ಮಂಡ್ಯದಲ್ಲಿ ಅಂಬರೀಶ್, ಯಶ್ ಮಿಂಚಿನ ಸಂಚಾರ

ಮಂಡ್ಯದಲ್ಲಿ ರೈತ ಹಿತ ರಕ್ಷಣಾ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಅಂಬರೀಶ್, ವಾಸ್ತವಾಂಶ ಅರಿಯದೆ ಪ್ರಧಾನಿ ಅವರು ತೆಗೆದುಕೊಂಡ ನಿರ್ಧಾರದಿಂದ ನಮಗೆ ಅನ್ಯಾಯವಾಗಿದೆ. ನಾವೆಲ್ಲರೂ ಶಾಂತಿಯುತವಾಗಿ ಹೋರಾಟ ಮುಂದುವರಿಸುತ್ತೇವೆ ಎಂದರು.
ಬರಗಾಲದಿಂದ ಕಾವೇರಿ ಅಣೆಕಟ್ಟು ತುಂಬಿಲ್ಲ. ಇರುವ ನೀರಿನಲ್ಲಿ ಅಲ್ಪಸ್ವಲ್ಪ ವ್ಯವಸಾಯ ಮಾಡಿರುವ ಜಮೀನುಗಳ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ ಈಗ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರ ಬೆನ್ನಿಗೆ ಚೂರಿ ಹಾಕಿದೆ.
ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅಂಬರೀಶ್ ತಿಳಿಸಿದರು. ರೈತರ ಜೀವನಾಡಿ ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಅವರು ಘೋಷಿಸಿದರು. ಕಾವೇರಿ ಹೋರಾಟಕ್ಕೆ ಅಂಬರೀಶ್ ಬೆಂಬಲ ವ್ಯಕ್ತಪಡಿಸಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟ ಶಾಂತಿಯುತವಾಗಿಯೇ ಇರಲಿ. ಇದರಲ್ಲಿ ನಮಗೆ ಜಯ ಖಂಡಿತ ಸಿಗುತ್ತದೆ ಎಂದು ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾವೇರಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಯಶ್ ಸಹ ಈ ಸಂದರ್ಭದಲ್ಲಿ ಹೋರಾಟಗಾರರಲ್ಲಿ ಹೊಸ ಉತ್ಸಾಹ ತುಂಬಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











