twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಮುಂಗಾರು: ಹ್ಯಾಟ್ಸಾಫ್ ಮಿಸ್ಟರ್ ದ್ವಾರ್ಕಿ

    By * ರಾಜೇಂದ್ರ ಚಿಂತಾಮಣಿ
    |

    'ಮುಂಗಾರು ಮಳೆ' ಮತ್ತು 'ಮೊಗ್ಗಿನ ಮನಸು' ಚಿತ್ರಗಳ ನಂತರ ನಿರ್ಮಾಪಕ ಇ ಕೃಷ್ಣಪ್ಪ 'ಮತ್ತೆ ಮುಂಗಾರು' ಎಂಬ ಮತ್ತೊಂದು ವಿಭಿನ್ನ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಕಲಾತ್ಮಕ ಅಂಶಗಳಿಂದ ತುಂಬಿರುವ ಚಿತ್ರ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ಬಾಲಿವುಡ್ ಚಿತ್ರದಷ್ಟೆ ಶ್ರೀಮಂತಿಕೆ ಮೆರೆದಿದೆ. ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

    ಚಿತ್ರವನ್ನು ನೋಡುವಷ್ಟು ಹೊತ್ತು ಭಾವನೆಗಳ ಮೆರವಣಿಗೆ ಕಣ್ಣ ಮುಂದೆ ಸಾಗುತ್ತದೆ. ಚಿತ್ರದಲ್ಲಿ ಪ್ರೀತಿ, ಪ್ರೇಮದ ಅಂಶಗಳಿದ್ದರೂ ಭಾವನೆಗಳ ತಾಕಲಾಟದಲ್ಲಿ ಪ್ರೇಕ್ಷಕನ ಅರಿವಿಗೆ ಅವು ಬರುವುದೇ ಇಲ್ಲ. ಸಂಭಾಷಣೆಯಲ್ಲಿ ಚಾಕಚಕ್ಯತೆ, ನಿರ್ದೇಶನದಲ್ಲಿ ಲವಲವಿಕೆ ಇದೆ. ಚಿತ್ರದ ಕ್ಯಾಪ್ಟನ್ ದ್ವಾರ್ಕಿ ಹಡಗನ್ನು ಜಾಣ್ಮೆಯಿಂದ ಮುನ್ನಡೆಸಿದ್ದಾರೆ.

    ಶ್ರೀನಗರ ಕಿಟ್ಟಿಯ ನಟನೆ, ಪೌಲ್ ರಾಜ್ ಅವರ ಸಂಗೀತ, ಸುಂದರನಾಥ್ ಸುವರ್ಣ ಛಾಯಾಗ್ರಹಣ ಪ್ರೇಕ್ಷಕರ ಪಾಲಿಗೆ ರಸನಿಮಿಷಗಳು. ಯಾವುದೇ ಕಮರ್ಷಿಯಲ್ ಅಂಶಗಳಿಲ್ಲದೆ ಪ್ರೇಕ್ಷಕರನ್ನು ಸೀಟಿಗೆ ಅಂಟಿಕೊಂಡು ಕೂರುವಂತೆ ಮಾಡಿರುವುದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾರಾಯಣ ಮಂಡಗದ್ದೆ ಎಂಬುವವರ ನೈಜ ಕಥೆಯೆ 'ಮತ್ತೆ ಮುಂಗಾರು'. ಅರೇಬಿಯಾ ಸಮುದ್ರದಲ್ಲಿ ಪ್ರಕೃತಿಯ ವಿಕೋಪಕ್ಕೆ ಸಿಕ್ಕ ಹಡಗೊಂದು ಪಾಕಿಸ್ತಾನದ ಸರಹದ್ದನ್ನು ದಾಟುವ ಮೂಲಕ ಎಂಬತ್ತರ ದಶಕಕ್ಕೆ ಕಥೆ ಹೊರಳುತ್ತದೆ. ಪಾಕಿಸ್ತಾನ ನೌಕಾಪಡೆಗೆ ಸಿಕ್ಕಿಬಿದ್ದ ಅವರನ್ನು ಕತ್ತಲ ಕೂಪಕ್ಕೆ ದೂಡುತ್ತಾರೆ.

    ಬರೋಬ್ಬರಿ 21 ವರ್ಷಗಳ ಕಾಲ ಕರಾಚಿಯ ಕತ್ತಲ ಕೋಣೆಯಲ್ಲಿ ಬೆಸ್ತರು ಬದುಕನ್ನು ದೂಡಬೇಕಾಗುತ್ತದೆ. ಎಂಬತ್ತರ ದಶಕದಲ್ಲಿ ಹದಗೆಟ್ಟ ಭಾರತ ಮತ್ತು ಪಾಕಿಸ್ತಾನ ಸಂಬಂಧಗಳು ಇವರ ಬದುಕನ್ನು ಮತ್ತಷ್ಟು ದುಸ್ತರವಾಗಿಸುತ್ತವೆ. ಪಾಕಿಸ್ತಾನದ ಜೈಲುಗಳಲ್ಲಿ ಭಾರತೀಯರಿಗೆ ಕೊಡುವ ಶಿಕ್ಷೆ ಹೇಗಿರುತ್ತದೆ ಎಂಬುದರ ಚಿತ್ರಣ ಮನಕಲಕುತ್ತದೆ.

    ಸನ್ನಿವೇಶವೊಂದರಲ್ಲಿ ನೀನಾಸಂ ಅಶ್ವತ್ಥ್ ಸಂಪೂರ್ಣ ನಗ್ನವಾಗಿರುವುದು ಪಾತ್ರದ ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿ.
    ಇನ್ನೇನು ಇವರು ಬಿಡುಗಡೆಯಾಗಬೇಕು ಎಂಬಷ್ಟರಲ್ಲಿ 1984ರಲ್ಲಿ ಇಂದಿರಾಗಾಂಧಿಯ ಹತ್ಯೆಯಾಗುತ್ತದೆ. ಬಳಿಕ ಬಾಬ್ರಿ ಮಸೀದಿ ಧ್ವಂಸ, ರಾಜೀವ್ ಗಾಂಧಿ ಹತ್ಯೆ, ಕಾರ್ಗಿಲ್ ಯುದ್ಧಗಳು ಇವರ ಬಿಡುಗಡೆಗೆ ಎರವಾಗುತ್ತವೆ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿ ಮತ್ತು ಲಾಹೋರ್ ಗೆ ಐತಿಹಾಸಿಕ ಬಸ್ ಸೇವೆಯನ್ನು ಆರಂಭಿಸುವ ಮೂಲಕ ಪಾಕ್ ಮತ್ತು ಭಾರತ ಸಂಬಂಧಗಳು ಸ್ವಲ್ಪ ಮಟ್ಟಿಗೆ ಸುಧಾರಿಸಿರುತ್ತವೆ. ಭಾರತ ಮತ್ತು ಪಾಕಿಸ್ತಾನದ ಖೈದಿಗಳನ್ನು ಪರಸ್ಪರ ಬಿಡುಗಡೆ ಮಾಡಿಕೊಳ್ಳುವ ಮೂಲಕ ಇವರಿಗೂ ನರಕದಿಂದ ಮುಕ್ತಿ ಸಿಗುತ್ತದೆ.

    ಬಿಗಿಯಾದ ನಿರೂಪಣೆಯಿಂದ ಚಿತ್ರ ಪ್ರೇಕ್ಷಕರ ಕಣ್ಣರಳಿಸುತ್ತದೆ. ಬೆಸ್ತರು ಪಾಕಿಸ್ತಾನದ ಜೈಲುಗಳಲ್ಲಿ 21 ವರ್ಷಗಳ ಕಾಲ ಅನುಭವಿಸುವ ಶಿಕ್ಷೆ ಘನಘೋರವಾಗಿದೆ. ಚುರುಕುತನದಿಂದ ಕೂಡಿರುವ ದ್ವಾರ್ಕಿ ಅವರ ನಿರ್ದೇಶನಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ನಾಣಿ(ಶ್ರೀನಗರ ಕಿಟ್ಟಿ) ಮತ್ತು ತಾರಾ(ರಚನಾ ಮಲ್ಹೋತ್ರಾ) ತುಂಟ ಪ್ರೇಮದ ಮೂಲಕ ಆರಂಭವಾಗುವ ಚಿತ್ರ ಕಡೆಗೆ ಮಳೆ ಸುರಿಸಿ ನಿರಾಳವಾದ ಮೋಡಗಳಂತೆ ಭಾಸವಾಗುತ್ತದೆ.

    ಮುಂಬೈನ ಬೋಟ್ ಮೆಕ್ಯಾನಿಕ್ ಆಗಿ ನಾಣಿ ಕೆಲಸ ಮಾಡುತ್ತಿರುತ್ತಾನೆ. ನೆರೆಮನೆಯ ಹುಡುಗಿ ತಾರಾಳ ಪ್ರೀತಿಯಲ್ಲಿ ಬಂಧಿಯಾಗುತ್ತಾನೆ. ಪರಸ್ಪರ ಒಬ್ಬರನ್ನೊಬ್ಬರು ಇಷ್ಟಪಟ್ಟಿರುತ್ತಾರೆ. ತಾರಾಳನ್ನು ಮದುವೆಯಾಗುವುದಾಗಿ ತಿಳಿಸಿರುತ್ತಾನೆ. ಆದರೆ ವಿಧಿಯಾಟದಲ್ಲಿ ಆರು ಮಂದಿ ಸಂಗಡಿಗರೊಂದಿಗೆ ನಾಣಿಯೂ ಪಾಕಿಸ್ತಾನದ ಜೈಲು ಪಾಲಾಗುತ್ತಾನೆ.

    ನಾಣಿಯ ಪಾತ್ರಕ್ಕೆ ಶ್ರೀನಗರ ಕಿಟ್ಟಿ ಜೀವತುಂಬಿದ್ದಾರೆ. ಮುಖ್ಯವಾಗಿ ಭಾವನಾತ್ಮಕ ಸನ್ನಿವೇಶಗಳಲ್ಲಿ ಮನಸ್ಸಿಗೆ ಹತ್ತಿರವಾಗುತ್ತಾರೆ ಕಿಟ್ಟಿ. ಮುದ್ದು ಮುಖದ ಸುಂದರಿ ರಚನಾ ಮಲ್ಹೋತ್ರಾ ಅವರ ಅಭಿನಯ ಲವಲವಿಕೆಯಿಂದ ಕೂಡಿದೆ. ಆಕೆಯ ಪಾತ್ರ ಚಿತ್ರದ ಉದ್ದಕ್ಕೂ ಬರದಿದ್ದರೂ ಇರುವಷ್ಟರಲ್ಲೆ ಕಾಡುತ್ತಾರೆ. ತಾರಾ ಪಾತ್ರಕ್ಕೆ ರಚನಾ ನ್ಯಾಯ ಒದಗಿಸಿದ್ದಾರೆ.

    ಚಿತ್ರದ ಮತ್ತೊಂದು ಗಮನಾರ್ಹ ಪಾತ್ರ ಎಂದರೆ ನೀನಾಸಂ ಅಶ್ವತ್ಥ್ ಅವರದು. ಇಕ್ಬಾಲ್ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಚಿತ್ರದ ಸನ್ನಿವೇಶವೊಂದರಲ್ಲಿ ಅವರು ಸಂಪೂರ್ಣ ನಗ್ನವಾಗಿರುವುದು (ಪ್ರೇಕ್ಷಕರ ಗಮನಕ್ಕೆ ಅಷ್ಟಾಗಿ ಬರುವುದಿಲ್ಲ) ಪಾತ್ರದ ಮೇಲಿನ ಅವರ ಅಭಿಮಾನವನ್ನು ತೋರಿಸುತ್ತದೆ. ಪಾಕಿಸ್ತಾನದ ಯೋಧರಿಂದ ನಾಲಿಗೆ ಕತ್ತರಿಸಿಕೊಂಡು ಅನುಭವಿಸುವ ಯಾತನೆ ಹೃದಯ ಸಮುದ್ರ ಕಲಕುತ್ತದೆ.

    ಕಥೆಗೆ ಪೂರಕವಾಗಿರುವ ರವಿಶಂಕರ್, ಏಣಗಿ ನಟರಾಜ್ ಮತ್ತು ಉಳಿದ ಪಾತ್ರಗಳನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ದ್ವಾರ್ಕಿ ಅವರು ಅದ್ಭುತ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಪೌಲ್ ರಾಜ್ ಅವರ ಸಂಗೀತ, ಸುಂದರನಾಥ ಸುವರ್ಣ ಕ್ಯಾಮೆರಾಗಳು ಕೆಲಸ ಮಾಡಿವೆ. ಸಮುದ್ರದ ರುದ್ರನರ್ತನಕ್ಕೆ ಸಿಕ್ಕ ಹಡಗಿನ ಚಿತ್ರಣವಂತೂ ಮೈನವಿರೇಳಿಸುವಂತಿದೆ.

    ಕ್ಲೈಮ್ಯಾಕ್ಸ್ ಹಂತ ತಲುಪುವಷ್ಟರಲ್ಲಿ ಕಿಟ್ಟಿ ಮತ್ತು ನಟರಾಜ್ ಪಾತ್ರಗಳನ್ನು ಹೊರತು ಪಡಿಸಿದರೆ ಉಳಿದವು ಜಾಳುಜಾಳು. ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮತ್ತಷ್ಟು ಬಲಪಡಿಸಬಹುದಿತ್ತು. ಚಿತ್ರದ ನಾಯಕ ನಾಣಿ ಊರು ತಲುಪಿ ತನ್ನ ತಿಥಿ ಊಟವನ್ನು ತಾನೆ ಮಾಡುವುದು ಅತಿರೇಕ ಅನ್ನಿಸುತ್ತದೆ. ಇಪ್ಪತ್ತೊಂದು ವರ್ಷಗಳ ಬಳಿಕ ಮಗ ಹಿಂತಿರುಗಿದರೂ ತಾಯಿಗೆ ಮಾತ್ರ ವಯಸ್ಸಾದಂತೆ ಕಾಣುವುದಿಲ್ಲ. ಆದರೆ ಮಗ ಮಾತ್ರ ಗುರುತು ಸಿಗದಷ್ಟು ಬದಲಾಗಿರುತ್ತಾನೆ. ಈ ರೀತಿಯ ಸನ್ನಿವೇಶಗಳಲ್ಲಿ ಸ್ವಲ್ಪ ಎಚ್ಚರವಹಿಸಬೇಕಾಗಿತ್ತು.

    ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಅವರನ್ನು ತೋರಿಸದೆ ಅವರ ಧ್ವನಿಯನ್ನು ಬಳಸಿಕೊಂಡಿರುವ ರೀತಿ ನಿಜಕ್ಕೂ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಮನರಂಜನಾತ್ಮಕ ಅಂಶಗಳಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲೂ ಬೋರು ಹೊಡಿಸುವುದಿಲ್ಲ. ಪಾಕಿಸ್ತಾನದ ಬಲೆಗೆ ಬಿದ್ದ ಬೆಸ್ತರ ಬದುಕು ದುಸ್ತರವಾಗುವ ಬಗೆ ಕಣ್ಣಮುಂದೆ ನಿಂತು ಕಾಡುತ್ತಲೆ ಇರುತ್ತದೆ.

    ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

    Saturday, August 7, 2010, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X