For Quick Alerts
  ALLOW NOTIFICATIONS  
  For Daily Alerts

  500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ಲೋಹಿತಾಶ್ವರ ನಟನಾ ಪಯಣ ಹೀಗಿತ್ತು

  |

  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಇಂದು ಮಧ್ಯಾಹ್ನದ ವೇಳೆಗೆ ಕೊನೆ ಉಸಿರೆಳೆದಿದ್ದಾರೆ. ಕಳೆದೊಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ತೀವ್ರ ಅನಾರೋಗ್ಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ಅವರು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಲೋಹಿತಾಶ್ವ ಅವರು ಆಗಸ್ಟ್‌ 5, 1942ರಲ್ಲಿ ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಜನಿಸಿದರು. ನಾಟಕಕಾರಾಗಿದ್ದ ನಟ ಲೋಹಿತಾಶ್ವ, ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು. ಬಳಿಕ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕರ್ತವ್ಯ ಆರಂಭಿಸಿದರು. ಜೊತೆಗೆ ನಟನೆಯಲ್ಲೂ ಅಭಿರುಚಿ ಹೊಂದಿದ್ದ ಲೋಹಿತಾಶ್ವ ನಾಟಕಕಾರನಾಗಿ ಚಿರಪರಿಚಿತರಾಗಿದ್ದರು.

  ಲೋಹಿತಾಶ್ವ, 1971ರಲ್ಲಿ ವತ್ಸಲಾ ಎನ್ನುವವರನ್ನು ವಿವಾಹವಾದರು. ಮೂವರು ಮಕ್ಕಳ ತಂದೆಯಾಗಿರುವ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟರಾಗಿದ್ದಾರೆ.

  ತಮ್ಮ ಧ್ವನಿ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಲೋಹಿತಾಶ್ವ ಅವರು ಈವರೆಗೂ ಒಟ್ಟು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ಇತಿಹಾಸ ಸೃಷ್ಟಿಸಿದ್ದ ನಟ ಶಂಕರ್‌ ನಾಗ್‌ ಅಭಿನಯದ 'ಮಾಲ್ಗುಡಿ ಡೇಸ್‌' ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗಿರೀಶ್‌ ಕಾಸರವಳ್ಳಿಯವರ 'ಗೃಹಭಂಗ', ಜಿ.ವಿ ಅಯ್ಯರ್‌ ನಿರ್ದೇಶನದ 'ನಾಟ್ಯರಾಣಿ ಶಕುಂತಲಾ', ಕೆ.ಎಂ ಚೈತನ್ಯಾ ನಿರ್ದೇಶನದ 'ಓಂ ನಮೋ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಕರ್ನಾಟಕದ ಮನೆ ಮಾತಾಗಿದ್ದರು.

  1981ರ 'ಮುನಿಯನ ಮಾದರಿ', 'ಸಾಂಗ್ಲಿಯಾನ', 'ಅಭಿಮನ್ಯು', 'ದಾದಾ', 'ಎ.ಕೆ 47', 'ಗೀತಾ', 'ಇಂದ್ರಜಿತ್‌', 'ಜಯಸಿಂಹ', 'ಕಾಡಿನ ರಾಜ', 'ಲಾಕಪ್ ಡೆತ್‌', 'ಕಲಾವಿದ', 'ಚಿನ್ನಾ', 'ಮಿಡಿದ ಹೃದಯಗಳು', 'ಮೈಸೂರು ಜಾಣ', 'ರೆಡಿಮೇಡ್‌ ಗಂಡ', 'ಎಸ್‌.ಪಿ ಸಾಂಗ್ಲಿಯಾನ ಭಾಗ-2', 'ಸ್ನೇಹಲೋಕ', 'ಸುಂದರ ಕಾಂಡ', 'ತುಂಬಿದ ಮನೆ', 'ಸವ್ಯ ಸಾಚಿ', 'ಶಾಂತಿ ನಿವಾಸ', 'ಸಮಯದ ಗೊಂಬೆ', 'ನೀ ಬರೆದ ಕಾದಂಬರಿ', 'ಹಲೋ ಡ್ಯಾಡಿ', 'ಏಕಲವ್ಯ', 'ಆಪತ್ಭಾಂಧವ', 'ಚಾಣಕ್ಯ', ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಕನ್ನಡ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಇನ್ನು ಕಿಚ್ಚ ಸುದೀಪ್‌ ಅಭಿನಯದ ಚಂದು ಸಿನಿಮಾ ಹಾಗೂ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಭಿನಯದ ಸಾರಥಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  ಹವ್ಯಾಸಿ ರಂಗ ಕಲಾವಿದರಾಗಿರುವ ಲೋಹಿತಾಶ್ವ ಅವರು 47 ಮಾರವಳ್ಳಿ ಸರ್ಕಲ್‌, ಭರತ ದರ್ಶನ, ಚಸ್ನಾಳ ದುರಂತ, ದಂಗೆ ಮುಂಚಿನ ದಿನಗಳು, ಹುಲಿಯ ನೆರಳು, ಹುಟ್ಟಾವ ಬಡಿದರೇ, ಕತ್ತಲೆ ದಾರಿ ದೂರ, ಹುಲಿಯ ನೆರಳು, ಮೆರವಣಿಗೆ ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  English summary
  Sandalwood senior actor Lohitashwa T.S acting journey. Here is his movie journey.
  Tuesday, November 8, 2022, 17:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X