»   » ಮರೆಯಲಾಗದ ಮಾಣಿಕ್ಯ ಟಿಎನ್ ಬಾಲಕೃಷ್ಣ ಸ್ಮರಣೆ

ಮರೆಯಲಾಗದ ಮಾಣಿಕ್ಯ ಟಿಎನ್ ಬಾಲಕೃಷ್ಣ ಸ್ಮರಣೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಕಂಡಂತಹ ಪ್ರತಿಭಾವಂತ ನಟರಲ್ಲಿ ಟಿ.ಎನ್.ಬಾಲಕೃಷ್ಣ ಸಹ ಒಬ್ಬರು. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಚಿತ್ರಗಳ ಮೂಲಕ ಅವರು ಜೀವಂತವಾಗಿದ್ದಾರೆ. ಇಂತಹ ಮಹಾನ್ ಕಲಾವಿದನನ್ನು ಸ್ಮರಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ.

ಬಾಲಕೃಷ್ಣ ಅವರು ಹುಟ್ಟು ಕಿವುಡರಾದರೂ ನಿರ್ದೇಶಕರ ಸೂಚನೆ, ಸನ್ನೆಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸುತ್ತಿದ್ದದ್ದು ವಿಶೇಷ. ಸರಿಸುಮಾರು 560ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲಕೃಷ್ಣ ಅಭಿನಯಿಸಿದ್ದಾರೆ. ಜುಲೈ 19, 1995ರಲ್ಲಿ ಬಾಲಣ್ಣ ನಿಧನರಾದರು.

TN Balakrishna

ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ ಅವರ ಡೈಲಾಗ್ "ನೋಡೋ ನಾ ನನ್ನಾಸ್ತೀನೆಲ್ಲ ನನ್ನ ನಾಯಿ ಹೆಸರಿಗೆ ಬರೆದು ಬಿಡ್ತೀನಿ, ಗೆಟ್ ಔಟ್" ಎಂದು ಮಗನಿಗೆ ಹೇಳುವ ಹಾಸ್ಯ ಸನಿವೇಶವನ್ನು ಬಹುಶ ಯಾರೂ ಮರೆತಿರಲಿಕ್ಕಿಲ್ಲ. ಭಕ್ತ ಕುಂಬಾರ, ಸ್ಕೂಲ್ ಮಾಸ್ಟರ್, ಗಲಾಟೆ ಸಂಸಾರ, ಬೆಂಕಿಯ ಬಲೆ, ಕವಿರತ್ನ ಕಾಳಿದಾಸ, ಗಂಧದ ಗುಡಿ, ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ಅವರ ಪಾತ್ರ ಮರೆಯಲು ಸಾಧ್ಯವೆ?

ಹಾಸ್ಯ, ಖಳನಟನಾಗಿ, ಪೋಷಕ ಪಾತ್ರಗಳಲ್ಲಿ ಬಾಲಣ್ಣ ಕನ್ನಡ ಕಲಾರಸಿಕರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿ ಕುಳಿತಿದ್ದಾರೆ. ಇದೇ ನವೆಂಬರ್ 16ರಂದು ಬಾಲಣ್ಣ ಅವರ ಸ್ಮರಿಸಲು ಪ್ರಿಯದರ್ಶಿನಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಧ್ಯಾಹ್ನ 2.30ಕ್ಕೆ ಬಾಲಕೃಷ್ಣ ಅಭಿನಯದ ಚಲನಚಿತ್ರಗಳ ಪ್ರದರ್ಶನ ಇರುತ್ತದೆ. ಬಾಲಣ್ಣ ಅವರ ಛಾಯಾಚಿತ್ರ ಹಾಗೂ ವ್ಯಂಗ್ಯ ಚಿತ್ರಗಳ ಪ್ರದರ್ಶನವೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಚಾಲನೆ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಕೃಷ್ಣ ಕುರಿತು ಆರ್ ಕೇಶವಮೂರ್ತಿ ಅವರು ರಚಿಸಿರುವ ಕೃತಿಯನ್ನು ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಬಾಲಣ್ಣ ಜೊತೆಗಿನ ತಮ್ಮ ಒಡನಾಟವನ್ನು ಹಿರಿಯ ನಟ ಸಿವಿ ಶಿವಶಂಕರ್ ಹಂಚಿಕೊಳ್ಳಲಿದ್ದಾರೆ.

ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಬಾಲಕೃಷ್ಣ ಅವರ ಕೊಡುಗೆಯನ್ನು ತಮ್ಮ ಚುರುಕಾದ ಚಲನಚಿತ್ರ ವಿಮರ್ಶೆಗಳಿಂದ, ಪುಸ್ತಕ ವಿಮರ್ಶೆಯಿಂದ ಗಮನ ಸೆಳೆಯುತ್ತಿರುವ, ಪುಸ್ತಕ ಪ್ರಪಂಚಕ್ಕೆ 'ಜೋಗಿ' ಎಂದೇ ಪರಿಚಿತರಾಗಿರುವ ಗಿರೀಶ್ ರಾವ್ ಸ್ಮರಿಸಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Karnataka Chalanachitra Academy has come up with a tribute to legendary Kannada actor of over 500 films TN Balakrishna, popularly known as 'Balanna' on 16th of November at Badami House. At 2.30 pm Balakrishna one of the popular films will be screened.
Please Wait while comments are loading...