»   » ಬೆಳ್ಳಿತೆರೆಗೆ ಶ್ರೀ ಶ್ರೀ ಶ್ರೀ ಋಷಿಕುಮಾರ ಸ್ವಾಮೀಜಿಗಳು

ಬೆಳ್ಳಿತೆರೆಗೆ ಶ್ರೀ ಶ್ರೀ ಶ್ರೀ ಋಷಿಕುಮಾರ ಸ್ವಾಮೀಜಿಗಳು

Posted By:
Subscribe to Filmibeat Kannada
Rushikumar Swamiji
ಅನ್ಯಾಯ, ಅಕ್ರಮ, ಅನೀತಿ, ಅಧರ್ಮಗಳ ವಿರುದ್ಧ ಟಿವಿ ವಾಹಿನಿಗಳಲ್ಲಿ ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ ರಸಗಳನ್ನು ಉಕ್ಕಿಸಿರುವ ನವರಸಭರಿತ ಶ್ರೀಕ್ಷೇತ್ರ ಕಾಳಿಕಾಶ್ರಮದ ಋಷಿಕುಮಾರ ಸ್ವಾಮೀಜಿಗಳು ಈಗ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ಇಷ್ಟು ದಿನ ಅವರ ರೌದ್ರಾವತಾರವನ್ನು ಟಿವಿ ವಾಹಿನಿಗಳಲ್ಲಿ ನೋಡಿದವರು ಈಗ ಅವರ ಮತ್ತೊಂದು ಮುಖವನ್ನು ನೋಡಬಹುದು. ಅದರಲ್ಲೂ ಮುಖ್ಯವಾಗಿ ನಮ್ಮ ಕಾಳಿಮಠ ಶ್ರೀಗಳು ಸ್ವಾಮಿ ನಿತ್ಯಾನಂದ ವಿರುದ್ಧವಂತೂ ತೊಡೆ ತಟ್ಟಿ ನಿಂತಿದ್ದಾರೆ. ಇರಲಿ ವಿಷಯ ಈಗ ಇದಲ್ಲ.

ಇಷ್ಟಕ್ಕೂ ಸ್ವಾಮೀಜಿಗಳು ಬಣ್ಣ ಹಚ್ಚಿರುವುದು ದೇವ್ರಾಣೆ ಎಂಬ ಚಿತ್ರದಲ್ಲಿ. ಈಗಾಗಲೆ 'ನೈಂಟಿ' ಎಂಬ ಚಿತ್ರದ ಮೂಲಕ ಗುಂಡಿನ ಗಮ್ಮತ್ತು ಹಾಗೂ ಅದರ ಆಪತ್ತುಗಳ ಬಗ್ಗೆ ಬೆಳಕು ಚೆಲ್ಲಿದ್ದ ಲಕ್ಕಿ ಶಂಕರ್ ನಿರ್ದೇಶಿಸುತ್ತಿರುವ ಚಿತ್ರವಿದು.

ಈ ಚಿತ್ರದಲ್ಲಿ ನೂರಕ್ಕೆ ನೂರರಷ್ಟು ಮನರಂಜನೆ ಜೊತೆಗೆ ಕೊನೆಯಲ್ಲಿ ಸಂದೇಶವೂ ಇರುತ್ತದಂತೆ. 'ನಾನ್ ದೇವ್ರಲ್ಲ' ಎಂಬುದು ಚಿತ್ರದ ಅಡಿಬರಹ. ಎಲ್ಲದಕ್ಕೂ 'ದೇವ್ರಾಣೆ' ಎಂದು ಆಣೆ ಮಾಡಿ ಸುಳ್ಳು ಹೇಳುವವರಿಗೆ ಈ ಚಿತ್ರ ದೇವ್ರಾಣೆಗೂ ಒಳ್ಳೆಯ ಪಾಠ ಕಲಿಸಲಿದೆ ಎನ್ನುತ್ತಾರೆ ಶಂಕರ್.

ಚಿತ್ರದಲ್ಲಿ ಹಲವಾರು ಸ್ವಾಮೀಜಿಗಳು ಬರುತ್ತಾರೆ. ಬಣ್ಣ ಬದಲಿಸಿರುವ ಚಿಟ್ಟೆ ಸ್ವಾಮಿ, ಲಾಂಗ್ ಸ್ವಾಮಿ, ಹೊಗೆ ಸ್ವಾಮಿ ಇತ್ಯಾದಿ ಇತ್ಯಾದಿ ಸ್ವಾಮಿ ಪಾತ್ರಗಳು ಇವೆಯಂತೆ. ಇತ್ತೀಚೆಗೆ ಈ ಚಿತ್ರದ ಐಟಂ ಹಾಡನ್ನು ಚಿತ್ರೀಕರಿಸಿದರು.

ಅಂದಹಾಗೆ ಈ ಹಾಡಿನಲ್ಲಿ ನಮ್ಮ ಋಷಿಕುಮಾರ ಸ್ವಾಮಿಗಳು ಹೆಜ್ಜೆ ಹಾಕಬೇಕಾಗಿತ್ತಂತೆ. ಆದರೆ ಅವರು ಜಸ್ಟ್ ಮಿಸ್ ಆಗಿದ್ದಾರೆ. ಚಿತ್ರದಲ್ಲಿ ಒಂದು ಪಾತ್ರ ಪೋಷಿಸಿರುವ ಕಾರಣ ಐಟಂ ಹಾಡಿನಿಂದ ಹಿಂದೆ ಸರಿದಿದ್ದಾರೆ.

ಈ ಐಟಂ ಹಾಡಿಗೆ ಹೆಜ್ಜೆ ಹಾಕಿರುವವರು ಮುಂಬೈ ಬೆಡಗಿ ಪ್ರೀತಿ ಸೂದ್. ಈಕೆ ಹಿಂದಿ ಹಾಗೂ ಪಂಜಾಬಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. 'ಬ್ಯಾಡ್ ಗರ್ಲ್' ಎಂಬ ಆಲ್ಬಂ ಮೂಲಕ ಒಂದಷ್ಟು ಹೆಸರನ್ನೂ ಮಾಡಿದ್ದಾರೆ.

'ದೇವ್ರಾಣೆ' ಚಿತ್ರ ಈಕೆಗಿದು ಕನ್ನಡದ ಚೊಚ್ಚಲ ಚಿತ್ರ. ಚಿತ್ರ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಅಪ್ಪಳಿಸಲಿದೆಯಂತೆ. ರವಿಶಂಕರ್, ನೀತೂ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಐಟಂ ಹಾಡಿನಲ್ಲಿ ಚಂಪಾಕಲಿಯಾಗಿ ಪ್ರೀತಿ ಸೂದ್ ಹೆಜ್ಜೆ ಹಾಕಿದ್ದಾರೆ. "ಮಾಮ ಹುಚ್ಮುಂಡೆ ಮದ್ವೇಲಿ ಉಂಡೋನೇ ಜಾಣನೋ, ಬಾರೋ ಉಣ್ಕೋಂಡೋಗೋ..." ಎಂಬ ಹಾಡಿಗೆ ತಮ್ಮ ಸೊಂಟ ಬಳುಕಿಸಿದ್ದಾರೆ.

ಸಾಧು ಕೋಕಿಲ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಗುರುರಾಜ್ ಹೊಸಕೋಟೆ ಬರೆದಿದ್ದಾರೆ. ಮಾಲೂರು ಶ್ರೀನಿವಾಸ್ ನೃತ್ಯ ಸಂಯೋಜನೆ ಇದೆ. ಗಾದೆ ಮಾತುಗಳ ಮೇಲೆ ಹೆಣೆದಿರುವ ಗೀತೆ ಇದಾಗಿದೆ. ಹಾಡಿನಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡು ಇದೆಯಂತೆ.

ಇದನ್ನು ಐಟಂ ಸಾಂಗ್ ಎಂದರೆ ಲಕ್ಕಿ ಶಂಕರ್ ಅವರು ಸುತಾರಾಂ ಒಪ್ಪಲ್ಲ. ಇದೊಂದು ಸಾಂದರ್ಭಿಕ ಗೀತೆ ಅಷ್ಟೇ ಎನ್ನುತ್ತಾರೆ. ಈ ಹಾಡಿನಲ್ಲಿ ಋಷಿಕುಮಾರ ಸ್ವಾಮೀಜಿಗಳು ಹೆಜ್ಜೆ ಹಾಕಿದ್ದಿದ್ದರೆ ಕನ್ನಡಕ್ಕೆ ಮತ್ತೊಬ್ಬ ನವರಸ ನಾಯಕ ಸಿಗುತ್ತಿದ್ದರೇನೋ?

ಚಿತ್ರದ ಉಳಿದ ಪಾತ್ರವರ್ಗದಲ್ಲಿ ತಬಲಾ ನಾಣಿ, ರಾಜು ತಾಳಿಕೋಟೆ, ಸಾಧು ಕೋಕಿಲ ಮುಂತಾದವರಿದ್ದಾರೆ. ಎಂ.ಆರ್. ಸೀನು ಛಾಯಾಗ್ರಹಣವಿರುವ ಚಿತ್ರವನ್ನು ಶಿವು ಕಬಿನ್ ನಿರ್ಮಿಸಿದ್ದಾರೆ. ಈ ಚಿತ್ರ ಯಾವುದೇ ವಿವಾದಿತ ಸ್ವಾಮಿಯ ಬದುಕನ್ನು ಆಧರಿಸದೆ ವಾಸ್ತವ ಅಂಶಗಳನ್ನು ತೆರೆದಿಡುತ್ತದೆ ಎನ್ನುತ್ತಾರೆ ಶಂಕರ್. (ಒನ್ ಇಂಡಿಯಾ ಕನ್ನಡ)

English summary
Kalika Math pontiff Yogeshwara Rushikumar Swamij debuts in Kannada film Devrane. He plays a small role in a film directed by Lucky Shankar. Comedy actor in Television turned hero from ‘Payana’ actor Ravishanker is playing the lead role. Sadhu Kokila is another prominent character. Recently an item song has shot for the film.
Please Wait while comments are loading...