»   » 'ಜಂಗಲ್ ಜಾಕಿ' ರಾಜೇಶನಿಗೆ ಮೋಸ ಮಾಡಿದ್ರಾ?

'ಜಂಗಲ್ ಜಾಕಿ' ರಾಜೇಶನಿಗೆ ಮೋಸ ಮಾಡಿದ್ರಾ?

By: ಎಲ್ಕೆ, ಮೈಸೂರು
Subscribe to Filmibeat Kannada

ಮೈಸೂರು: "ಹಳ್ಳಿ ಹೈದ ಪ್ಯಾಟೆಗೆ ಬಂದ" ರಿಯಾಲಿಟಿ ಶೋ ಖ್ಯಾತಿಯ ಬಳ್ಳೆ ಹಾಡಿಯ ಯುವಕ ರಾಜೇಶನ ಸಾವಿಗೆ ವಿವಿಧ ಕಾರಣಗಳನ್ನು ತಳುಕು ಹಾಕುವ ಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಆರ್ಥಿಕ ಮುಗ್ಗಟ್ಟು ಕಾರಣ ಎಂಬ ಮಾತುಗಳು ದಟ್ಟವಾಗತೊಡಗಿವೆ.

ಖಾಸಗಿ ವಾಹಿನಿಯೊಂದು 2010ರಲ್ಲಿ 'ಹಳ್ಳಿ ಹೈದ ಪ್ಯಾಟೆಗೆ' ಬಂದ ಹೆಸರಿನ ರಿಯಾಲಿಟಿ ಶೋ ನಡೆಸಿತ್ತು. ಈ ಶೋನಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಹಾಡಿಯ ಜೇನು ಕುರುಬ ಸಮುದಾಯದ ರಾಜೇಶನೂ ಆಯ್ಕೆಯಾಗಿದ್ದ. ಬೆಡಗಿ ಐಶ್ವರ್ಯಾ ಎಂಬ ಯುವತಿಯೊಂದಿಗೆ ರಿಯಾಲಿಟಿ ಶೋನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಗಮನ ಸೆಳೆಯುತ್ತಿದ್ದ.

ಹಳ್ಳಿ ಹೈದ ರಾಜೇಶ್ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನವನ್ನು ಗಳಿಸಿದ್ದನು. ರಿಯಾಲಿಟಿ ಶೋನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪಡೆದ ಖ್ಯಾತಿಯಿಂದಾಗಿ ರಾಜ್ಯದ ಮೂಲೆ ಮೂಲೆಯಲ್ಲಿಯೂ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ. ರಾಜೇಶನ ಪ್ರಸಿದ್ಧಿಯನ್ನು ಕಂಡು ಕೆಲವರು ಅದನ್ನು ಸದುಪಯೋಗ ಮಾಡಿಕೊಳ್ಳಲು ಯತ್ನಿಸಿದ್ದರು.

ಶೋನಲ್ಲಿ ಮುಗ್ಧತೆಯಿಂದಾಗಿ ಗಮನ ಸೆಳೆದ

ಶೋನಲ್ಲಿ ಮುಗ್ಧತೆಯಿಂದಾಗಿ ಗಮನ ಸೆಳೆದು, ಹಲವು ಸಂದರ್ಭಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದ್ದ ರಾಜೇಶ ದಿಢೀರನೆ ಕನ್ನಡ ಚಲನಚಿತ್ರ ರಂಗವನ್ನು ಪ್ರವೇಶಿಸಿ 'ಜಂಗಲ್ ಜಾಕಿ' ಚಲನಚಿತ್ರದಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡನು.

ಕಟ್ಟಡದಿಂದ ಹಿಮ್ಮುಖವಾಗಿ ಹಾರಿ ಸಾವನ್ನಪ್ಪಿದ

ಆದರೆ ಭಾನುವಾರ ಮೂರನೇ ಅಂತಸ್ಥಿನ ಕಟ್ಟಡದಿಂದ ಹಿಮ್ಮುಖವಾಗಿ ಹಾರಿ ಸಾವನ್ನಪ್ಪಿದ್ದನು. ರಾಜೇಶನ ಸಾವಿನ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದವು. ಆದರೆ ಇದೀಗ ಆರ್ಥಿಕ ಮುಗ್ಗಟ್ಟು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ದುಡ್ಡು ನೀಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ

ರಾಜೇಶನ ತಾಯಿ ಲಕ್ಷ್ಮಮ್ಮ ಮಾತನಾಡಿ, "ಮಗನೊಂದಿಗೆ ಕಳೆದ 8 ತಿಂಗಳಿಂದ ಮೈಸೂರಿನ ಪರಸಯ್ಯನಹುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೋ. ಮನೆಗೆ ನಾಲ್ಕು ಸಾವಿರ ಬಾಡಿಗೆಯನ್ನು ಪ್ರತಿ ತಿಂಗಳು ಕಟ್ಟಬೇಕು. ಅವರು ದುಡ್ಡು ನೀಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಮಗನ ಉಳಿದ ಸಂಭಾವನೆ 5 ಲಕ್ಷ ರೂ ನೀಡಿದ್ದರೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದೊ.

ನಿರ್ಮಾಪಕರು ಕರೆ ಸ್ವೀಕರಿಸುತ್ತಿಲ್ಲ

ಆದರೆ ಹಣ ಕೇಳಲು ದೂರವಾಣಿ ಕರೆ ಮಾಡಿದರೆ ನಿರ್ಮಾಪಕರು ಕರೆ ಸ್ವೀಕರಿಸುತ್ತಿಲ್ಲ. ನನ್ನ ಮಗನಿಗೆ ಅಕ್ಷರ ಬರುವುದಿಲ್ಲ ಎಂದ ಹೀಗೂ ಮೋಸ ಮಾಡ್ತಾರಾ? ಎಂದು ಪ್ರಶ್ನಿಸಿದ ಅವರು, ಹಾಡಿಯಲ್ಲಿದ್ದರೆ ಕೂಲಿ ಕೆಲಸ ಮಾಡುವುದಕ್ಕೆ ಹೋಗ್ತಾ ಇದ್ದೆ.

ಕೂಲಿ ಕೆಲಸ ಮಾಡೊದಕ್ಕೂ ಆಗಲಿಲ್ಲ

ಮೈಸೂರಿನಲ್ಲಿ ಕೆಲಸಕ್ಕೆ ಹೋಗಲು ಮುಂದಾದರೆ ಮಗ ಫಿಲ್ಮನಲ್ಲಿ ನಟಿಸುತ್ತಾನೆ. ತಾಯಿ ಕೂಲಿ ಕೆಲಸಕ್ಕೆ ಬರ್ತಾರೆ ಎಂದು ನಗ್ತಾ ಇದ್ರು ಸಾರ್ ಅದಕ್ಕೆ ನಾನು ಕೂಲಿ ಕೆಲಸ ಮಾಡೊದಕ್ಕೂ ಆಗಲಿಲ್ಲ.

ಹಣ ಕೊಡಿಸಲು ಮುಂದಾದ ಸಂಘ ಸಂಸ್ಥೆಗಳು

ಈಗ ನನ್ನ ಮಗ ರಾಜೇಶ ಸತ್ತಿದ್ದಾನೆ. ನನ್ನ ಮಗನನ್ನು ಮತ್ತೆ ಯಾರು ಹಿಂದಿರುಗಿಸಲ್ಲ ಎಂದು ಅವರು ಕಣ್ಣೀರಿಟ್ಟರು. ಅಲ್ಲದೆ ದೂರು ನೀಡುವುದಾಗಿ ತಿಳಿಸಿದರು. ನಟ ರಾಜೇಶನ ಸಾವಿನ ನಂತರ ಕೆಲ ಸಂಘ ಸಂಸ್ಥೆಗಳು ರಾಜೇಶನ ಕುಟುಂಬ ನೆರವು ನೀಡಲು ಮುಂದಾಗಿವೆ. ನಿರ್ಮಾಪಕರಿಂದ ಬರಬೇಕಾದ 5 ಲಕ್ಷ ರೂಗಳನ್ನು ಕೊಡಿಸುವ ಭರವಸೆ ನೀಡುತ್ತಿದ್ದಾರೆ.

ರಾಜೇಶನ ಸಾವು ಯುವ ಜನತೆಗೆ ಎಚ್ಚರಿಕೆ ಗಂಟೆ

ಅಲ್ಲದೆ ನಿರ್ಮಾಪಕರು ನೀಡಿರುವ ಚೆಕ್ ಹಾಗೂ ಅಗ್ರಿಮೆಂಟ್ ನ ಜೆರಾಕ್ಸ್ ಪ್ರತಿಯನ್ನು ಪಡೆದು ಕಾನೂನು ಸಮರ ನಡೆಸುವುದಕ್ಕೂ ಚಿಂತಿಸಿವೆ. ಒಟ್ಟಾರೆ ಬಣ್ಣದ ಲೋಕದ ಗೀಳು ಹಚ್ಚಿಕೊಂಡು ವಂಚನೆಗೀಡಾಗಿ ತನ್ನ ಬಾಳನ್ನೇ ತೊರೆದ ಯುವಕ ರಾಜೇಶನ ಸಾವು ಯುವ ಜನತೆಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ರಾಜೇಶ್ ಕುಟುಂಬಕ್ಕೆ ನ್ಯಾಯ ದೊರೆಯಲಿ

ಮೇಲ್ನೋಟಕ್ಕೆ ಬಣ್ಣದ ಜಗತ್ತು ಸುಂದರವಾಗಿದ್ದರೂ ಮಾತ್ರ ಅಂತರಾಳದಲ್ಲಿ ವಂಚನೆ ಸೇರಿದಂತೆ ವಿವಿಧ ಕರಾಳ ಮುಖವನ್ನು ಹೊಂದಿದ್ದು ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಏನೆ ಆಗಲಿ ಮೃತ ರಾಜೇಶನ ಕುಟುಂಬಕ್ಕೆ ನ್ಯಾಯ ದೊರೆಯಲಿ ಎಂದು ನಮ್ಮೆಲ್ಲರ ಆಶಯವಾಗಿದೆ.

English summary
Is Jungle Jackie Rajesh double crossed by producers? who had fell to death at his residence in Mysore, on Sunday, (Nov 3). Now his mother Lakshmamma to lodge a complaint against producres.
Please Wait while comments are loading...