For Quick Alerts
  ALLOW NOTIFICATIONS  
  For Daily Alerts

  ಜಂಗಲ್ 'ಜಾಕಿ' ರಾಜೇಶ ದುರಂತ ಸಾವು

  By Mahesh
  |

  ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಲ್ಲಿ ನಿಂತು ರಾಜೇಶ್ ತಮ್ಮ ತಾಯಿ ಜತೆ ಜೋರು ದನಿಯಲ್ಲಿ ಮಾತನಾಡುತ್ತಿದ್ದರು. ನಂತರ ಅವರು ಹಿಮ್ಮುಖವಾಗಿ ನೆಲಕ್ಕೆ ಬೀಳುವುದನ್ನು ಕಂಡೆ. ಗೇಟಿನ ಕಬ್ಬಿಣ ರಾಡ್ ಬಡಿದು ರಕ್ತದ ಮಡುವಿನಲ್ಲಿ ರಾಜೇಶ್ ಮಲಗಿದ್ದರು. ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದೆವು ಎಂದು ನೆರೆಮನೆಯ ರವಿ ಎಂಬುವರು ಖಾಸಗಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದ್ದಾರೆ.

  ತಲೆ ಹಾಗೂ ಹೊಟ್ಟೆಗೆ ಭಾರಿ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಬಂದಾಗ ಉಸಿರಾಟ ನಿಂತಿತ್ತು. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ರಾಜೇಶ್ ಪರೀಕ್ಷೆ ಮಾಡಿದ ವೈದ್ಯ ಚೆಲುವರಾಜು ಹೇಳಿದ್ದಾರೆ.

  ರಾಜೇಶ್ ಮುಗ್ಧ ಮನಸ್ಸಿನ ಅಮಾಯಕ ಹುಡುಗ. ಅವನನ್ನು ಕಾಡಿನಲ್ಲಿ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ ನಾಡಿಗೆ ಕರೆದುಕೊಂಡು ನಾವೆಲ್ಲ ತಪ್ಪು ಮಾಡಿದೆವು ಎಂಬ ಭಾವನೆ ಉಂಟಾಗಿದೆ ಎಂದು ಟಿವಿ9ಗೆ ಕ್ರಿಯೇಟಿವ್ ನಿರ್ಮಾಪಕ ರಾಘವೇಂದ್ರ ಹುಣಸೂರು ಪ್ರತಿಕ್ರಿಯಿಸಿದ್ದಾರೆ.

  ರಾಜೇಶ್ ಹಾಗೂ ಐಶ್ವರ್ಯಾ ಅಭಿನಯದ ಜಂಗಲ್ ಜಾಕಿ ಚಿತ್ರ ಕಳೆದ ಸೆ.20 ರಂದು ಬಿಡುಗಡೆಗೊಂಡಿತ್ತು. ಆದರೆ, ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿತ್ತು.ಲವ್ ಪಾಯಿಸನ್ ಎಂಬ ಇನ್ನೊಂದು ಚಿತ್ರವನ್ನು ರಾಜೇಶ್ ಒಪ್ಪಿಕೊಂಡಿದ್ದ.

  ಇತ್ತೀಚೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಆದರೆ, ಸೂಕ್ತ ಚಿಕಿತ್ಸೆ ಪಡೆದು ನಂತರ ಈಟಿವಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದ. ಕುಂತರೆ ಕುರುಬ ನಿಂತರೆ ಕಿರುಬ ಎಂದು ಸಾಹಸ ಪಟ್ಟುಗಳನ್ನು ಹಾಕುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಕಾಡಿನ ಕೂಸು ರಾಜೇಶ್ ಈಗ ನೆನಪು ಮಾತ್ರ.

  ಮಾನಸಿಕ ಖಿನ್ನತೆ

  ಮಾನಸಿಕ ಖಿನ್ನತೆ

  ರಾಜೇಶ್ ಮಾನಸಿಕವಾಗಿ ಅಸ್ವಸ್ಥನಾಗಿ ಆಸ್ಪತ್ರೆಗೆ ಎರಡು ಬಾರಿ ದಾಖಲಾಗಿದ್ದ. ಕಾಡಿನಿಂದ ನಾಡಿಗೆ ಬಂದ ಮೇಲೆ ಇಲ್ಲಿದ ಜನ ಜೀವನ ಶೈಲಿಗೆ ಹೊಂದಿಕೊಳ್ಳಲಾಗದೆ ಒದ್ದಾಡಿ ಮಾನಸಿಕವಾಗಿ ಖಿನ್ನನಾಗಿದ್ದ

  'ಜಂಗಲ್ ಜಾಕಿ' ಎಂಬ ಬಿಡುಗಡೆಯಾಗುತ್ತದೋ ಇಲ್ಲವೋ ಎಂದು ಆತ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿ ಹುಚ್ಚನಂತಾಗಿದ್ದ. ಬಳಿಕ ಜಂಗಲ್ ಜಾಕಿ ಚಿತ್ರವೂ ಬಿಡುಗಡೆ ತೊಪ್ಪೆದ್ದು ಹೋಗಿದ್ದು, ರಾಜೇಶನಿಗೆ ಇದು ನೋವುಂಟು ಮಾಡಿತ್ತು. ಜತೆ ಲವ್ ಈಸ್ ಪಾಯಿಸನ್ ಚಿತ್ರದ ಶೂಟಿಂಗ್ ಶೇ.50ರಷ್ಟು ಮುಗಿದು ಚಿತ್ರೀಕರಣ ನಿಂತಿತ್ತು.

  ಮೇಲಿಂದ ಹಾರುತ್ತೇನೆ

  ಮೇಲಿಂದ ಹಾರುತ್ತೇನೆ

  ಮೇಲಿಂದ ಕೆಳಕ್ಕೆ ಹಾರುತ್ತೇನೆ ಎಂದು ಆಗಾಗ ರಾಜೇಶ್ ಹೇಳುತ್ತಿದ್ದ. ಹಿಂದೊಮ್ಮೆ ಚಾಮುಂಡಿ ಬೆಟ್ಟದಿಂದ ಕೆಳಗೆ ಬೀಳುತ್ತೇನೆ ಎಂದು ಬೆದರಿಸಿದ್ದ ಎಂದು ರಾಜೇಶ್ ತಾಯಿ ಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ.

  ತಾಯಿ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದವನು ಕೆಳಗೆ ಬಿದ್ದಿದ್ದಾನೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ತನಿಖೆ ನಂತರ ತಿಳಿಯಬೇಕಿದೆ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.

  ಅಕುಲ್ ಬಾಲಾಜಿ ಪ್ರತಿಕ್ರಿಯೆ

  ಅಕುಲ್ ಬಾಲಾಜಿ ಪ್ರತಿಕ್ರಿಯೆ

  'ಭಗವಂತ ಏಕೆ ಇಷ್ಟು ಕೆಟ್ಟವನಾಗುತ್ತಾನೆ' 'ತಲೆ ಸುತ್ತಿ ಬಿದ್ದಿದ್ದಾನಾ?' ಮೂರು ತಿಂಗಳ ಹಿಂದೆ ಮಾತನಾಡಿದ್ದ. ಜಂಗಲ್ ಜಾಕಿ ಚಿತ್ರದ ರಿಲೀಸ್ ಬಗ್ಗೆ ಹೇಳಿದ್ದ ನಾನು ಖುಷಿಯಾಗಿ ಚಿತ್ರವನ್ನು ನೋಡುತ್ತೇನೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದೆ. ನನಗೆ ತಿಳಿದ ಮಟ್ಟಿಗೆ ಇವತ್ತು ಕನ್ನಡ ಜನ ದೀಪಾವಳಿ ಆಚರಿಸಲ್ಲ, ಇದು ದುರಂತ ಎಂದು ನಿರೂಪಕ, ನಟ ಅಕುಲ್ ಬಾಲಾಜಿ ಪ್ರತಿಕ್ರಿಯಿಸಿದ್ದಾರೆ.

  ಬಿಗ್ ಬಾಸ್ ನಲ್ಲಿ

  ಬಿಗ್ ಬಾಸ್ ನಲ್ಲಿ

  ಸುದೀಪ್ ನಿರೂಪಣೆಯ ಈಟಿವಿ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೆಲ ಕಾಲ ಇದ್ದ. ಅರುಣ್ ಸಾಗರ್ ಜತೆ ಸ್ವಲ್ಪ ಹೆಚ್ಚು ಮಾತನಾಡುತ್ತಿದ್ದ ರಾಜೇಶನ ನಡವಳಿಕೆ ಮಾತುಗಾರಿಕೆ ಅಲ್ಲಿನ ಇತರೆ ಸ್ಪರ್ಧಿಗಳಿಗೆ ಹಾಸ್ಯಸ್ಪದ ವಸ್ತುವಾಗಿತ್ತು. ಆದರೆ, ಎಲ್ಲರೂ ಆತನನ್ನು ತಿದ್ದಲು ಯತ್ನಿಸಿ ವಿಫಲರಾಗಿದ್ದರು. ಆತನ ವರ್ತನೆ ಸುಧಾರಣೆಗೊಳ್ಳದ ಕಾರಣ ಅನಿವಾರ್ಯವಾಗಿ ಆತನನ್ನು ಹೊರ ಕಳಿಸಬೇಕಾಯಿತು

  ನಟಿ ಐಶ್ವರ್ಯ ಪ್ರತಿಕ್ರಿಯೆ

  ನಟಿ ಐಶ್ವರ್ಯ ಪ್ರತಿಕ್ರಿಯೆ

  ನನ್ನ ಜನಪ್ರಿಯತೆಯಲ್ಲಿ ರಾಜೇಶನದ್ದೇ ಸಿಂಹಪಾಲು. ನಾನು ಈಗ ನನ್ನ ಗಾಡ್ ಫಾದರ್ ಕಳೆದುಕೊಂಡಿದ್ದೇನೆ. ಅವನ ಮಾತಲ್ಲಿ ದ್ವಂದ ಇರುತ್ತಿತ್ತು ಆದರೆ, ಅವರು ತುಂಬಾ ಮುಗ್ಧನಾಗಿದ್ದ. ಎರಡನೇ ಮದುವೆಯಾಗುತ್ತಿದ್ದೇನೆ ಎಲ್ಲರೂ ಬನ್ನಿ ಎಂದು ಕಾಲ್ ಮಾಡಿದ್ದ. ಆದರೆ, ಸ್ವಲ್ಪ ಸಮಯ ನಂತರ ನೀವು ಎಲ್ಲಿ ಬರ್ತೀರಾ ಬಿಡಿ ಎಂದು ಬಿಟ್ಟ.

  ಅಪ್ಪು ಸಾರ್ ಜತೆ ಒಂದು ಚಿಕ್ಕ ಸೀನ್ ಆದರೂ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಜಂಗಲ್ ಜಾಕಿ ಚಿತ್ರದ ಪ್ರಚಾರಕ್ಕಾಗಿ ತುಂಬಾ ದುಡಿದ. ಅವನ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಐಶ್ವರ್ಯ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

  ಸಂವಾದ.ಕಾಂ ಕಿರಣ್ ಪ್ರತಿಕ್ರಿಯೆ

  ಸಂವಾದ.ಕಾಂ ಕಿರಣ್ ಪ್ರತಿಕ್ರಿಯೆ

  ಕಾಡಿನ ಮೂಲೆಯಲ್ಲೆಲ್ಲೋ ತನ್ನ ಪಾಡಿಗೆ ಇದ್ದ ಈತನನ್ನ ಬಲವಂತವಾಗಿ ಎಳೆದುಕೊಂಡು ಬಂದು ನಿಮ್ಮ ಟಿಆರ್ ಪಿ ಜಾಸ್ತಿ ಮಾಡ್ಕೊಂಡ್ರಿ. ಈ ಪ್ರಚಾರವನ್ನ ಜೀರ್ಣಿಸಿಕೊಳ್ಲಲಿಕ್ಕಾಗದೇ ಅವನು ಖಿನ್ನನಾದಾಗ ದಿನ ಪೂರ್ತಿ ಅವನ ವ್ಯಥೆಯನ್ನೇ ತೋರಿಸಿ ಅವನನ್ನ ಹೀರೊ ಮಾಡಿದ್ರಿ.

  ಹೀರೋ ನೋ, ಜಿರೋ ನೋ ಗೊತ್ತಾಗದೇ ನಮ್ಮೊಳಗೆ ಒಂದಾಗಲಾರದೇ ಅವನು ಸತ್ತೇ ಹೋದ.. ಇವತ್ತು ನಿಮಗೆ 'ದೀಪಾವಳಿ ಸ್ಪೆಷಲ್' , ಡಬಲ್ ಧಮಾಕಾ! ನಿಮ್ಮ ಆತ್ಮ ಅಷ್ಟಕ್ಕೆ ತೃಪ್ತಿ ಆಗಲ್ಲ ಅಂತ ಗೊತ್ತು.

  ಅವನು ಆತ್ಮಹತ್ಯೆ ಮಾಡ್ಕೊಂಡನೋ ಇಲ್ಲ, ಕೊಲೆನೋ ಅಂತ ಕ್ರೈಂ ಎಪಿಸೋಡ್ ಮಾಡ್ತೀರಾ. ಅಷ್ಟಕ್ಕೂ ಸಮಾಧಾನ ಆಗಲ್ಲ ಸ್ವಲ್ಪ ದಿನ ಬಿಟ್ಟು ಅವನ ಆತ್ಮವನ್ನ ಜನ್ಮಾಂತರಕ್ಕೆ ಕರ್ಕೊಂಡು ಬರ್ತೀರಾ. ಜ್ಯೋತಿಷಿಗಳ ಹಿಂಡನ್ನಿಟ್ಕೊಂಡು ಸಾವಿಗೆ ಯಾವ ಗ್ರಹಗತಿ ಕಾರಣ ಅಂತ ಹುಡುಕ್ತೀರಾ? ಆತ್ಮಕ್ಕೆ ಶಾಂತಿ ಸಿಗುತ್ತೋ ಇಲ್ವೋ? ನಿಮ್ಮ ಆತ್ಮಕ್ಕಾದ್ರೂ ಸಿಗಲಿ

  ಬಣ್ಣದ ಲೋಕದ ಸಹವಾಸ

  ಬಣ್ಣದ ಲೋಕದ ಸಹವಾಸ

  ಎಲ್ಲೋ ಹಾಡಿಯಲ್ಲಿ ಆರಾಮವಾಗಿ ಇರಬೇಕಾಗಿದ್ದ ಈತ ಬಣ್ಣದ ಲೋಕದ ಸಹವಾಸಕ್ಕೆ ಸಿಕ್ಕಿ ಮಾನಸಿಕವಾಗಿ ಜರ್ಝರಿತನಾಗಿಬಿಟ್ಟಿದ್ದ. ಈತನೇ ಮುಗ್ಧತೆಯನ್ನು ಬಂಡವಾಳವಾಗಿಟ್ಟುಕೊಂಡವರು ಈತನನ್ನು ಮತ್ತೆ ಕಾಡಿಗೆ ಸೇರಿಸದೆ ನಾಡಿನ ಚಿನ್ನದ ಪಂಜರದಲ್ಲಿ ವಾಸಿಸಲು ಬಿಟ್ಟಿದ್ದೇ ತಪ್ಪು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

  ರಿಯಾಲಿಟಿಶೋ ನಲ್ಲಿ ಗೆದ್ದ 10 ಲಕ್ಷ ರು ಬಹುಮಾನ, ಚಿತ್ರದಿಂದ ಪಡೆದ ಸಂಭಾವನೆ ಮೊತ್ತ ಅಂದಾಜು 30 ಲಕ್ಷ ರು ದುಡ್ಡನ್ನು ಪುನೀತ್ ಕೈಲಿ ಪಡೆದು ಜನ್ಮ ಪಾವನ ಎಂದು ಕೊಂಡಿದ್ದ ರಾಜೇಶ.

  ಕೊಡಗಿನ ಹುಡುಗಿ ಕಾವ್ಯ ಮದುವೆಯಾದ ಮೇಲೆ ಖುಷಿಯಿಂದ ಇದ್ದ ರಾಜೇಶ ಮತ್ತೆ ಮತ್ತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳಲು ಸಾಂಸಾರಿಕ ತಾಪತ್ರಯವೂ ಕಾರಣ ಎನ್ನುವವರು ಇದ್ದಾರೆ. ಕಾರಣಗಳು ಅನೇಕವಿದ್ದರೆ ಕಾಡಿನ ಕುಸುಮ ನಾಡಿನ ಮಂದಿ ಕಣ್ಣಿಗೆ ಬಿದ್ದು ಬಲಿಯಾಗಿದೆ.

  English summary
  'Jungle Jackie' movie hero, Halli Hyda Pyateg Bandha reality show fame Rajesh is no more. Rajesh accidentally fell from third floor of his house and died today at private hospital near Srirampura, Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X