ಕಟ್ಟಾ ಕನ್ನಡಿಗರು ನೋಡಲೇಬೇಕಾದ ಚಿತ್ರ: ಪ್ರಾರ್ಥನೆ

ಸಿನಿಮಾಗಳ ಬಗ್ಗೆ ಮೈಲಿಗಟ್ಟಲೇ ಬರೆಯುವ ಸಿನಿಮಾ ಪತ್ರಕರ್ತರು ಸಿನಿಮಾ ಮಾಡಿ ತೋರಿಸಲಿ...ಆಗ ನಮ್ಮ ಕಷ್ಟ ಏನು ಎಂಬುದು ಗೊತ್ತಾಗುತ್ತದೆ! ಹೀಗೆ ಕೆಲ ಸಿನಿಮಾ ಮಂದಿ ಪತ್ರಕರ್ತರು ಬರೆದ ಚಿತ್ರವಿಮರ್ಶೆಗೆ ವಿರುದ್ಧವಾಗಿ ಕಾಮೆಂಟ್ ಮಾಡಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ, ನೋಡುತ್ತಲೇ ಇದ್ದೇವೆ. ಅಂಥ ಗಾಂಧಿನಗರದ ಒಂದು ವರ್ಗದ ದರ್ಪದ ಮಂದಿಗೆ ದರ್ಪಣ ಹಿಡಿದಿದ್ದಾರೆ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ. ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಾರ್ಥನೆ ಚಿತ್ರವನ್ನು ಖಂಡಿತ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ನೋಡಬೇಕು!
ಹೌದು, ಇಡೀ ಸಿನಿಮಾ ಹಾಗಿದೆ. ಕನ್ನಡತನದ ಕತ್ತು ಹಿಸುಕ ಹೊರಟಿರುವ ಇಂಗ್ಲೀಷ್ ಭಾಷೆಯ ವಿರುದ್ಧ ಶೆಣೈ ರಣಕಹಳೆ ಊದಿದ್ದಾರೆ. ತಮ್ಮ ಮಕ್ಕಳು ಓದಿ ಉದ್ದಾರ ಆಗಬೇಕಾದರೆ ಇಂಗ್ಲೀಷ್ ಕಾನ್ಮೆಂಟೇ ಖಾಯಂ ಆಗಬೇಕು ಎನ್ನುವ ಅದೆಷ್ಟೋ ಕುಟುಂಬಗಳಿಗೆ ಶೆಣೈ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ.
ಕನ್ನಡದಲ್ಲಿ ಸಿನಿಮಾಗಳೆಂದರೆ ಕಾಸರವಳ್ಳಿ ಮತ್ತು ಕಾಸು ಕೊಟ್ಟು ನೋಡುವ ಸಿನಿಮಾ ಎಂಬ ಎರಡೇ ವರ್ಗ ಇರುವುದು ಎಂಬ ತಪ್ಪು ಕಲ್ಪನೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಜನ ನೋಡುವ ಚಿತ್ರಕ್ಕೆ ಅವಾರ್ಡ್ ಬರುವುದಿಲ್ಲ. ಅವಾರ್ಡ್ ಬರುವ ಚಿತ್ರವನ್ನು ಜನ ನೋಡುವುದಿಲ್ಲ ಎಂಬ ಅಲಿಖಿತ ಸಿದ್ಧಾಂತಕ್ಕೆ ಅದ್ಯಾಕೋ ಪ್ರೇಕ್ಷಕ ಬಲಿಯಾಗುತ್ತಿದ್ದಾನೆ. ಅವೆಲ್ಲವನ್ನೂ ಮೆಟ್ಟಿ ನಿಂತು ಶೆಣೈ ಪ್ರಾರ್ಥನೆ ಸಿನಿಮಾ ಮಾಡಿದ್ದಾರೆ.
ಇಡೀ ಚಿತ್ರ ಪ್ರತೀ ಹಂತದಲ್ಲೂ ಒಂದು ಗುಣಮಟ್ಟದ ಕಾತುರತೆ, ಕೌತುಕತೆ ಕಾಪಾಡಿಕೊಂಡು ಹೋಗುತ್ತದೆ. ಶೆಣೈ ಜೊತೆ ಜಿ.ಎಂ. ಪ್ರಹ್ಲಾದ್ ಅವರ ಅಪರೂಪ ಎನಿಸುವ ಕಥೆಯೂ ಕೈ ಜೋಡಿಸಿದೆ. ಇಡೀ ಚಿತ್ರ ಶ್ರೀಮಂತವಾಗಿ ಮೂಡಿಬರಲು ಕಾರಣರಾದವರು ಅನಂತನಾಗ್. ಅನಂತ್ ಇತ್ತೀಚಿನ ದಿನಗಳಲ್ಲಿ ಈ ಮಟ್ಟದ ಕಾಡುವ ಪಾತ್ರ ಮಾಡಿದ್ದು ನೆನಪಿಲ್ಲ.


Click it and Unblock the Notifications











