»   » ಚಿತ್ರವಿಮರ್ಶೆ: ಪ್ರೀತಿಯ ತೇರು , ಪ್ರೇಕ್ಷಕ ಪಾರು

ಚಿತ್ರವಿಮರ್ಶೆ: ಪ್ರೀತಿಯ ತೇರು , ಪ್ರೇಕ್ಷಕ ಪಾರು

Subscribe to Filmibeat Kannada

ಗಂಟೆಗೆ 3 ಹೊಡೆದಾಟ. ಮತ್ತೆ ನಾಯಕನ ಪರದಾಟ. ಅಲ್ಲಿಗೆ ಎಂಟ್ರಿ ಕೊಡುತ್ತಾಳೆ ನಾಯಕಿ. ರೌಡಿಯೊಬ್ಬ ಹುಡುಗಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾನೆ. ಕೊನೆಗೆ ಆಕೆ ತನಗೆ ಮೋಸ ಮಾಡ್ತವ್ಳೆ ಎಂದು ಗೊತ್ತಾಗಿ, ಹುಚ್ಚನಾಗುತ್ತಾನೆ. ಹುಡುಗಿಗೆ ತನ್ನ ತಪ್ಪಿನ ಅರಿವಾಗಿ ಗಳ ಗಳಗಳ ಅಂತ ಅಳೋಕೆ ಶುರು ಮಾಡ್ತಾಳೆ...

ಇಲ್ಲಿ ನಾಯಕ ತಾನಿಲ್ ನಕ್ಕರೆ ಅತ್ತಂತೆ, ಅತ್ತರೆ ನಕ್ಕಂತೆ, ಸುಮ್ಮನಿದ್ದರೆ ನಟಿಸಿದಂತೆ, ಬಾಯಿ ಬಿಟ್ಟರೆ ಚ್ಯೂಯಿಂಗ್ ಗಮ್ ಅಗೆದಂತೆ ಭಾಸವಾಗುತ್ತದೆ. ಫೈಟಿಂಗ್ ಮಾಡುವಾಗ ಸಿಕ್ಕಾಪಟ್ಟೆ ಕಾಮಿಡಿಯೋ ಕಾಮಿಡಿ. ನಿರ್ದೇಶಕರು ತಾನಿಲ್ ಕಡೆಯಿಂದ ಅಭಿನಯ ತೆಗೆಸಲು 'ಬೆವರಿನ ಹೊಳೆ' ಹರಿಸಿದ್ದಾರೆ. ಚಿತ್ರದಲ್ಲಿ ಭಯಂಕರ ಅದ್ದೂರಿತನ ತೋರಿಸಲು ನಿರ್ಮಾಪಕರು 'ನೋಟಿನ ಹೊಳೆ' ಹರಿಸಿದ್ದಾರೆ. ಅಲ್ಲಲ್ಲಿ ಹೆಲಿಕಾಪ್ಟರ್ ಬಳಸುವುದೇನು? ಹೊಸ ಹೊಸ ಕಾರುಗಳನ್ನು ಬಳಸುವುದೇನು? ನಾಲ್ಕು ಕೋಟಿ ಸಿನಿಮಾ ಮಾಡುವುದು ಎಂದರೆ ಹುಡುಗಾಟಿಕೆಯಾ? ಇದು ಪ್ರೀತಿಯ ತೇರು ಅಲ್ಲ, ಕಾಸಿನ ತೇರು ಎನ್ನಬಹುದು. ಬಹುಶಃ ಒಬ್ಬ ಹೊಸ ನಾಯಕನಿಗೆ ಇಷ್ಟೊಂದು ಹೈ ಬಜೆಟ್ ಸುರಿದು ಸಿನಿಮಾ ಮಾಡಿದ್ದು ಇದೇ ಮೊದಲೇನೊ?!

ನಿರ್ದೇಶಕ ಪ್ರಸಾದ್‌ಗೆ ಕತೆಯಲ್ಲಿ ಹಿಡಿತವಿಲ್ಲ. ಆದರೆ ಪ್ರತಿಯೊಂದನ್ನೂ ಅದ್ದೂರಿಯಾಗಿ ತೋರಿಸಬೇಕು ಎಂಬ ಮಿಡಿತವಿದೆ. ಚಿತ್ರಕತೆಯನ್ನು ನೆಟ್ಟಗೆ ಹೆಣೆಯಲು ಗೊತ್ತಿಲ್ಲ, ಆದರೆ ಪೋಷಕ ಪಾತ್ರಗಳಿಂದ ಕೆಲಸ ತೆಗೆಸಿಕೊಳ್ಳುವ ಸಾಮರ್ಥ್ಯವಿದೆ. ಸಂಗೀತ, ಕತೆ, ಚಿತ್ರಕತೆ, ಸಂಭಾಷಣೆಯ ಜತೆ ನಿರ್ದೇಶನವನ್ನೂ ಮಾಡಿದ್ದಾರೆ ಎಂದರೆ ಪ್ರಸಾದ್ ಜ್ಯೂ. ಕಲಾ ಸಾಮ್ರಾಟೇ! ಇಬ್ಬರು ನಾಯಕಿಯರೂ ಕೆಲಸಕ್ಕೆ ಮೋಸ ಮಾಡಿಲ್ಲ. ಮೈಕೊನಾಗರಾಜ್, ಧರ್ಮ ಮೊದಲಾದವರು ಇರುವುದರಿಂದ ಒಂದಷ್ಟು ಹೊತ್ತು ಕಣ್ಣರಳಿಸಿಕೊಂಡು ನೋಡಬಹುದು. ಹೀರೋ ಬಂದಾಗ ಮಾತ್ರ ಹಿರೋಷಿಮಾದಲ್ಲಿ ಬಾಂಬ್ ಬಿದ್ದ ಅನುಭವ! 'ತೇರು' ಏರಿ ಥೇಟರ್‌ದಾಗೆ ಪ್ರೇಕ್ಷಕ ನಗುತಾನೆ... ಮರ ಗಿಡ ತೂಗ್ಯಾವೇ ಹಕ್ಕೀ ಹಾರ್‍ಯಾವೇ... ನೋಡಿ ನಲಿಯೋಣ' ತಮ್ಮ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada