»   » ಪರಭಾಷೆ ಚಿತ್ರಗಳ ದಬ್ಬಾಳಿಕೆ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗುಡುಗು!

ಪರಭಾಷೆ ಚಿತ್ರಗಳ ದಬ್ಬಾಳಿಕೆ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗುಡುಗು!

Posted By:
Subscribe to Filmibeat Kannada

  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ. ಕನ್ನಡ ಚಿತ್ರರಂಗದ ಅವಸ್ಥೆ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ತಮ್ಮ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರಕ್ಕೆ ಖುದ್ದು ಬಂಡವಾಳ ಹಾಕಿರುವ ಎಚ್.ಡಿ.ಕುಮಾರಸ್ವಾಮಿಗೆ, ಸ್ಯಾಂಡಲ್ ವುಡ್ ನಿರ್ಮಾಪಕರ ಸಂಕಷ್ಟ ದರ್ಶನವಾಗಿದೆ. ಪರಿಣಾಮ, ಕನ್ನಡ ಚಿತ್ರ ನಿರ್ಮಾಪಕರ ಪರ ಎಚ್.ಡಿ.ಕೆ ಬಹಿರಂಗವಾಗಿ ದನಿಯೆತ್ತಿದ್ದಾರೆ.

  ಕನ್ನಡ ಚಿತ್ರಗಳಿಗೆ ಪರಭಾಷೆ ಚಿತ್ರಗಳು ಒಡ್ಡುತ್ತಿರುವ ಸ್ಪರ್ಧೆ, ಥಿಯೇಟರ್ ಗಳ ಕೊರತೆ, ಮಲ್ಟಿಪ್ಲೆಕ್ಸ್ ಗಳ ದಬ್ಬಾಳಿಕೆ...ಹೀಗೆ ಸ್ಯಾಂಡಲ್ ವುಡ್ ಗೆ ಪೆಡಂಭೂತದಂತೆ ಕಾಡುತ್ತಿರುವ ಎಲ್ಲಾ ಸಮಸ್ಯೆಗಳ ವಾಸ್ತವ ಅರಿತಿರುವ ಎಚ್.ಡಿ.ಕುಮಾರಸ್ವಾಮಿ ಇಂದು ಪತ್ರಿಕಾಗೋಷ್ಟಿ ಕರೆದಿದ್ದರು. ['ಕನ್ನಡ ಚಿತ್ರರಂಗದ ಅವಸ್ಥೆ' ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ]

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು (ಅಕ್ಟೋಬರ್ 24) ನಡೆದ ಪತ್ರಿಕಾಗೋಷ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜೊತೆ ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರ ನಿರ್ಮಾಪಕರು ಹಾಜರ್ ಇದ್ದರು. ಪತ್ರಿಕಾಗೋಷ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದ ಮಾತುಗಳನ್ನ ಅವರ ಮಾತಿನಲ್ಲೇ ಓದಿರಿ...

  ಪ್ರದರ್ಶಕರ ಕಷ್ಟ ಏನು ಎಂಬುದು ತಿಳಿದಿದೆ

  ''ಪ್ರದರ್ಶಕ'ನಾಗಿ ನಾನು ಮೊದಲು ಡಾ.ರಾಜ್ ಕುಮಾರ್ ರವರ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರವನ್ನ ಪ್ರದರ್ಶನ ಮಾಡಿದ ದಿನವನ್ನ ನಾನು ಇಂದು ನೆನಪು ಮಾಡಿಕೊಳ್ಳಲು ಇಚ್ಛಿಸುತ್ತೇನೆ. 'ಪ್ರದರ್ಶಕ'ನಾಗಿ ಒಂದು ಸಿನಿಮಾ ಥಿಯೇಟರ್ ನ ನಡೆಸಬೇಕಾದ್ರೆ, ಏನೇನು ಕಷ್ಟ ಆಗುತ್ತೆ ಎಂಬ ಅರಿವು ನನಗೂ ಕೂಡ ಇದೆ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ [ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

  ಹಂಚಿಕೆದಾರರ ನೋವು ಅರಿವಿದೆ

  ''ನಾನು 'ಹಂಚಿಕೆದಾರ'ನಾದ ಮೇಲೆ, ಅಲ್ಲಿಯ ಏಳು-ಬೀಳುಗಳನ್ನೂ ಕೂಡ ಅರಿತು ಕೊಂಡಿದ್ದೇನೆ. ಈಗಿನ ಚಿತ್ರರಂಗದ ಪರಿಸ್ಥಿತಿ ಏನಾಗಿದೆ ಅಂದ್ರೆ, ಮೊದಲ ವಾರದಲ್ಲಿ ಕಲೆಕ್ಷನ್ ಎಷ್ಟಾಗುತ್ತೋ ಅಷ್ಟೆ. ಅದರ ಮೇಲೆ ನಿರ್ಮಾಪಕರು ಹೆಚ್ಚು ನಿರೀಕ್ಷೆ ಮಾಡುವ ಹಾಗಿಲ್ಲ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ನಿರ್ಮಾಪಕರಿಗೆ ಕಷ್ಟ ಅಷ್ಟಿಷ್ಟಲ್ಲ

  ''ಪ್ರತಿ ಹಂತದಲ್ಲೂ ನಿರ್ಮಾಪಕರು ಕಷ್ಟ ಅನುಭವಿಸುತ್ತಿದ್ದಾರೆ. ಯು.ಎಫ್.ಓ ಬಂದಿರುವುದರಿಂದ ವಾರಕ್ಕೆ 12 ಸಾವಿರ ಬಾಡಿಗೆ ಕೊಡಬೇಕು. ಥಿಯೇಟರ್ ಗಳಿಗೂ ಬಾಡಿಗೆ ಕಟ್ಟಬೇಕು. ಹೀಗಾದ್ರೆ, ಸಣ್ಣ ನಿರ್ಮಾಪಕರ ಕಥೆ ಏನು? ಬರುವ ವಾರದ ಗಳಿಕೆಯಲ್ಲಿ ನಿರ್ಮಾಪಕರಿಗೆ ಏನೂ ಉಳಿಯುವುದಿಲ್ಲ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಪರಭಾಷೆ ಚಿತ್ರಗಳ ಹಾವಳಿ

  ''ಪ್ರತಿ ವರ್ಷ ಕನ್ನಡದಲ್ಲಿ 130-140 ಸಿನಿಮಾಗಳು ಬಿಡುಗಡೆ ಆಗುತ್ತವೆ. ಇದರ ಜೊತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲೀಷ್ ಸಿನಿಮಾಗಳು ಬಿಡುಗಡೆ ಆಗುತ್ತದೆ. ಎಲ್ಲಾ ಭಾಷೆಗಳ ಜೊತೆ ಕನ್ನಡ ಚಿತ್ರಗಳು ಸ್ಪರ್ಧೆ ಮಾಡಬೇಕು. ಆಂಧ್ರ ಪ್ರದೇಶದಲ್ಲಿ ತೆಲುಗು ಬಿಟ್ರೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಬಿಡುವುದಿಲ್ಲ. ಹಿಂದಿ ಸಿನಿಮಾ ಆದರೂ ತೆಲುಗಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಬೇಕು. ತಮಿಳುನಾಡಿನಲ್ಲೂ ಇದೇ ಕಥೆ. ಇಂತಹ ಪರಿಸ್ಥಿತಿ ಇರುವಾಗ, ಕರ್ನಾಟಕದಲ್ಲಿ ಮಾತ್ರ ವರ್ಷಕ್ಕೆ 700-800 ಪರಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತವೆ. ಸಿ.ಸಿ.ಐ ಕೊಟ್ಟಿರುವ ಆದೇಶದಿಂದ ಪರಭಾಷೆಯ ಚಿತ್ರಗಳು 400 ಸೆಂಟರ್ ನಲ್ಲಿ ರಿಲೀಸ್ ಆದ್ರೆ, ಕನ್ನಡ ಚಿತ್ರ ಎಲ್ಲಿಗೆ ಹೋಗಬೇಕು.?'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಪರಭಾಷೆ ಚಿತ್ರಗಳು ರಿಲೀಸ್ ಆದ್ರೆ ನಮ್ಮವರಿಗೆ ಭಯ

  ''ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆದಾಗ, ನಮ್ಮ ಕನ್ನಡದ ಯಾವ ಸಿನಿಮಾ ಕೂಡ ರಿಲೀಸ್ ಆಗಲಿಲ್ಲ. ನಮ್ಮವರು ಚಿತ್ರವನ್ನ ರಿಲೀಸ್ ಮಾಡಲು ಭಯ ಬಿದ್ದು ಬಿಟ್ಟರು. ಎಂತಹ ದುರ್ಗತಿ ಬಂದಿದೆ.!'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಡಾ.ರಾಜ್ ಕುಮಾರ್ ಇದ್ದಾಗ....

  ''ಹಿಂದೆ, ಡಾ.ರಾಜ್ ಕುಮಾರ್ ರವರು ದನಿ ಎತ್ತಿದಾಗ, ಪರಭಾಷೆಯ ಚಿತ್ರಗಳು 23-24 ಥಿಯೇಟರ್ ಮೇಲೆ ಬಿಡುಗಡೆ ಆಗುತ್ತಿರಲಿಲ್ಲ. ಇವತ್ತು ಸಣ್ಣ-ಪುಟ್ಟ ಹಳ್ಳಿಗೆ ಹೋದರೂ ಪರಭಾಷೆಯ ಚಿತ್ರಗಳೇ ರಾರಾಜಿಸುತ್ತಿರುತ್ತವೆ. ಹೀಗಿರುವಾಗ, ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗಬೇಕು?'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತನಾಡುವ ಹಾಗಿಲ್ಲ

  ''ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡಕ್ಕೆ ಕೊನೆಯ ಅವಕಾಶ. ಸಣ್ಣ ಪುಟ್ಟ ನಿರ್ಮಾಪಕರಂತೂ ಮಲ್ಟಿಪ್ಲೆಕ್ಸ್ ಗಳಿಗೆ ಹೋಗುವಂತೆಯೇ ಇಲ್ಲ. ಹಿಂದಿ ಸಿನಿಮಾಗಳಿಗೆ ಟಿಕೆಟ್ ಬೆಲೆ ಹೆಚ್ಚು. ಅದರಿಂದ ನಿರ್ಮಾಪಕರಿಗೆ ಸಿಗುವ ಶೇಕಡವಾರು ಮೊತ್ತ ಕೂಡ ಅಧಿಕ. ಆದ್ರೆ, ಕನ್ನಡಕ್ಕೆ ಟಿಕೆಟ್ ಬೆಲೆ ಕಮ್ಮಿ, ನಿರ್ಮಾಪಕರ ಶೇರ್ ಕೂಡ ಕಮ್ಮಿ. ಇದನ್ನ ಸರಿಪಡಿಸುವುದು ಹೇಗೆ.? ನಮ್ಮ ನೆಲ, ನಮ್ಮ ನೀರು, ನಮ್ಮ ಕರೆಂಟು, ನಮ್ಮವರೇ ಸಿನಿಮಾ ನೋಡಬೇಕು ಆದರೂ ನಮ್ಮ ಚಿತ್ರಗಳಿಗೇ ತಾರತಮ್ಯ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ನಿರ್ಮಾಪಕರ ಉಳಿವು ಹೇಗೆ?

  ''ಇಂದು ಕಲಾವಿದರಿಗೆ ಗಂಟೆ ಲೆಕ್ಕದಲ್ಲಿ ಪೇಮೆಂಟ್ ಕೊಡಬೇಕು. ಈ ಪರಿಸ್ಥಿತಿಯಲ್ಲಿ ನಿರ್ಮಾಪಕರು ಉಳಿಯಲು ಸಾಧ್ಯವೇ?'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ನಿರ್ಮಾಪಕರ ಸಂಘ ಏನು ಮಾಡುತ್ತಿದೆ?

  ''ಎಲ್ಲಾ ಸಮಸ್ಯೆಗಳನ್ನ ನಿರ್ಮಾಪಕರ ಸಂಘ ಕೂತು ಚರ್ಚೆ ಮಾಡಬೇಕು. 'ನಿರ್ಮಾಪಕರ ಸಂಘ' ಅಂತ ಕಟ್ಟಿದ ಮೇಲೆ ಅದರ ಚಟುವಟಿಕೆಗಳು ಏನು ಎಂಬ ಪ್ರಶ್ನೆಯನ್ನ ನಾನು ಕೇಳಲು ಬಯಸುತ್ತೇನೆ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಪರಭಾಷೆ ಚಿತ್ರಗಳಿಗೆ ಕಡಿವಾಣ ಹಾಕಲೇಬೇಕು

  ''ಹನ್ನೆರಡು ವರ್ಷದ ನಂತರ ನಾನು ಮತ್ತೆ ಚಿತ್ರರಂಗಕ್ಕೆ ಬಂದಮೇಲೆ ನನಗೆ ಇಲ್ಲಿನ ಪರಿಸ್ಥಿತಿ ಗೊತ್ತಾಗಿದೆ. ಪರಭಾಷೆಯ ಚಿತ್ರಗಳಿಗೆ ಕಡಿವಾಣ ಹಾಕಲೇಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಕೆಲವು ಥಿಯೇಟರ್ ಗಳನ್ನ ಪರಭಾಷೆ ಚಿತ್ರಗಳಿಗೆ ಮೀಸಲಿಡಲಾಗಿದೆ. ಆ ಮಾಫಿಯಾ ನ ನಾವು ಮೊದಲು ಬ್ರೇಕ್ ಮಾಡಬೇಕು'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ಮತ್ತೊಬ್ಬ ರಾಜ್ ಕುಮಾರ್ ಹುಟ್ಟಲು ಸಾಧ್ಯವಿಲ್ಲ

  ''ಅವತ್ತು ಡಾ.ರಾಜ್ ಕುಮಾರ್ ರವರು ಇದ್ದರು. ಒಂದು ದನಿ ಎತ್ತಿದರೆ ಇಡೀ ಚಿತ್ರರಂಗ ಒಟ್ಟಾಗಿ ನಿಂತುಕೊಳ್ಳುತ್ತಿದ್ದರು. ಆದ್ರೆ, ಇವತ್ತು ಯಾರಿದ್ದಾರೆ?. ಮತ್ತೊಬ್ಬ ರಾಜ್ ಕುಮಾರ್ ಹುಟ್ಟಲು ಸಾಧ್ಯ ಇಲ್ಲ. ಆ ಮಟ್ಟದ ನಾಯಕತ್ವ ಕೂಡ ಬರುವುದಕ್ಕೆ ಸಾಧ್ಯವಿಲ್ಲ'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  ವಿಧಾನಸಭೆಯಲ್ಲಿ ಚರ್ಚೆಗೆ ತಯಾರು

  ''ಸಿ.ಸಿ.ಐ ವಿರುದ್ಧ ಫಿಲ್ಮ್ ಚೇಂಬರ್ ಮಾಡುತ್ತಿರುವ ಹೋರಾಟಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಪರಭಾಷೆ ಚಿತ್ರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ತರಬೇಕಾದರೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ಮಾಡಬೇಕು. ಅದಕ್ಕೂ ನಾನು ಸರ್ಕಾರದ ಜೊತೆ ಚರ್ಚೆ ಮಾಡಲು ತಯಾರಿದ್ದೇನೆ. ಮುಖ್ಯಮಂತ್ರಿಗಳಿಗೆ ಸುದೀರ್ಘವಾದ ಪತ್ರ ಬರೆಯುತ್ತಿದ್ದೇನೆ. ಕನ್ನಡ ಚಿತ್ರರಂಗ ಒಂದು ಕುಟುಂಬ. ನಮ್ಮ ಕಷ್ಟ-ಸುಖವನ್ನ ನಾವೇ ಹಂಚಿಕೊಳ್ಳಬೇಕು. ನಾವೆಲ್ಲ ಸೇರಿ ಭಾಷೆ ಉಳಿಸಿಕೊಳ್ಳಲು ನಿಟ್ಟಿನಲ್ಲಿ ಚರ್ಚೆ ಮಾಡಬೇಕು'' - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ/ಚಿತ್ರ ನಿರ್ಮಾಪಕ

  English summary
  Former Chief Minister, JDS Leader, Politician HD Kumaraswamy addressed the Press Meet today (October 24th) at KFCC regarding problems faced by Kannada Film Producers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more