವಿಶಾಲ ಹೃದಯಿಗಳು ಕನ್ನಡಿಗರು

ತುಂಬಾ ವಿಶಾಲ ಹೃದಯಿಗಳು ಕನ್ನಡಿಗರು. ಒಂಭತ್ತು ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾರೆ ಎಂದು. ನಾವು ಹೇಳಬೇಕಾಗಿತ್ತು. ಎಂತಹ ಅದ್ಭುತವಪ್ಪಾ ಕನ್ನಡದ ಜನ. ನಮ್ಮ ಕನ್ನಡ ಚಿತ್ರವನ್ನು ಕನ್ನಡಿಗರು ನೋಡುತ್ತಿಲ್ಲವಲ್ಲಾ ಎಂದು ಬೇಸರವಾಯಿತು.

ಅಮೆರಿಕಾದಲ್ಲಿ ಎಂಟು ಲಕ್ಷ ಕನ್ನಡಿಗರಿದ್ದಾರೆ

ತಮಿಳುನಾಡಿನಲ್ಲಿ ಕನ್ನಡಿಗರಿಲ್ಲ ಎಂದು ಭಾವಿಸಬೇಡಿ. ಸುಮಾರು 27 ಲಕ್ಷ ಜನ ತಮಿಳುನಾಡಿನಲ್ಲಿ ಕನ್ನಡಿಗರಿದ್ದಾರೆ. ಹದಿನೆಂಟು ಲಕ್ಷ ಜನ ಆಂಧ್ರದಲ್ಲಿ ಕನ್ನಡಿಗರಿದ್ದಾರೆ. ಅಮೆರಿಕಾದಲ್ಲಿ ಎಂಟು ಲಕ್ಷ ಜನ ಕನ್ನಡಿಗರಿದ್ದಾರೆ. ಕೆನಡಾದಲ್ಲಿ ನಾಲ್ಕು ಲಕ್ಷದಷ್ಟು ಕನ್ನಡಿಗರಿದ್ದಾರೆ.

ಕನ್ನಡ ಚಿತ್ರಗಳನ್ನು ನೊಡುವ ಸ್ವಾಭಿಮಾನ ಬೆಳೆಸಿಕೊಳ್ಳಿ

ನಮ್ಮ ಯೋಗ್ಯತೆಗೆ ನಮ್ಮ ಚಿತ್ರವನ್ನು ಅಲ್ಲೆಲ್ಲಾ ನೋಡುವಂತಹ ಸ್ವಾಭಿಮಾನವನ್ನು ಬೆಳೆಸಿಕೊಂಡಿಲ್ಲ. ತಾತ್ಸಾರ ಮನೋಭಾವ. ನಮ್ಮನ್ನು ನಾವೇ ತೆಗಳುವಂತಹ ಬುದ್ಧಿ. ಅದ್ಯಾರು ಕಲಿಸಿಕೊಟ್ಟರೋ ನನಗೆ ಗೊತ್ತಿಲ್ಲ. ದಯಮಾಡಿ ನಮ್ಮ ಸಿನಿಮಾವನ್ನು ಹಾಳು ಮಾಡಲು ಬಿಡಬೇಡಿ ಎಂದು ಜಗ್ಗೇಶ್ ವಿನಂತಿಸಿಕೊಂಡರು. ಕನ್ನಡಿಗರಾಗಿ ಮೊದಲ ಆದ್ಯತೆ ಕನ್ನಡಿಗರಿಗೆ ಕೊಡಿ.

English summary
Kannada actor Navarasa Nayaka Jaggesh indirectly attacks Matha fame director Guruprasad. The actors will participate in the rally from the Mysore Bank Circle to the Dr. Rajkumar podium erected on the Central College grounds on Monday, 27th January, 2014. Kannada film personalities Ravichandran, Yash, Jaggesh, Gurukiran, Pooja Gandhi, Srinath, Bharathi among others were present.
Please Wait while comments are loading...