ಸೆಪ್ಟೆಂಬರ್ 28ಕ್ಕೆ ವೀರಪ್ಪನ್ ಅಟ್ಟಹಾಸ ಬಿಡುಗಡೆ

ನರಹಂತಕ, ದಂತಚೋರ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಇದು ದ್ವಿಭಾಷಾ ಚಿತ್ರವಾಗಿದ್ದು ಕನ್ನಡದಲ್ಲಿ 'ಅಟ್ಟಹಾಸ' ಎಂದು ಹೆಸರಿಟ್ಟಿದ್ದರೆ ತಮಿಳಿನಲ್ಲಿ 'ವನ ಯುದ್ಧಂ' ಎಂದು ಇಡಲಾಗಿದೆ.
ಎರಡು ಭಾಷೆಯ ಚಿತ್ರಗಳನ್ನು ಒಟ್ಟಿಗೆ ಬಿಡುಗಡೆ ಮಾಡಲು ರಮೇಶ್ ಮುಂದಾಗಿದ್ದಾರೆ. ಆದರೆ ತಮಿಳು ಆವೃತ್ತಿಯ ಬಗ್ಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಆಕ್ಷೇಪಾರ್ಹ ಸನ್ನಿವೇಶಗಳಿದ್ದು ನನ್ನ ಹಾಗೂ ನನ್ನ ಮಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದರು.
ಈ ಸಂಬಂಧ ಅವರು ಕೋರ್ಟ್ ಮೆಟ್ಟಿಲೇರಿ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದರು. ತಮ್ಮ ಬಳಿ ಸಾಕ್ಷಾಧಾರಗಳಿದ್ದರೆ ತೋರಿಸಿ ಎಂದು ಕೋರ್ಟ್ ಹೇಳಿತ್ತು. ಬಿಡುಗಡೆಗೂ ಮುನ್ನ ವಿಶೇಷ ಚಿತ್ರಪ್ರದರ್ಶನ ಏರ್ಪಾಡಿಸಿ ಮುತ್ತುಲಕ್ಷ್ಮಿ ಅವರನ್ನು ರಮೇಶ್ ಆಹ್ವಾನಿಸಿದ್ದರು. ಆದರೆ ಮುತ್ತುಲಕ್ಷ್ಮಿ ಅವರು ಕಾರಣಾಂತರಗಳಿಂದ ಚಿತ್ರಪ್ರದರ್ಶನಕ್ಕೆ ಬರಲಿಲ್ಲ.
ಈಗ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ರಮೇಶ್ ತಿಳಿಸಿದ್ದಾರೆ. ಈ ಸಂಬಂಧ ಅವರು ತಮಿಳು ಪತ್ರಿಕೆಗಳಲ್ಲೂ ಚಿತ್ರ ಬಿಡುಗಡೆ ಬಗ್ಗೆ ಜಾಹೀರಾತು ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಮುತ್ತುಲಕ್ಷ್ಮಿ ಏನು ಮಾಡುತ್ತಾರೋ ಮತ್ತೆ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತದೋ ಏನೋ ಕಾದುನೋಡೋಣ. (ಏಜೆನ್ಸೀಸ್)


Click it and Unblock the Notifications











