»   » 'ಮೈ ನೇಮ್ ಈಸ್ ಖಾನ್' ಚಿತ್ರ ವಿಮರ್ಶೆ

'ಮೈ ನೇಮ್ ಈಸ್ ಖಾನ್' ಚಿತ್ರ ವಿಮರ್ಶೆ

By: *ಉದಯರವಿ
Subscribe to Filmibeat Kannada

'ಮೈ ನೇಮ್ ಈಸ್ ಖಾನ್' ಉಗ್ರರ ದಾಳಿ ಮತ್ತು ಅಮಾಯಕರ ಕೊಲೆಯ ಸುತ್ತ ಹೆಣೆಯಲಾದ ಚಿತ್ರ. ಮುಸ್ಲಿಂರೆಲ್ಲಾ ಭಯೋತ್ಪಾದಕರಲ್ಲ. ಅವರಲ್ಲೂ ಬಹಳಷ್ಟು ಮಂದಿಗೆ ಒಳ್ಳೆಯ ಹೃದಯವಿದೆ ಎಂಬ ಸಂದೇಶವನ್ನು 'ಮೈ ನೇಮ್ ಈಸ್ ಖಾನ್' ಸಾರುತ್ತದೆ.

ಮೈ ನೇಮ್ ಈಸ್ ಖಾನ್ ಕತೆ ಏನು?
ರಿಜ್ವಾನ್ ಖಾನ್ (ಶಾರುಖ್ ಖಾನ್) ಹುಟ್ಟಿನಿಂದಲೇ ಬರುವ ಆಸ್ಪರ್ಜರ್ಸ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿರುತ್ತಾನೆ.ಈ ನ್ಯೂನ್ಯತೆಯಿಂದ ರಿಜ್ವಾನ್ ಸಮಾಜದಲ್ಲಿ ಹೊಂದಿಕೊಳ್ಳಲು ಹೆಣಗಾಡುತ್ತಾನೆ. ರಿಜ್ವಾನ್ ತಾಯಿ ತೀರಿಕೊಂಡ ಬಳಿಕ ಆತನ ಸಹೋದರ(ಜಿಮ್ಮಿ ಶೇರ್ ಗಿಲ್) ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯುತ್ತಾನೆ. ಅಲ್ಲಿ ರಿಜ್ವಾನ್ ಸೇಲ್ಸ್ ಮನ್ ಆಗಿ ಕೆಲಸ ಪ್ರಾರಂಭಿಸುತ್ತಾನೆ.

ದೂರವಾಣಿ ಕರೆಯೊಂದರ ಮೂಲಕ ಮಂದಿರಾ (ಕಾಜೋಲ್) ಪರಿಚಯವಾಗುತ್ತಾಳೆ. ಅಲ್ಲಿಂದ ರಿಜ್ವಾನ್ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ. ಮಗುವಿವೊಂದರ ತಾಯಿಯೂ ಆಗಿರುವ ಮಂದಿರಾ ಮತ್ತು ರಿಜ್ವಾನ್ ನಡುವೆ ಪ್ರೇಮಾಂಕುರವಾಗುತ್ತದೆ. ಕುಟುಂಬದಲ್ಲಿನ ವಿರೋಧವನ್ನು ಧಿಕ್ಕರಿಸಿ ಇಬ್ಬರೂ ಮದುವೆಯಾಗುತ್ತಾರೆ. ಅಮೆರಿಕಾದಲ್ಲಿ ಉಗ್ರರ ದಾಳಿ (9/11) ನಡೆದ ಬಳಿಕ ರಿಜ್ವಾನ್ ಬದುಕು ಮೂರಾಬಟ್ಟೆಯಾಗುತ್ತದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲೇ ವಾಸಿಸುವ ಇವರು ಜೀವನೋಪಾಯಕ್ಕಾಗಿ ವ್ಯಾಪಾರವನ್ನು ಮಾಡಿಕೊಂಡಿರುತ್ತಾರೆ. ಅಮೆರಿಕಾದಲ್ಲಿ ಸೆಪ್ಟೆಂಬರ್ 11ರ ದಾಳಿ ನಡೆಯುವವರೆಗೂ ಇವರ ಜೀವನ ಬಂಡಿ ಸುಖಮಯವಾಗಿ ಸಾಗುತ್ತಿರುತ್ತದೆ. ದಾಳಿಯ ನಂತರ ಮುಸ್ಲಿಂ ಜನಾಂಗದ ಬಗೆಗಿನ ಧೋರಣೆ ಬದಲಾಗುತ್ತದೆ. ಮಂದಿರಾ ಹಾಗೂ ರಿಜ್ವಾನ್ ಬದುಕಿನಲ್ಲಿ ಬಿರುಕು ಮೂಡುತ್ತದೆ.ಇಬ್ಬರೂ ದೂರವಾಗುತ್ತಾರೆ.

ಚಿತ್ರದ ಪ್ಲಸ್ ಪಾಯಿಂಟ್
ಹಳಿ ತಪ್ಪ್ಪಿದ ತನ್ನ ಜೀವನನ್ನು ಮತ್ತೆ ಸುಸ್ಥಿಗೆ ತರಲು ರಿಜ್ವಾನ್ ಹೆಣಗಾಡುತ್ತಾನೆ. ಮಂದಿರಾಳನ್ನು ಮರಳಿ ತರಲು ರಿಜ್ವಾನ್ ಪಡಬಾರದ ಪಾಡು ಅನುಭವಿಸುತ್ತಾನೆ. ಮಂದಿರಾ ಹಾಗೂ ರಿಜ್ವಾನ್ ದೂರವಾಗುವ ಸನ್ನಿವೇಶ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ. ಕೊನೆಗೆ ಆತ ಹೇಗೆ ಈ ಸುಳಿಯಿಂದ ಹೊರಗೆ ಬರುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿದರೇನೆ ಚೆಂದ.

ಚಿತ್ರದಲ್ಲಿನ ಪ್ರತಿ ಸನ್ನಿವೇಶವನ್ನು ಮನಸ್ಸಿಗೆ ನಾಟುವಂತೆ ನಿರ್ದೇಶಕ ಕರಣ್ ಜೋಹಾರ್ ತೆರೆಗೆ ತಂದಿದ್ದಾರೆ. ಮಂದಿರಾ ಮತ್ತು ರಿಜ್ವಾನ್ ನಡುವಿನ ಪ್ರೇಮ ಪ್ರಸಂಗಗಳನ್ನು ತುಂಬಾ ನಾಜೂಕಾಗಿ ನಿಭಾಯಿಸಿ ಜಾಣತನ ಮೆರೆದಿದ್ದಾರೆ ಕರಣ್. ಚಿತ್ರದಲ್ಲಿ ಶಾರುಖ್ ನಟನೆ ಅದ್ಬುತವಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ಚಿತ್ರವನ್ನು ಯಾವುದೇ ಅಳುಕಿಲ್ಲದೆ ನೋಡಿ ಆನಂದಿಸಬಹುದು.

ಚಿತ್ರದ ಮೈನಸ್ ಪಾಯಿಂಟ್
ಕರಣ್ ಜೋಹರ್ ಚಿತ್ರಗಳಲ್ಲಿ ಹಾಡುಗಳಿಗೆ ಪ್ರಾಧಾನ್ಯತೆ ಇರುತ್ತದೆ. ಆದರೆ ಮೈ ನೇಮ್ ಈಸ್ ಖಾನ್ ಈ ಮಾತಿಗೆ ಹೊರತಾಗಿದೆ. ಶಂಕರ್ ಎಶನ್ ಲಾಯ್ ಅವರ ಸಂಗೀತದಲ್ಲಿ ಯಾವುದೇ ಹೊಸತನವಿಲ್ಲ. ಚಿತ್ರದಲ್ಲಿ ಪ್ರೇಕ್ಷಕರ ಸಹನೆಯನ್ನು ಕೆಣಕುವ ಸನ್ನಿವೇಶಗಳು ಅಲ್ಲಲ್ಲಿ ನುಸುಳುತ್ತವೆ. ಇವೆಲ್ಲವನ್ನೂ ಸಹಿಕೊಂಡು ಚಿತ್ರವನ್ನು ಒಮ್ಮೆ ನೋಡಬಹುದು.

ತನ್ನ ನ್ಯೂನ್ಯತೆಯ ಕಾರಣ ರಿಜ್ವಾನ್ ಯಾರೊಂದಿಗೂ ಕೈ ಕುಲುಕಲು ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಅಮೆರಿಕಾದ ಅಧ್ಯಕ್ಷರನ್ನು ಭೇಟಿಯಾದಾಗ ಸುನಾಯಾಸವಾಗಿ ರಿಜ್ವಾನ್ ಕೈಕುಲುಕುತ್ತಾನೆ. ಈ ರೀತಿಯ ಎಡವಟ್ಟುಗಳ ಬಗ್ಗೆ ನಿರ್ದೇಶಕರು ಗಮನಕೊಡಬೇಕಾಗಿತ್ತು. ಕರಣ್ ಜೋಹಾರ್ ಈ ರೀತಿಯ ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದರೆ ಚಿತ್ರಕ್ಕೆ ಮತ್ತಷ್ಟು ನೈಜತೆ ಬರುತ್ತಿತ್ತು.

ಚಿತ್ರ: ಮೈ ನೇಮ್ ಈಸ್ ಖಾನ್
ನಿರ್ದೇಶನ: ಕರಣ್ ಜೋಹಾರ್
ನಿರ್ಮಾಪಕರು: ಗೌರಿ ಖಾನ್, ಹಿರೂ ಯಶ್ ಜೋಹರ್
ಸಂಗೀತ: ಶಂಕರ್ ಎಶನ್ ಲಾಯ್
ತಾರಾಗಣ: ಶಾರುಖ್ ಖಾನ್, ಕಾಜಲ್, ಜಿಮ್ಮಿ ಶೇರ್ ಗಿಲ್, ಸೋನಿಯಾ ಜಹನ್ ಮತ್ತು ಜರೀನಾ ವಹಬ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada