ಕ್ರೇಜಿಸ್ಟಾರ್ 'ದೃಶ್ಯಂ' ರೀಮೇಕ್ ಚಿತ್ರಕ್ಕೆ ಕನ್ನಡ ಟೈಟಲ್
'ಮಾಣಿಕ್ಯ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ತಂದೆಯಾಗಿ ಪಾತ್ರ ಪೋಷಣೆ ಮಾಡಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಲ್ಲರ ಮನಗೆದ್ದರು. ಈಗ ಅವರ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ.
ಮಲಯಾಳಂನ ಯಶಸ್ವಿ ಚಿತ್ರ 'ದೃಶ್ಯಂ'ಗೆ ರೀಮೇಕ್ ಚಿತ್ರಕ್ಕೆ ಕನ್ನಡ ಶೀರ್ಷಿಕೆ ಸಿದ್ಧವಾಗಿರಲಿಲ್ಲ. ಈಗ ದೃಶ್ಯ ಎಂದು ಹೆಸರಿಡಲಾಗಿದೆ. ರೈತನೊಬ್ಬ ಒಂದು ಅಪಾಯದ ಸನ್ನಿವೇಶದಿಂದ ತನ್ನ ಮಡದಿ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಎಂಬುದೇ 'ದೃಶ್ಯ' ಚಿತ್ರದ ಕಥಾವಸ್ತು.
ಈಗಾಗಲೆ ಈ ಚಿತ್ರ ಮಲಯಾಳಂನಲ್ಲಿ ಆಲ್ ಟೈಮ್ ದಾಖಲೆ ಸೃಷ್ಟಿಸಿದೆ. ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಮೀನಾ ಮುಖ್ಯಭೂಮಿಕೆಯಲ್ಲಿದ್ದರು. [ಕ್ರೇಜಿಸ್ಟಾರ್ ರವಿಚಂದ್ರನ್ ನೂತನ ಚಿತ್ರ 'ದೃಶ್ಯಂ' ರೆಡಿ]

ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ 'ದೃಶ್ಯಂ' ಚಿತ್ರದ ರಿಮೇಕ್. ಮಧು ನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ. ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಶಿವಾಜಿಪ್ರಭು ಅಚ್ಯುತರಾವ್, ಸುಚೀಂದ್ರಪ್ರಸಾದ್, ಆಶಾಶರತ್, ಸಾಧುಕೋಕಿಲ, ಸ್ವರೂಪಿಣಿ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











