»   » ದರ್ಶನ್ 'ಸಂಗೊಳ್ಳಿ ರಾಯಣ್ಣ' ಬಿಡುಗಡೆ ಗೊಂದಲ?

ದರ್ಶನ್ 'ಸಂಗೊಳ್ಳಿ ರಾಯಣ್ಣ' ಬಿಡುಗಡೆ ಗೊಂದಲ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬರಲಿರುವ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಬಿಡುಗಡೆ ಯಾವಾಗ ಎಂಬುದಕ್ಕೆ ಸಂಬಂಧಿಸಿದಂತೆ ಗಾಂಧಿನಗರದಲ್ಲಿ ಗೊಂದಲಮಯ ಚರ್ಚೆಗಳು ಆರಂಭವಾಗಿವೆ. ಕಾರಣ, ಈ ಚಿತ್ರ ಮುಂದಿನ ತಿಂಗಳು, ಅಂದರೆ ಆಗಷ್ಟ್ 15, 2012 ರಂದು ತೆರೆಗೆ ಬರಲಿದೆ ಎಂಬ ಚಿತ್ರತಂಡದ ಮಾತನ್ನು ಗಾಂಧಿನಗರ ಒಪ್ಪುತ್ತಿಲ್ಲ.

ಚಿತ್ರತಂಡ ಹೇಳುತ್ತಿರುವ ಪ್ರಕಾರ, ಸ್ವಾತಂತ್ರ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನವಾದ ಆಗಷ್ಟ್ 15 ರಂದೇ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಬಿಡುಗಡೆ ಮಾಡಲಾಗುವುದು. ಅಂದೇ ಬಿಡುಗಡೆ ಮಾಡಿದರೆ ಅದಕ್ಕೊಂದು ಅಪೂರ್ವ ಅರ್ಥವೂ ಸಿಗಲಿದೆ. ಅದಕ್ಕಾಗಿ ಭರ್ಜರಿ ಸಿದ್ಧತೆಗಳೂ ನಡೆಯುತ್ತಿವೆ.

ಆದರೆ ಈಗಿನ ಚಿತ್ರತಂಡದ ಪರಿಸ್ಥಿತಿ ಗಮನಿಸಿದರೆ ಆಗಸ್ಟ್ 15ಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳು ತೀರಾ ಕಡಿಮೆ. ಕಾರಣ, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು. ತೀರಾ ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾ ಕಷ್ಟಪಟ್ಟು ತಮ್ಮ ಡಬ್ಬಿಂಗ್ ಮುಗಿಸಿದ್ದಾರೆ. ಐತಿಹಾಸಿಕ ಚಿತ್ರದ ಪಾತ್ರವಾದ ಕಾರಣ ಡಬ್ಬಿಂಗ್ ಅಷ್ಟು ಸುಲಭವಲ್ಲ. ಹೀಗಾಗಿ ದರ್ಶನ್‌ ಅವರಿಗೆ ಡಬ್ಬಿಂಗ್ ಮಾಡಲು ಸುಮಾರು 20 ದಿನಗಳೇ ಬೇಕಾಗಿದೆಯಂತೆ.

ಚಿತ್ರದಲ್ಲಿನ ಬೇರೆ ಕಲಾವಿದರ ಡಬ್ಬಿಂಗ್ ಕೂಡ ಮುಗಿದಿದೆ. ಆದರೆ, ಕಂಪ್ಯೂಟರ್ ಗ್ರಾಫಿಕ್ಸ್, ಡಿಟಿಎಸ್, ರೀ-ರೆಕಾರ್ಡಿಂಗ್ ಕೆಲಸಗಳು ಇನ್ಮುಂದೆ ನಡೆಯಬೇಕಿದೆ. ಇವು ಅರ್ಜೆಂಟ್ ನಲ್ಲಿ ಮುಗಿಯುವ ಕೆಲಸಗಳಲ್ಲ. ಹೀಗಿರುವಾಗ, ಆಗಸ್ಟ್ 15ರಂದೇ ಬಿಡುಗಡೆ ಅಸಾಧ್ಯದ ಮಾತು ಎಂಬುದು ಗಾಂಧಿನಗರದಲ್ಲಿನ ಕೆಲವು ಪಂಡಿತರ ಮಾತು.

ಆನಂದ್ ಅಪ್ಪುಗೋಳ್ ನಿರ್ಮಾಣ, ನಾಗಣ್ಣ ನಿರ್ದೇಶನದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ. ರಾಣಿ ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ಜಯಪ್ರದಾ ನಟಿಸಿದ್ದಾರೆ. ದರ್ಶನ್ ಅವರಿಗೆ ಜೋಡಿಯಾಗಿ ನಿಖಿತಾ ತುಕ್ರಾಲ್ ಇದ್ದಾರೆ. ಶ್ರೀನಿವಾಸ ಮೂರ್ತಿ, ಶಶಿಕುಮಾರ್, ಧರ್ಮ, ಉಮಾಶ್ರೀ, ಕರಿಬಸವಯ್ಯ ಮುಂತಾದವರು ಪ್ರಮುಖ ಪೋಷಕವರ್ಗದಲ್ಲಿ ನಟಿಸಿದ್ದಾರೆ.

ಬರೋಬ್ಬರಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸವೇ ತೀರಾ ವೇಳೆಯನ್ನು ಕಬಳಿಸಲಿದೆ. ಪೋಸ್ಟ್ ಪ್ರೊಡಕ್ಷನ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೇಶವ್ ಆದಿತ್ಯರ ಪ್ರಕಾರ, ಚಿತ್ರ ಆಗಸ್ಟ್ 15ಕ್ಕೂ ಮೊದಲು ಸಿದ್ಧವಾಗಲಿದೆ. ಚಿತ್ರದ ತಂತ್ರಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ತೀರಾ ತರಾತುರಿಯಲ್ಲಿ ಮಾಡಿ ಮುಗಿಸಲಾಗದು ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ನಿರ್ದೇಶಕ ನಾಗಣ್ಣ, ಕೇಶವ್ ಆದಿತ್ಯರ ಮಾತನ್ನು ಅನುಮೋದಿಸಿದ್ದಾರೆ. "ನಮಗೆ ಚಿತ್ರವನ್ನು ಆಗಸ್ಟ್ 15ರಂದೇ ಬಿಡುಗಡೆ ಮಾಡುವುದೇ ಮುಖ್ಯವಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ, ನಾವು ಮಾಡಿದ ಚಿತ್ರ ಮೊದಲು ನಮಗೆ ತೃಪ್ತಿ ಕೊಡುವಂತಿರಬೇಕು. ಬಿಡುಗಡೆ ನಂತರ ಪ್ರೇಕ್ಷಕರಿಂದ ಬರುವ ಫಲಿತಾಂಶ ನಮಗೆ ಮುಖ್ಯ" ಎಂದಿದ್ದಾರೆ ನಾಗಣ್ಣ.

ಹೀಗೆ ವಾದ-ವಿವಾದಗಳು, ಚರ್ಚೆಗಳ ಮಧ್ಯೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ತೆರೆಯ ಮೇಲೆ ಬರುವುದು ಯಾವಾಗ ಎಂಬುದಕ್ಕೆ ಪಕ್ಕಾ ಉತ್ತರವಿಲ್ಲ. ಚಿಂಗಾರಿ ನಂತರ ದರ್ಶನ್ ಅಭಿಮಾನಿಗಳಿಗೆ ದರ್ಶನ್ ಅವರ ಯಾವ ಚಿತ್ರವೂ ಬಾರದಿರುವುದರಿಂದ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಸಹಜವಾಗಿದೆ. ಆದರೆ ಬಿಡಗಡೆ ದಿನಾಂಕ ಎಂದು..? (ಒನ್ ಇಂಡಿಯಾ ಕನ್ನಡ)

English summary
Challenging Star Darshan upcoming movie 'Krantiveera Sangolli Rayanna' release is becoming an issue. Because, as the movie team told, this movie releases on 15th August 2012. But, according to the Gandhinagar sources it won't possible due to required post production works. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada