For Quick Alerts
  ALLOW NOTIFICATIONS  
  For Daily Alerts

  ಇಷ್ಟಪಡುವವರಿಗೆ ಇಂದ್ರ'ಲೋಕದ ದರ್ಶನ!

  By Super
  |

  ಇಷ್ಟು ಹೇಳಿ ಇಂದ್ರ ಚಿತ್ರವಿಮರ್ಶೆಗೆ ಇತಿಶ್ರೀ ಹಾಡಿದರೆ ಅದು ತಪ್ಪಾಗಲಾರದು. ಏಕೆಂದರೆ ಈ ಇಂದ್ರಾವತಾರದ ಗುಟ್ಟೇ ಅದು. ಅಲ್ಲಿರೋದು ಒಟ್ಟಾರೆ ಗಜ'ಗಾತ್ರದ ದರ್ಶನ್. ಅದನ್ನು ಬಿಟ್ಟರೆ ಜಗಮಗಿಸುವ ಆಕ್ಷನ್!

  *ವಿನಾಯಕರಾಮ್ ಕಲಗಾರು

  ಹೌದು. ದರ್ಶನ್ ಅಭಿಮಾನಿಗಳಿಗೆ ಇಲ್ಲಿ ಮೃಷ್ಟಾನ್ನ ಭೋಜನವೇ ಕಾದಿದೆ. ದರ್ಶನ್ ಎಂಟ್ರಿ ಕೊಟ್ಟು: ಈ ಇಂದ್ರಂಗೆ ಕರ್ನಾಟಕವೇ ಏರಿಯಾ, ಇಂಡಿಯಾನೇ ಅಡ್ಡಾ...' ಎನ್ನುತ್ತಿದ್ದರೆ- ವಾರೆವ್ಹಾ... ತಮ್ಮ ಪಕ್ಷ ಅಕಾರಕ್ಕೆ ಬಂದಾಗ ಕಾರ್ಯಕರ್ತರು ಹುಚ್ಚೆದ್ದು ಕುಣಿಯುವಂತೆ ಜನ ಕೇಕೆ ಹಾಕುತ್ತಾರೆ. ಇಂದ್ರಲೋಕದ ವೈಭವ ಅಷ್ಟೊಂದು ಅದ್ಧೂರಿಯಾಗಿದೆ. ಅದು ಸಖತ್ ಹಾಟ್ ಮಗಾ...!

  ಅಥವಾ ಇದನ್ನು ಒಂಥರಾ ರೋಡ್ ಶೋ' ಎನ್ನಲೂ ಅಡ್ಡಿಯಿಲ್ಲ. ಮೊದಲಾರ್ಧದ ಕೆಲವು ದೃಶ್ಯಗಳು ಕೊನೆಯಾಗೋದು ರಸ್ತೆಯಲ್ಲೇ! ಒಂದಿಷ್ಟು ಕಡೆ ಇಂದ್ರ ರೌಡಿಗಳನ್ನು ಅಟ್ಟಿಸಿಕೊಂಡು ಹೋಗೋದು... ಇನ್ನೊಂದಿಷ್ಟು ಕಡೆ ಪೋಲಿಸರು ಇಂದ್ರನನ್ನು ಅಟ್ಟಿಸಿಕೊಂಡು ಹೋಗೋದು... ಅಥವಾ ಇದನ್ನೊಂಥರಾ ಚೇಸಿಂಗ್ ಚಿತ್ರ ಎಂದರೆ ತಪ್ಪಿಲ್ಲ.

  ಇಂದ್ರಾವತಾರ... ಇಂದ್ರ, ಸಾಫ್ಟ್‌ವೇರ್ ಎಂಜಿನಿಯರ್. ಅಣ್ಣ ರೈ-ಅತ್ತಿಗೆಗೆ ಇವನೆಂದರೆ ಪ್ರಾಣ. ಅವ ಇಂದ್ರನಿಗೂ ಅಣ್ಣ, ಊರೋರಿಗೂ ಅಣ್ಣ. ದಯಾನಂದ್ ಎಂಬ ರೌಡಿಗೆ ರೈಅಣ್ಣನ ಕುಟುಂಬದ ಮೇಲೆ ಕಣ್ಣು. ಯಾವುದೋ ಕೇಸ್‌ನಲ್ಲಿ ಊರಿನ ಹೆಣ್ಣುಮಕ್ಕಳನ್ನು ದಯಾನಂದ್ ಕಡೆಯವರು ಎಳೆದುಕೊಂಡು ಹೋಗುತ್ತಾರೆ. ಅವರ ತಲೆಗೆ ....' ಪಟ್ಟ ಕಟ್ಟುತ್ತಾರೆ. ಕೊನೆಗೆ ಅವರು ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರೈಅಣ್ಣನ ಕಡೆಯವರು ದಯಾನಂದ್ ಕಡೆಯವರಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಆಮೇಲೆ ಮಾಮೂಲಿ. ದಯಾನಂದ್ ಇಂದ್ರನ ಅಣ್ಣ ಅತ್ತಿಗೆಯನ್ನು ಶೂಟ್ ಮಾಡಿ ಬಿಸಾಕುತ್ತಾನೆ. ಇಂದ್ರ ಅವರ ಮೇಲೆ ಸೇಡಿಗೆ ಸೇಡು ಎಂದು ನಿಲ್ಲುತ್ತಾನೆ. ಒಂದಿಷ್ಟು ಜನರನ್ನು ಕೊಂದು ಕೆಲದಿನಗಳ ವರೆಗೆ ಕಣ್ಮರೆಯಾಗುತ್ತಾನೆ. ಶ್ರೀರಂಗಪಟ್ಟಣದ ರಾಮಾಶಾಸ್ತ್ರಿಗಳ ಕೈಕೆಳಗೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ... ಮುಂದೇನು ಶಿವಾ?

  ನಿರ್ದೇಶಕ ಎಚ್. ವಾಸುಗೆ ಹೇಗೆ ಜನರನ್ನು ಟಾಕೀಸ್‌ಗೆ ಕರೆಸಿಕೊಳ್ಳಬೇಕು ಎಂದು ಗೊತ್ತು. ಅದಕ್ಕಾಗಿ ಪಕ್ಕಾ ಪ್ರೀ ಪ್ಲ್ಯಾನ್ ಮಾಡಿಕೊಂಡೇ ಇಂದ್ರ'ಕ್ಕೆ ಕೈ ಹಾಕಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಸುಮಾರು ಎಂಟಕ್ಕೂ ಹೆಚ್ಚು ಕಾರುಗಳನ್ನು ಪಲ್ಟಿ ಹೊಡೆಸಿದ್ದಾರೆ. ದರ್ಶನ್ ಮ್ಯಾನರಿಸಂಗೆ ಸರಿಹೊಂದುವ ಆಕ್ಷನ್‌ಗಳ ಪ್ಯಾಕೇಜ್ ಕೊಟ್ಟಿದ್ದಾರೆ ವರ್ಮ. ಪ್ರತಿ ಫ್ರೇಮ್‌ನಲ್ಲೂ ಅದ್ಧೂರಿತನ ಕಾಪಾಡಿಕೊಂಡು ಹೋಗುವಲ್ಲಿ ನಿರ್ದೇಶಕರು ಬೆವರು ಹರಿಸಿದ್ದಾರೆ. ಬಿ.ಎ. ಮಧು ಸಂಭಾಷಣೆಯಲ್ಲಿ ಪಂಚಿಂಗ್ ಇದೆ. ಸ್ವಿಜರ್‌ಲ್ಯಾಂಡ್, ಬ್ಯಾಂಕಾಕ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಿದ್ದು ವರ್ಕ್‌ಔಟ್ ಆಗಿದೆ. ಕೃಷ್ಣಕುಮಾರ್ ಛಾಯಾಗ್ರಹಣ ಅಲ್ಲಿ ಹೆಚ್ಚು ಜೀವಂತವೆನಿಸುತ್ತದೆ.

  ದರ್ಶನ್ ದ್ವಿಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. ಮೂಕ ಹುಡುಗಿ ಜತೆ ಮಾತನಾಡುವಾಗ, ಅತ್ತಿಗೆ ಕೈತುತ್ತು ತಿಂದು ಕಣ್ಣೀರಿಡುವಾಗ, ಚಂದವಾಗಿ ಕುಣಿಯುವಾಗ, ಬೆನ್ನಹಿಂದೆ ಬಚ್ಚಿಟ್ಟ ಮಚ್ಚು ಹೊರತೆಗೆಯುವಾಗ... ಹಿ ಇಸ್ ವಂಡರ್‌ಫುಲ್. ಹಾಟ್ ಹುಡುಗಿ ನಮಿತಾ ಅರೆಬರೆ ಉಡುಗೆಯನ್ನು ಸಹಿಸೋದು ಕಷ್ಟ. ಹಾಗೆ ಎಲ್ಲಾ ತೋರುವ ಹಾಗೆ ಕುಣಿಯುವ ಬದಲು ಲಂಗ ದಾವಣಿಯಲ್ಲೇ ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು. ಸಾಂಘವಿ ಆಟಕ್ಕೂ ಇಲ್ಲ. ಲೆಕ್ಕಕ್ಕೂ ಇಲ್ಲ.

  ಬುಲೆಟ್ ಪ್ರಕಾಶ್ ಕಾಮಿಡಿ ಎಕ್ಸಲೆಂಟ್. ಅವಿನಾಶ್, ವಿನಯಾಪ್ರಸಾದ್, ರಮೇಶ್‌ಭಟ್, ಆನಂದ್‌ರಾಜ್... ಎಲ್ಲರೂ ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಅಂದ ಹಾಗೆ ಇದರಲ್ಲಿ ಕೆಲವು ದೃಶ್ಯಗಳು ಕನ್ನಡದ ಸಿನಿಮಾಗಳ ತುಣುಕುಗಳನ್ನು ಹೋಲುವುದು ವಾಸು ಪವಾಡ. ಮೊದಲಾರ್ಧದ ಕೆಲವು ದೃಶ್ಯಗಳು ರವಿಶಾಸ್ತ್ರಿ ಚಿತ್ರವನ್ನು ನೆನಪಿಸುತ್ತವೆ. ಡಾನ್ ಒಬ್ಬ ಪುಟ್ಟ ಊರು ಸೇರಿ, ಜನನಾಯಕ ಎನಿಸಿಕೊಳ್ಳೋದು ಕೋಟಿಗೊಬ್ಬ' ಸಿನಿಮಾದಲ್ಲೂ ಇದೆ. ಸೆಂಟ್ರಲ್ ಜೈಲ್ ಸಿನಿಮಾದಲ್ಲೂ ಸಾಯಿಕುಮಾರ್ ಅಣ್ಣನ ಸಾವಿಗೆ ಕಾರಣರಾದವರ ಮೇಲೆ ಸೇಡು ತೆಗೆದುಕೊಳ್ಳುತ್ತಾನೆ. ಮತ್ಯಾರನ್ನೂ ಹಿಡಿದು ಇವನೇ ಹೀರೊ ಎಂದು ಪೊಲೀಸರು ಕನ್ ಫ್ಯೂಸ್ ಆಗುವುದು ಉಪೇಂದ್ರ ನಿರ್ದೇಶಕನದ ಆಪರೇಷನ್ ಅಂತ' ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ನೆನಪಿಸುತ್ತದೆ.... ಹೀಗೆ ಪಟ್ಟಿಮಾಡಿದರೆ ಇನ್ನೂ ಎಷ್ಟೆಷ್ಟೋ ಸಿಗುತ್ತವೆ!

  ಭಗವದ್ಗೀತೆಯ ಒಟ್ಟೂ ಅಧ್ಯಾಯದಷ್ಟು ಸಿನಿಮಾ ಮಾಡಿರುವ ವಾಸು ಸಾಹೇಬ್ರ ತಲೆಗೆ ಒಂದು ಒಳ್ಳೆ ಕತೆ ಹೊಳೆದಿದ್ದರೆ ಅದರ ಗಮ್ಮತ್ತೇ ಬೇರೇನೇ ಇರುತ್ತಿತ್ತು ಬಿಡಿ.
  ಅದೇ ರೀತಿ ವಿ. ಹರಿಕೃಷ್ಣ ಸಂಗೀತ ಕೇಳಲೊಂಥರಾಥರಾ. ಹಾಡಿನ ಸಾಹಿತ್ಯ ಏನು ಎಂಬುದನ್ನು ಕರೆಕ್ಟ್ ಆಗಿ ಗುರುತು ಹಿಡಿದವರಿಗೆ ಆ ಇಂದ್ರಲೋಕದ ಪದವಿ ಗ್ಯಾರಂಟಿ. ಕವಿರಾಜ್, ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಹೊಸ ರೂಪ' ಕೊಟ್ಟು ಮಜ ತಗೊಂಡಿದ್ದಾರೆ ಹರಿಕೃಷ್ಣ!

  English summary
  Darshan Starrer 'Indra' movie review by Vinayak ram kalgar. Movie also has Namitha, avinash, sanghavi, vinaya prakash, bullet prakash in the star cast

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X