»   »  ಕಾರಂಜಿ: ಅಲ್ಲಲ್ಲಿ ಎಳಸು ಒಟ್ಟಾರೆ ಸೊಗಸು

ಕಾರಂಜಿ: ಅಲ್ಲಲ್ಲಿ ಎಳಸು ಒಟ್ಟಾರೆ ಸೊಗಸು

Posted By:
Subscribe to Filmibeat Kannada

ನಮ್ಮ ಕನ್ನಡಿಗರು ಈ ರಾಕ್-ಬ್ಯಾಂಡ್ ಸಂಸ್ಕೃತಿಯನ್ನು ಒಪ್ಪಲ್ಲ ಕಣೋ... ಹೀಗೆ ಒಬ್ಬ ಗೆಳೆಯ ಇನ್ನೊಬ್ಬನಿಗೆ ಹೇಳುತ್ತಾನೆ.ಅದಾಗಲೇ ಸಂಗೀತ ಸ್ಪರ್ಧೆಯಲ್ಲಿ ಅವರ ಭಾಗವಹಿಸುವ ಕನಸಿನ ಸೌಧ ನೆಲಸಮವಾಗಿರುತ್ತದೆ. ಅವರೆಲ್ಲಾ ಪಂಚ ಪಾಂಡವರು. ಜಾತಿ, ಕುಲ, ಗೋತ್ರ, ಗಾತ್ರ ಒಬ್ಬರಿಗೊಬ್ಬರಿಗೆ ಸಂಬಂಧವಿಲ್ಲ. ಆದರೂ ಅವರು ಗೆಳೆಯರು. ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಮಹಾನ್ ಕನಸು ಹೊತ್ತು, ಕಾರಂಜಿ ಹೆಸರಿನ ತಂಡ ಕಟ್ಟಿಕೊಂಡಿರುತ್ತಾರೆ.

*ದೇವಶೆಟ್ಟಿ ಮಹೇಶ್

ಇಡೀ ಕತೆ ಈ ಹುಡುಗರ ಸುತ್ತ ಸುತ್ತುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಲೇಡಿಕಾರಂಜಿ. ಎಲ್ಲ ಸೇರಿ ಕಾಂಪಿಟೇಶನ್‌ನಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಕ್ಲೈಮ್ಯಾಕ್ಸ್‌ವರೆಗೂ ತಳ್ಳುತ್ತಾರೆ. ಈ ಮಧ್ಯೆ ನಾಯಕಿಯ ಊರಿಗೆ ಬರುತ್ತಾರೆ. ಅಲ್ಲೊಬ್ಬ ಗಾನಕೋಗಿಲೆ ಇರುತ್ತಾನೆ. ಅವನನ್ನೇ ಗುರುವಾಗಿ ಸ್ವೀಕರಿಸಿ, ಜಾನಪದ ಸೊಗಡಿನ ಹಾಡಿಗೆ ಪಾಪ್/ರಾಕ್/ಬ್ಯಾಂಡ್ ಸಂಗೀತ ಬೆರೆಸಿ, ಹೊಸ ಮಾದರಿಯಲ್ಲಿ ಹಾಡಲು ಶುರುಮಾಡುತ್ತಾರೆ. ಹಂತಹಂತವಾಗಿ ಬೆಳೆದು ಕೊನೆಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಅದೇ ಹೊತ್ತಿಗೆ ಗುರುಗಳು ಇಹಲೋಕದ ಯಾತ್ರೆಗೆ ಗುಡ್‌ಬೈ ಹೇಳುತ್ತಾರೆ.

ಪಂಚಪಾಂಡವರಲ್ಲಿ ಬಿರುಕು ಮೂಡುತ್ತದೆ. ಕೊನೆಗೂ ಗೆಲ್ಲುತ್ತಾರಾ? ಅದೇ ಕಾರಂಜಿಯ ಕ್ಲೈಮ್ಯಾಕ್ಸ್... ಇಲ್ಲಿ ವಿಜಯ ರಾಘವೆಂದ್ರ ಹೊರತುಪಡಿಸಿ ಎಲ್ಲಾ
ಹೊಸಬರು. ಐದು ಮಂದಿ ಐದು ಥರದ ಸ್ವಭಾವ. ಎಲ್ಲರನ್ನೂ ಒಂದೆಡೆ ಸೇರಿಸಿ, ಕಾರಂಜಿ ಕಲರವ ಮೂಡಿಸಲು ಮೊದಲ ನಾಯಕ ಮುಂದಾಗುತ್ತಾನೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಅಸ್ತಿತ್ವ ನೀಡಿದ್ದಾರೆ ನಿರ್ದೇಶಕ ಶ್ರೀಧರ್. ಶ್ರೀಧರ್ ಮಟ್ಟಿಗೆ ಮೆಚ್ಚಲೇಬೇಕಾದ ಅಂಶ ಎಂದರೆ ಆಯ್ಕೆ ಮಾಡಿಕೊಂಡ ಕತೆ. ಇಡೀ ಕತೆಯನ್ನು ನಿರೂಪಿಸಿದ ಪರಿ. ಹಾಗಂತ ಚಿತ್ರಕತೆ ಚೆನ್ನಾಗಿದೆ ಎಂದರೆ ತಪ್ಪಾಗುತ್ತದೆ. ಅದು ಅಲ್ಲಲ್ಲಿ ಎಳಸು ಎಳಸು. ಇನ್ನೂ ಏನೋ ಒಂದು ಅಂಶಕಡಿಮೆ ಎನಿಸುತ್ತಿದೆ. ಸಂಭಾಷಣೆಯಲ್ಲಿ ಪಂಚ್ ಬೇಕಿತ್ತು. ಕಾಮಿಡಿಯ ಅಂಶ 60 ಭಾಗ ಕಡಿಮೆ ಇದೆ. ಅಲ್ಲಲ್ಲಿ ಆಕಳಿಕೆ, ತೂಕಡಿಕೆ...

ವಿಜಯ ರಾಘವೇಂದ್ರ ನಟನೆಯಲ್ಲಿ ಐದು ಪೈಸೆ ಮೋಸವಿಲ್ಲ. ಹಾಡುವಾಗಲಂತೂ ತಲ್ಲೀನತೆ ಎದ್ದುಕಾಣುತ್ತದೆ. ನಂಜುಂಡ ಕೊಂಚ ಹಾಸ್ಯ ಮಾಡಿದರೂ ಅದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಮಿರಿಂಡಾ ಬ್ರದರ್ಸ್ ಪ್ರಸನ್ನ ಪ್ರಮೋದ್ ನಟನೆಗಿಂತ ಬಿಲ್ಡಪ್ ಕೊಡುವುದೇ ಹೆಚ್ಚು. ಅರುಣ್ ಸಾಗರ್ ಥರ ಇರುವ ಇನ್ನೊಬ್ಬ ಜಡೆ ಆಡಿಸುವುದಷ್ಟೇ ನಟನೆ ಎಂದುಕೊಂಡರೆ ಈಗಿಂದಲೇ ತಿದ್ದಿಕೊಳ್ಳಲಿ.

ನಾಯಕಿ ಗೌರಿ ಕಾರ್ನಿಕ್ ನಕ್ಕಾಗ, ದೂರದಿಂದ ನಿಂತು ಸ್ಮೈಲ್ ಕೊಟ್ಟಾಗ ಮಾತ್ರ ಮುದ್ದಾಗಿ ಕಾಣುತ್ತಾಳೆ. ನಟನೆಯಲ್ಲಿ ನೀರಮೇಲಿನ ಗುಳ್ಳೆ... ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಭಾವಪೂರ್ಣ ನಟನೆಯಲ್ಲಿ ಜೀವಕಳೆ ಇದೆ. ಸುಧಾ ಬೆಳವಾಡಿ ಸುಮ್ಮನಿದ್ದೇ ನೆನಪಿನಲ್ಲಿ ಉಳಿಯುತ್ತಾರೆ. ವೀರಸಮರ್ಥ್ ಸಂಗೀತ ಪ್ಲಸ್ ಪಾಯಿಂಟ್. ಈ ದಿನ ಹೊಸತಾಗಿದೆ ಹಾಡಂತೂ ನವ ನವೀನ. ಉಳಿದಂತೆ ಮೂರು ಹಾಡುಗಳಲ್ಲಿ ಧಮ್/ರಿದಮ್ ಎರಡರ ಸಮ್ಮಿಶ್ರ ಸರಕಾರ. ಛಾಯಾಗ್ರಹಣ ಹಾಡಿನ ಚಿತ್ರೀಕರಣದಲ್ಲಿ ಇಷ್ಟವಾಗುತ್ತದೆ. ಕಾರಂಜಿ ತಂಡ ಹಳ್ಳಿಗೆ ಹೋದಾಗ ಕಂಡುಬರುವ ದೃಶ್ಯ ಮನಮೋಹಕ ಮಿಡಿತ. ನೃತ್ಯ ಸಂಯೋಜನೆಯಲ್ಲಿ ಲವಲವಿಕೆಯಿದೆ. ಎಲ್ಲ ಇತಿ ಮಿತಿಗಳ ನಡುವೆ ಒಮ್ಮೆ ನೋಡಬಹುದು.

ಚೊಚ್ಚಲ ನಿರ್ದೇಶನದಲ್ಲಿ ಶ್ರೀಧರ್ ಗೆದ್ದಿದ್ದಾರೆ. ಮುಂದೆ ಇನ್ನಷ್ಟು ಹೊಸ ಸಾಧ್ಯತೆ ನಿರೀಕ್ಷಿಸಿ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಂಡರೆ ಉಳಿಯುತ್ತಾರೆ. ಉಳಿಸಿಕೊಳ್ಳುವುದನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಾ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada