»   »  ಅಂಜದಿರು: ಲಾಂಗು,ಮಚ್ಚಿಲ್ಲದೆ ಕೊಚ್ಚುವ ಚಿತ್ರ!

ಅಂಜದಿರು: ಲಾಂಗು,ಮಚ್ಚಿಲ್ಲದೆ ಕೊಚ್ಚುವ ಚಿತ್ರ!

Posted By: Super
Subscribe to Filmibeat Kannada
Prashanth and Shuba Punja
ಚಿತ್ರ: ಅಂಜದಿರು
ತಾರಾಗಣ: ಪ್ರಶಾಂತ್, ಶುಭಾ ಪೂಂಜಾ, ಮುರಳೀಧರ್, ಆದಿ ಲೋಕೇಶ್, ದ್ವಾರಕೀಶ್, ಅವಿನಾಶ್, ರವಿಕಾಳೆ, ಸುಮನ್ ರಂಗನಾಥ್ ಮುಂತಾದವರು.
ಸಂಗೀತ: ಸುಂದರ್ ಸಿ ಬಾಬು
ಸಾಹಿತ್ಯ: ಪಾಂಚಜನ್ಯ
ನಿರ್ದೇಶನ: ಜನಾರ್ದನ್ ಆರ್
ನಿರ್ಮಾಪಕ: ವಾಣಿ ಮುರಳೀಧರ್, ಕೃಷ್ಣೇಗೌಡ

ಅಪಹರಣ, ಸುಲಿಗೆ, ಅತ್ಯಾಚಾರದಂತಹ ಪ್ರಚಲಿತ ಘಟನೆಗಳ ಕಥಾವಸ್ತುವಿನ ಸುತ್ತ ಗಿರಕಿ ಹೊಡೆಯುತ್ತದೆ 'ಅಂಜದಿರು'.ಭೂಗತ ಪಾತಕಿಗಳ ಪಾತ್ರಗಳಿಗೆ ಆದಿ ಲೋಕೇಶ್ ಮತ್ತು ದ್ವಾರಕೀಶ್ ಜೀವ ತುಂಬಿದ್ದಾರೆ. ಬಹಳ ವರ್ಷಗಳ ನಂತರ ದ್ವಾರಕೀಶ್ ಸಂಪೂರ್ಣ ಖಳನಾಯಕನಾಗಿ ನಟಿಸಿರುವುದು ವಿಶೇಷ. ದ್ವಾರಕೀಶ್ ಎಂದರೆ ಸಾಮಾನ್ಯವಾಗಿ ಪ್ರೇಕ್ಷಕರು ಹಾಸ್ಯವನ್ನು ನಿರೀಕ್ಷಿಸುತ್ತಾರೆ. ಆದರೆ ನವರಸಗಳಲ್ಲಿ ಭಯಾನಕ ರಸವನ್ನು ದ್ವಾರಕೀಶ್ ಧಾರಾಳವಾಗಿ ಬಳಸಿರುವುದು ವಿಶೇಷ. ಚಿತ್ರದಲ್ಲಿ ಕಥೆಯೇ ನಿಜವಾದ ಹೀರೋ.

*ರಾಜೇಂದ್ರ ಚಿಂತಾಮಣಿ

ಕಥೆ ಪೊಲೀಸ್ ಕಾಲೋನಿಯಲ್ಲಿ ನಡೆಯುತ್ತದೆ. 'ಒರಟ' ಪ್ರಶಾಂತ್ ಚಿತ್ರದ ಪ್ರಥಮ ನಾಯಕ. ಚಿತ್ರದ ನಿರ್ಮಾಪಕ ಕೃಷ್ಣೇಗೌಡರ ಮಗ ಮುರಳೀಧರ್ ಎರಡನೇ ನಾಯಕ. ಶುಭಾ ಪೂಂಜಾ ಪೊಲೀಸ್ ಕಾಲೋನಿಯಲ್ಲಿನ ಬೆಡಗಿ. ಮುರಳೀಧರ್ ತಂಗಿ, ಶ್ರೀನಿವಾಸ ಮೂರ್ತಿ ಮಗಳು. ಅದೇ ಕಾಲೋನಿಯ ಮತ್ತೊಂದು ಪೊಲೀಸ್ ಕುಟುಂಬ ಪ್ರಶಾಂತ್ , ಕೃಷ್ಣೇಗೌಡರದ್ದು. ರವಿಕಾಳೆ, ಅವಿನಾಶ್,ಬಿ.ವಿ.ರಾಜಾರಾಂ, ಪ್ರಶಾಂತ್ ಪೊಲೀಸ್ ಅಧಿಕಾರಿಗಳು. ಇದಿಷ್ಟು ಚಿತ್ರದ ಪಾತ್ರ ಪರಿಚಯ.

ನಾಯಕ, ನಾಯಕಿ ಓಕೆನಾ?
ಗರಿಗರಿ ಪೊಲೀಸ್ ದಿರಿಸು ತೊಟ್ಟ ಪ್ರಶಾಂತ್ ಚಿತ್ರದಲ್ಲಿ ಒರಟನಾಗಿ ಕಾಣುವುದಿಲ್ಲ! ಯಾವುದೋ ಪುಢಾರಿಯೊಬ್ಬನ ಪ್ರಭಾವದಿಂದ ಪೊಲೀಸ್ ಇನ್ಸ್ ಪೆಕ್ಟರ್ ಕೆಲಸ ಗಿಟ್ಟಿಸುತ್ತಾನೆ. ಅವನ ಗೆಳೆಯ ಮುರಳೀಧರ್ ಕಷ್ಟಪಟ್ಟು ಓದಿದರೂ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆ ಸಿಕ್ಕುವುದಿಲ್ಲ. ಮನನೊಂದ ಅವನು ದಾರಿತಪ್ಪುತ್ತಾನೆ. ಭೂಗತ ಪಾತಕಿಗಳ ಕೈಗೊಂಬೆಯಾಗುತ್ತಾನೆ. ಚಿತ್ರದಲ್ಲಿ ಪ್ರೀತಿ, ಪ್ರೇಮ...ಮರ ಸುತ್ತುವ ಸನ್ನಿವೇಶಗಳಿಗಿಂತಲೂ ಸ್ನೇಹ ಸಂಬಂಧಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇದೇ ಮೊದಲ ಬಾರಿಗೆ ಕ್ಯಾಮೆರಾಗೆ ಮುಖ ಕೊಟ್ಟಿರುವ ಮುರಳೀಧರ್ ನಟನೆ ಚೆನ್ನಾಗಿದೆ.

ಯಾರ್ಯಾರ ನಟನೆ ಹೇಗಿದೆ?

ಭಾವುಕ ಸನ್ನಿವೇಶಗಳಿಗಿಂತ ಹೊಡಿ ಬಡಿ ದೃಶ್ಯಗಳಲ್ಲಿ ಪ್ರಶಾಂತ್ ನಟನೆ ಗಮನ ಸೆಳೆಯುತ್ತದೆ.ಕೆಳ ಮಧ್ಯಮ ವರ್ಗದ ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಶುಭಾಪೂಂಜಾ ಕಾಣಿಸುತ್ತಾರೆ. ಚಿತ್ರದಲ್ಲಿ ಅವರದು ಸೈಲೆಂಟ್ ಹುಡುಗಿಯ ಪಾತ್ರ.ದ್ವಾರಕೀಶ್, ಶ್ರೀನಿವಾಸಮೂರ್ತಿ, ರವಿಕಾಳೆ, ಅವಿನಾಶ್, ಕೃಷ್ಣೇಗೌಡ, ಪದ್ಮಜಾರಾವ್, ಬಿ.ವಿ.ರಾಜಾರಾಂ, ಸುಮನ್ ರಂಗನಾಥ್...ಹೀಗೆ ಕಲಾವಿದರ ದೊಡ್ಡ ದಂಡನ್ನೇ ಒಳಗೊಂಡಿದೆ ಅಂಜದಿರು. ಇವರ ನಟನೆಯ ಬಗ್ಗೆ ಕೆಮ್ಮುವಂಗೂ ಇಲ್ಲ ಸೀನುವಂಗೂ ಇಲ್ಲ.

ಸಂಗೀತ,ಛಾಯಾಗ್ರಹಣ
ಎರಡುವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಕದಲದಂತೆ ಮಾಡುವುದು ಸುರೇಂದರ್ ಬಾಬು ಅವರ ಸಂಗೀತ. ತೆರೆಯ ಮೇಲಿನ ಖಳ ಪಾತ್ರಗಳಿಗೆ ಸುರೇಂದರ್ ಹಿನ್ನೆಲೆ ಸಂಗೀತ ಹೃದಯ ಕಲಕುತ್ತದೆ. ಚಿತ್ರದಲ್ಲಿನ ಹಾಡುಗಳು ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಮನತಣಿಸುತ್ತವೆ. ಸುಂದರನಾಥ್ ಸುವರ್ಣ ಛಾಯಾಗ್ರಹಣ ಬಗ್ಗೆ ಎರಡು ಮಾತಿಲ್ಲ. ಅಪಹರಣ ಮಾಡುವ ದೃಶ್ಯದಲ್ಲಿ ಇಡೀ ಬೆಳ್ಳಿಪರದೆಯೇ ಅಲುಗಾಡಿದಂತಾಗುತ್ತದೆ. ಇದು ಸಂಕಲನ ದೋಷವೋ, ಕ್ಯಾಮೆರಾ ದೋಷವೋ ನಿರ್ದೇಶಕರೇ ಹೇಳಬೇಕು.

ನಿರ್ದೇಶನ ಹೇಗಿದೆ?

ಅನಾವಶ್ಯಕ ಪ್ರೇಮ ಸನ್ನಿವೇಶಗಳನ್ನು ಸೃಷ್ಟಿಸದೆ, ಲಾಂಗು ಮಚ್ಚುಗಳಿಗೆ ಹೆಚ್ಚು ಕೆಲಸ ಕೊಡದೆ ಚಿತ್ರಕಥೆಗೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ ನಿರ್ದೇಶಕ ಆರ್. ಜನಾರ್ಧನ್. ಕಥೆಯಲ್ಲಿ ಲವಲವಿಕೆಯಿದೆ, ನಿರೂಪಣೆಯಲ್ಲಿ ವೇಗವಿದೆ. ಕಥೆಯ ವೇಗ ಇನ್ನೇನು ಕಡಿಮೆಯಾಗುತ್ತದೆ ಎನ್ನುವಾಗ ಸುಮನ್ ರಂಗನಾಥ್ ಐಟಂ ಹಾಡು ಅದನ್ನು ಹೊಸಕಿ ಹಾಕುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕರು ತೇಪೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ನಿಜಕ್ಕೂ ಗೆಲ್ಲುವುದು ಕಥೆ.


ಇತ್ತೀಚಿನ ಚಿತ್ರಗಳ ವಿಮರ್ಶೆ:

ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ
ನಮ್ 'ಆಪ್ತಮಿತ್ರ' ಯಜಮಾನ್ರು
ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada