For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು: ಮತ್ತೊಬ್ಬ ಕಮಿಡಿಯನ್ ಶೋ ರದ್ದು

  |

  ಕೆಲವು ದಿನಗಳ ಹಿಂದಷ್ಟೆ ಜನಪ್ರಿಯ ಸ್ಟ್ಯಾಂಡಪ್‌ ಕಮಿಡಿಯನ್ ಮುನವ್ವರ್ ಫಾರೂಕಿ ಬೆಂಗಳೂರಿನಲ್ಲಿ ನಡೆಸಬೇಕಿದ್ದ ಕಾಮಿಡಿ ಶೋ ಅನ್ನು ಸ್ಥಳೀಯ ಆಡಳಿತ ರದ್ದು ಮಾಡಿತು. 'ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ' ಈ ಶೋ ಅನ್ನು ಆಯೋಜಿಸಲಾಗಿತ್ತು. ಶೋನಿಂದ ಬಂದ ಹಣವನ್ನು ಪುನೀತ್‌ ಅವರಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲು ಯೋಜಿಸಲಾಗಿತ್ತು.

  ತಮ್ಮ ಶೋ ಅನ್ನು ಸರ್ಕಾರ ರದ್ದು ಮಾಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮುನವ್ವರ್ ಫಾರೂಕಿ ಇನ್ನು ಮುಂದೆ ತಾವು ಕಾಮಿಡಿ ಮಾಡುವುದಿಲ್ಲ ಎಂದು ಪ್ರಕಟಿಸಿದರು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದವು.

  ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮತ್ತೊಬ್ಬ ಜನಪ್ರಿಯ ಕಮಿಡಿಯನ್‌ ಕುನಾಲ್ ಕಾಮ್ರಾ ಶೋ ಅನ್ನು ರದ್ದು ಮಾಡಲಾಗಿದೆ. ಕಾರ್ಯಕ್ರಮವನ್ನು ಸರ್ಕಾರ ಅಥವಾ ಸ್ಥಳೀಯ ಆಡಳಿತ ರದ್ದು ಮಾಡಿಲ್ಲ, ಬದಲಿಗೆ ಆಯೋಜಕರ ಮೇಲೆ ಪರೋಕ್ಷ ಒತ್ತಡ ತಂದು ಶೋ ರದ್ದಾಗುವಂತೆ ಮಾಡಲಾಗಿದೆ.

  ಕೋರಮಂಗಲದಲ್ಲಿ ಕುನಾಲ್ ಕಾಮ್ರಾರ ಶೋ ಆಯೋಜನೆ ಮಾಡಲಾಗಿತ್ತು. ಟಿಕೆಟ್‌ ಮಾರಾಟ ಸಹ ಆಗಿತ್ತು. ಆದರೆ ಆಯೋಜಕರಿಗೆ ಬಂದ ಬೆದರಿಕೆ ಕರೆಗಳು ಹಾಗೂ ಪೊಲೀಸರಿಗೆ ಬಂದ ಎಚ್ಚರಿಕೆ ಕರೆಗಳಿಂದಾಗಿ ಆಯೋಜಕರು ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಕಮಿಡಿಯನ್ ಕುನಾಲ್ ಕಾಮ್ರಾ, ''ಎರಡು ಕಾರಣಗಳಿಗಾಗಿ ಶೋ ಅನ್ನು ರದ್ದು ಮಾಡಲಾಗಿದೆ. 45 ಜನರು ಪಾಲ್ಗೊಳ್ಳುವುದಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಹಾಗೂ ನಾನು ಅಲ್ಲಿ ಪ್ರದರ್ಶನ ನೀಡಿದರೆ ಥಿಯೇಟರ್ ಅನ್ನು ಬಂದ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಹುಷಃ ನನ್ನನ್ನು ಕೊರೊನಾದ ಹೊಸ ತಳಿ ಎಂದು ಅವರು ಭಾವಿಸಿರಬೇಕು'' ಎಂದಿದ್ದಾರೆ ಕುನಾಲ್ ಕಾಮ್ರಾ.

  ಅದರ ಜೊತೆಗೆ ಕಾಮಿಡಿ ಶೋ ಅನ್ನು ಹೇಗೆ ರದ್ದು ಮಾಡಲಾಗುತ್ತದೆ ಎಂಬ ಬಗ್ಗೆ ವ್ಯಂಗ್ಯದ ದನಿಯಲ್ಲಿ 'ಮಾರ್ಗಸೂಚಿ'ಗಳನ್ನು ಹಂಚಿಕೊಂಡಿದ್ದಾರೆ ಕಾಮ್ರಾ;

  1) ಶೋ ನಡೆಯುವ ಸ್ಥಳದಲ್ಲಿ ಹಿಂಸಾಚಾರ ಆಗಬಹುದು ಎಂದು ಪೊಲೀಸರಿಗೆ ಮಾಹಿತಿ ನೀಡಿ

  2) ಶೋ ನಡೆಸುವ ಜಾಗದ ಮಾಲೀಕನಿಗೆ ಅಲ್ಲಿ ಹಿಂಸಾಚಾರ ನಡೆಯಬಹುದು ಎಂದು ಮಾಹಿತಿ ನೀಡಿ

  3) ನಂತರ ಕಮಿಡಿಯನ್ ಅಥವಾ ಕಲಾವಿದನಿಗೆ ಮಾಹಿತಿ ನೀಡಿ, ನೀನು ಅಲ್ಲಿಗೆ ಬಂದರೆ ಖಂಡಿತ ಹಿಂಸೆ ನಡೆಯುತ್ತದೆ ಎಂದು ಬೆದರಿಕೆ ಹಾಕಿ

  4) ಒಂದೊಮ್ಮೆ ಕಮಿಡಿಯನ್ ಅಥವಾ ಕಲಾವಿದ ತನ್ನ ಪ್ರದರ್ಶನ ನೀಡಿದರೆ ಏನೆಲ್ಲಾ ಆಗಬಹುದು ಎಂಬ ಬಗ್ಗೆ ಆಯೋಜಕರಿಗೆ ಬೆದರಿಕೆ ಮಾದರಿಯಲ್ಲಿ ಮಾಹಿತಿ ನೀಡಿ

  5) ಶೋ ರದ್ದಾದ ಬಗ್ಗೆ ಮೀಮ್‌ಗಳನ್ನು ತಯಾರು ಮಾಡಿಟ್ಟುಕೊಂಡು ಕುಳಿತಿರಿ, ರದ್ದಾಗುತ್ತಿದ್ದಂತೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ಪಡಿ ಎಂದಿದ್ದಾರೆ ಕಾಮ್ರಾ.

  ಕುನಾಲ್ ಕಾಮ್ರ ಭಾರತದ ಅತ್ಯುತ್ತಮ ಸ್ಟ್ಯಾಂಡಪ್‌ ಕಮಿಡಿಯನ್‌ಗಳಲ್ಲಿ ಒಬ್ಬರು. ಸರ್ಕಾರವನ್ನು, ಕಾರ್ಪೊರೇಟ್‌ಗಳನ್ನು ಟೀಕಿಸಿ ಕಾಮಿಡಿ ಮಾಡುವುದು ಅವರ ಶೈಲಿ. ಮೋದಿ, ರಿಲಯನ್ಸ್‌ನ ಮುಖೇಶ್ ಅಂಬಾನಿ ಬಗ್ಗೆ ಅವರು ಮಾಡಿದ್ದ ಕಾಮಿಡಿ ದೊಡ್ಡ ಹಿಟ್ ಆಗಿತ್ತು.

  ಕೆಲ ತಿಂಗಳ ಹಿಂದೆ ವಿಮಾನವೊಂದರಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಎದುರುಗೊಂಡಿದ್ದ ಕುನಾಲ್ ಕಾಮ್ರಾ, ಅರ್ನಬ್‌ಗೆ ಅವರದ್ದೇ ಶೈಲಿನಲ್ಲಿ ಪ್ರಶ್ನೆಗಳನ್ನು ಕೇಳಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಕಾಮ್ರಾ ಅನ್ನು ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಿದ್ದವು. ಆದರೆ ಕಾಮ್ರಾಗೆ ಸಾಮಾಜಿಕ ಜಾಲಾಣದಲ್ಲಿ ದೊಡ್ಡ ಬೆಂಬಲ ವ್ಯಕ್ತವಾಗಿತ್ತು.

  English summary
  Stand up comedian Kunal Kamra's stand up comedy show which is organized in Bengaluru has been canceled.
  Thursday, December 2, 2021, 11:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X