»   » ಚಿತ್ರ ವಿಮರ್ಶೆ:ಶಿವಣ್ಣನ 'ದೇವರು ಕೊಟ್ಟ ತಂಗಿ'

ಚಿತ್ರ ವಿಮರ್ಶೆ:ಶಿವಣ್ಣನ 'ದೇವರು ಕೊಟ್ಟ ತಂಗಿ'

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಒಂದೂರಲ್ಲಿ ಅಣ್ಣ ತಂಗಿ ಸೆಂಟಿಮೆಂಟು, ಪಂಚಾಯಿತಿ ಕಟ್ಟೆ ಯಲ್ಲಿ ಪಟೇಲರ ಕಾಂಡಿಮೆಂಟು, ಒಂದಷ್ಟು ಕಾಮಿಡಿ ಟ್ರೀಟ್‌ಮೆಂಟು,ಅಲ್ಲಲ್ಲಿ ಉಪ್ಪು- ಖಾರಾ ಡಿಯೋಡ್ರೆಂಟು, ಕಣ್ಣೀರಿನ ಕಟ್ಟೆಗೆ ಜಲ್ಲಿ ಸಿಮೆಂಟು...! ಇದು ಸಾಯಿಪ್ರಕಾಶ್ ಸೆಂಟಿಮೆಂಟ್ ಸಿನಿಮಾದಲ್ಲಿ ಕಾಣಬಹುದಾದ ದೃಶ್ಯ Whyಭವಗಳು.

ಅದು ಅವರ ಚಿತ್ರಗಳಲ್ಲಿ ಮತ್ತೆ ಮತ್ತೆ ಮರುಕಳಿಸುವುದು ಯಾಕೆ ಎನ್ನುವುದಕ್ಕಿಂತ, ಅದು ಸಾಯಿ ಪ್ರಕಾಶ್ ಚಿತ್ರಗಳಲ್ಲಿ ಮಾಮೂಲು ಎನ್ನಬಹುದು. ಅದು ದೇವರು ಕೊಟ್ಟ ತಂಗಿ ಚಿತ್ರದಲ್ಲೂ ಮರು-ಪ್ರಸಾರವಾಗಿದೆ. ತಂಗಿಗಾಗಿ ಮರುಗುವ ಅಣ್ಣ, ಅಣ್ಣನಿಗಾಗಿ ಕೊರಗುವ ತಂಗಿ, ತವರಿಗೆ ಬಾ ಎನ್ನುವ ಅಣ್ಣಯ್ಯ, ತವರಿನ ತೇರಲ್ಲಿ ಕಣ್ಣೀರಿನ ಕಂಬಳಿ ಹೊದ್ದು ಮಲಗುವ ತಂಗ್ಯವ್ವ...

ಎಂದಿನಂತೆ ಶಿವಣ್ಣನ ನಟನೆ ಅಚ್ಚುಕಟ್ಟು ಕಟ್ಟುನಿಟ್ಟು. ಎಲ್ಲೆಲ್ಲೂ ನಿಟ್ಟುಸಿರು, ಹಚ್ಚ ಹಸಿರು. ಅಣ್ಣನಿಗೆ ತಕ್ಕ ತಂಗಿ ಮೀರಾ ಜಾಸ್ಮಿನ್. ರಾಧಿಕಾ ಇಲ್ಲದೇ ಖಾಲಿ ಹೊಡೆಯುತ್ತಿದ್ದ ಸಾಯಿ ತವರನ್ನು ಮೀರಾ ಶ್ರೀಮಂತಗೊಳಿಸಿದ್ದಾರೆ. ನಾಯಕಿ ಮೋನಿಕಾ ಮುದ್ದಾಗಿ ನಗುತ್ತಾಳೆ, ಶಿವಣ್ಣನ ಜತೆ ಜಕ್ಕನಕ್ಕ ಜಕ್ಕನಕ್ಕ ಎಂದು ಜಿಗಿಯುತ್ತಾಳೆ. ನಟನೆಗೆ ಅಲ್ಲಿ ಹೆಚ್ಚು ಅವಕಾಶವಿಲ್ಲ, ಏಕೆಂದರೆ ಚಿತ್ರದ ಕೇಂದ್ರಬಿಂದು ಗಾಡ್ ಗಿಫ್ಟ್ ಸಿಸ್ಟರ್!

ರಮೇಶ್ ಭಟ್, ಅವಿನಾಶ್ ನಟನೆ ಬಗ್ಗೆ ನೋ ಕಾಮೆಂಟ್ಸ್. ಸುಮಿತ್ರಾ, ಹೇಮಾ ಚಧರಿ, ವಾಸು ಎಲ್ಲರ ಆಕ್ಟಿಂಗ್ ಅಷ್ಟಕ್ಕಷ್ಟೇ. ಸಾಧು-ಲಕ್ಷ್ಮಿದೇವಿ ಹದಿನೈದು ವರ್ಷದ ಹಿಂದಿನ ಕಾಮಿಡಿ ಮಾಡಿದ್ದಾರೆ. ಹಂಸಲೇಖ ಸಂಗೀತದಲ್ಲಿ 'ಲವಲವಿಕೆ" ಇಲ್ಲ. ಹಳೇ ಟ್ಯೂನ್‌ಗಳಿಗೆ ಸುಣ್ಣ ಬಣ್ಣ ಬಳಿದಿದ್ದಾರೆ.

ಛಾಯಾಗ್ರಹಣ ಸಾಮಾನ್ಯ.ಭೂತಯ್ಯನ ಮಗ ಅಯ್ಯು ಚಿತ್ರದ ಪ್ರವಾಹ ಮಾದರಿಯನ್ನು ಇಲ್ಲಿ ರಿಮೇಕ್ ಮಾಡಲಾಗಿದೆ. ಆದರೆ ಗ್ರಾಫಿಕ್ ಬಳಕೆ ಕೈ ಕೊಟ್ಟಿದೆ. ಒಟ್ಟಾರೆ ಸಾಯಿ, ಜಮಾನದ ಕತೆಯನ್ನು ಮಾನದಂಡ ಮಾಡಿಕೊಂಡು, ದೇವರು ಕೊಟ್ಟ ತಂಗಿಗೆ ಉದ್ದಂಡ ನಮಸ್ಕಾರ ಹಾಕಿದ್ದಾರೆ. ಡೈ-ರೆಕ್ಟ್ರಿಗೆ ಶರಣು ಶರಣಾರ್ಥಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada