twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ವಿವಾದಕ್ಕೆ ನಾಂದಿ ಹಾಡಿದ ಸಂಗೊಳ್ಳಿ ರಾಯಣ್ಣ

    By Rajendra
    |

    ಇತ್ತೀಚೆಗೆ ಏನೇನು ವಿವಾದಗಳಿಲ್ಲದೆ ಬಣಬಣ ಎನ್ನುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿವಾದ ಧುತ್ತನೆ ತಲೆಯೆತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭಾರಿ ಬಜೆಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸಂಗೊಳ್ಳಿ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    ಸಂಗೊಳ್ಳಿ ಗ್ರಾಮಸ್ಥರು ಹೇಳುವುದೇನೆಂದರೆ, ಇಡೀ ತನ್ನ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಂತಹ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ. ಇಂತಹ ಮಹಾನ್ ನಾಯಕನಿಗೆ ಚಿತ್ರದಲ್ಲಿ ಅಪಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

    ಅವರ ಆಕ್ಷೇಪಕ್ಕೆ ಕಾರಣವಾಗಿರುವ ಅಂಶಗಳು ಹೀಗಿವೆ. ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಮದುವೆ ಮಾಡುವ ಸನ್ನಿವೇಶವಿದೆ. ಆದರೆ ನೈಜವಾಗಿ ರಾಯಣ್ಣನಿಗೆ ಮದುವೆಯಾಗಿರಲಿಲ್ಲ. ಇದು ಸಾಲದು ಎಂಬಂತೆ ಹಾಡು ಕುಣಿತಗಳ ಮೂಲಕ ಅಸಭ್ಯವಾಗಿ ಚಿತ್ರಿಸಿ ರಾಯಣ್ಣನ ಪಾತ್ರಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪ.

    ಮಹಾನ್ ದೇಶಭಕ್ತನಾಗಿದ್ದ ರಾಯಣ್ಣ ಈ ರೀತಿ ಹುಡುಗಿಯರ ಜೊತೆ ಹಾಡಿ, ಕುಣಿದು ಮೋಜು ಮಸ್ತಿ ಮಾಡಿರಲಿಲ್ಲ. ಆದರೆ ಚಿತ್ರದಲ್ಲಿ ರಾಯಣ್ಣ ಹೀರೋಯಿನ್ ಜೊತೆ ಕುಣೀತಾನೆ. ನಟಿಯರ ಜೊತೆ ಹಾಡುತ್ತಾನೆ. ಇದಿಷ್ಟೇ ಅಲ್ಲದೆ ಚಿತ್ರದಲ್ಲಿ ರಾಯಣ್ಣನ ವೇಷ ಭೂಷಣ ಹಾಗೂ ನಡವಳಿಕೆಯನ್ನೂ ವಿಭಿನ್ನವಾಗಿ ತೋರಿಸಲಾಗಿದೆಯಂತೆ.

    ಚಿತ್ರ ಇನ್ನೂ ಬಿಡುಗಡೆಯೇ ಆಗಿಲ್ಲ. ಆದರೂ ಇಷ್ಟೆಲ್ಲಾ ವಿವರಗಳು ಹೇಗೆ ಗೊತ್ತಾಯಿತು ಎಂದರೆ, ನಮಗೆ ಸಿಕ್ಕ ಮಾಹಿತಿ ಪ್ರಕಾರ ಚಿತ್ರದಲ್ಲಿ ಈ ಸನ್ನಿವೇಶಗಳಿವೆ ಎನ್ನುತ್ತಾರೆ ಸಂಗೊಳ್ಳಿ ಗ್ರಾಮಸ್ಥರು. ಚಿತ್ರ ತೆಗೆಯುವುದಕ್ಕೂ ಮುನ್ನ ನಮ್ಮೂರಿಗೆ ಒಮ್ಮೆ ಬಂದು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕಾಗಿತ್ತು ಎನ್ನುತ್ತಾರೆ ಸಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ ಒಕ್ಕುಂದಮಠ್.

    ಅವರು ಮಾತನಾಡುತ್ತಾ, "ಚಿತ್ರದಲ್ಲಿ ರಾಯಣ್ಣ ಕುದುರೆ ಹತ್ತಿ ಯುದ್ಧ ಮಾಡುವಂತೆ ತೋರಿಸಲಾಗಿದೆ. ಆದರೆ ನೈಜವಾಗಿ ರಾಯಣ್ಣ ಕುದುರೆ ಹತ್ತಿ ಯುದ್ಧ ಮಾಡಿಲ್ಲ. ಅವರು ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳಿಗೆ ಹೆಸರಾಗಿದ್ದರು" ಎನ್ನುತ್ತಾರೆ.

    ರಾಯಣ್ಣನ ವಂಶಸ್ಥರು ಈಗಲೂ ನಮ್ಮ ಊರಿನಲ್ಲಿದ್ದಾರೆ. ಅವರನ್ನೆಲ್ಲಾ ಭೇಟಿಯಾಗಿ ಮಾಹಿತಿ ಕಲೆಹಾಕಿಬೇಕಾಗಿತ್ತು. ಕನಿಷ್ಠ ಚಿತ್ರದ ಮೊದಲ ಸನ್ನಿವೇಶವನ್ನೂ ನಮ್ಮ ಊರಿನಲ್ಲಿ ತೆಗೆದಿಲ್ಲ. ಯಾವ ಆಧಾರದ ಮೇಲೆ ಇವರು ಚಿತ್ರವನ್ನು ತೆಗೆದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡುವುದು ಸರಿಯಲ್ಲ ಎಂಬುದು ರಾಜಶೇಖರ್ ವಾದ.

    ಈ ಬಗ್ಗೆ ಅವರು ಹೈಕೋರ್ಟ್ ಮೆಟ್ಟಿಲೇರುವುದಾಗಿಯೂ, ಸೆನ್ಸಾರ್ ಮಂಡಳಿ ಬಾಗಿಲು ತಟ್ಟುವುದಾಗಿಯೂ ತಿಳಿಸಿದ್ದಾರೆ. ವಿಚಿತ್ರ ಎಂದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರು ಇದೇ ಊರಿನವರು ಎನ್ನಲಾಗಿದೆ.

    ಸರಿಸುಮಾರು ರು.30 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, 77 ವರ್ಷಗಳ ಕನ್ನಡ ಸಿನಿ ಇತಿಹಾಸದಲ್ಲೇ ಭಾರಿ ಬಜೆಟ್ ಚಿತ್ರವಾಗಿ ಹೊಸ ದಾಖಲೆ ಬರೆಯಲಿದೆ. ನಾಗಣ್ಣ ನಿರ್ದೇಶನ, ಕೇಶವಾದಿತ್ಯ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣ ಪ್ರೇಕ್ಷಕರನ್ನು ಸ್ವಾತಂತ್ರ್ಯಪೂರ್ವಕ್ಕೆ ಕರೆದೊಯ್ಯಲಿದೆ ಎನ್ನುತ್ತಾರೆ ನಿರ್ದೇಶಕರು.

    ಚಿತ್ರದ ತಾರಾಗಣದಲ್ಲಿ ನಿಖಿತಾ ತುಕ್ರಲ್, ಶ್ರೀನಿವಾಸಮೂರ್ತಿ, ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ. (ಒನ್‍ಇಂಡಿಯಾ ಕನ್ನಡ)

    English summary
    Challenging Star Darshan and Nikita Thukral starrer Kannada movie Kranthiveera Sangolli Raayanna lands in controvesy. The villegers of Sangolli alleges that in the film has "insulted" great freedom fighters Sangolli Rayanna. This is a biggest film ever made in Kannada cinema history of 77 years. The movie is Rs.30 cr venture said the actor.
    Thursday, June 7, 2012, 14:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X